ಸುಳ್ಯ: ಸುಳ್ಯ ನಗರದ ರಸ್ತೆಯಲ್ಲಿ ಟ್ರಾಫಿಕ್ ಜಾಮ್ ಜಾಮ್.. ನಗರದಲ್ಲಿ ಸೋಮವಾರ ಮಧ್ಯಾಹ್ನದ ಬಳಿಕ ಭಾರೀ ರಶ್ ಕಂಡು ಬಂದಿದ್ದು ರಸ್ತೆಯಲ್ಲಿ ವಾಹನಗಳ ಸರತಿ ಸಾಲು ಕಂಡು ಬಂದಿದೆ. ಇದರಿಂದ ವಾಹನ ಸವಾರರು ಪರದಾಡುವ ಪರಿಸ್ಥಿತಿ ನಿರ್ಮಾಣಗೊಂಡಿದೆ. ಸೋಮವಾರ ಆದ ಕಾರಣ ತಾಲೂಕಿನ ವಿವಿಧ ಭಾಗಗಳಿಂದ ಭಾರೀ ಸಂಖ್ಯೆಯಲ್ಲಿ ವಾಹನಗಳು ಪೇಟೆಗೆ ಆಗಮಿಸಿದೆ. ಜೊತೆಯಲ್ಲಿ ರಾಷ್ಟ್ರೀಯ ಹೆದ್ದಾರಿಯಲ್ಲಿ
ಸಂಚರಿಸುವ ಬೃಹತ್ ಗಾತ್ರದ ವಾಹನಗಳು ಸೇರಿದಂತೆ ನೂರಾರು ವಾಹನಗಳಿಂದ ಸುಳ್ಯ ಪೇಟೆ ತುಂಬಿ ತುಳುಕಿದೆ.ನಗರದಲ್ಲಿ ನೂರಾರು ವಾಹನಗಳ ಉದ್ದನೆಯ ಸಾಲು ಕಂಡು ಬಂದಿದೆ. ಕಿರಿದಾದ
ರಸ್ತೆಯಲ್ಲಿ ಎರಡೂ ಬದಿ ನೂರಾರು ವಾಹನಗಳ ಸಾಲು ಸಾಲು ಟ್ರಾಫಿಕ್ ಜಾಮ್ ಸೃಷ್ಠಿಸುತ್ತಿದೆ. ಮುಂದಕ್ಕೆ ಚಲಿಸಲಾಗದೆ ಹಲವು ಹೊತ್ತು ವಾಹನಗಳು ಜಾಮ್ನಲ್ಲಿ ಸಿಲುಕಿಕೊಂಡಿತ್ತು. ಕಳೆದ ಕೆಲವು ವಾರದಲ್ಲಿ

ಬಹುತೇಕ ದಿನಗಳಲ್ಲಿ ಬೆಳಿಗ್ಗೆ ಮತ್ತು ಸಂಜೆಯ ವೇಳೆಗೆ ಈ ರೀತಿ ಟ್ರಾಫಿಕ್ ಜಾಮ್ ಕಂಡು ಬರುತ್ತಿದೆ. ಅಲ್ಲದೆ ಪ್ರತಿ ದಿನ ಬೆಳಿಗ್ಗೆ ಮತ್ತು ಸಂಜೆ ಶಾಲಾ ಸಮಯದಲ್ಲಂತು ಟ್ರಾಫಿಕ್ ಜಾಮ್ ಬವಣೆ ಹೇಳ ತೀರದು. ಸೋಮವಾರ ಹಗಲಿನ ವೇಳೆ ನಿರಂತರ ವಾಹನಗಳ ರಶ್ ಕಂಡು ಬಂದಿತ್ತು. ನಗರದ ರಸ್ತೆ ಫುಲ್ ಜಾಮ್ ಆಗಿತ್ತು.
ಅರ್ಧಂಬರ್ಧ ಕಾಮಗಾರಿಯಿಂದ ಬಿಗಡಾಯಿಸಿದ ಸಮಸ್ಯೆ:
ಸುಳ್ಯ ನಗರದಲ್ಲಿ ಕುಡಿಯುವ ನೀರಿನ ಯೋಜನೆಯ ಪೈಪ್ ಲೈನ ಕಾಮಗಾರಿ ನಡೆಯುತ್ತಿರುವುದು ಕಳೆದ ಹಲವು ದಿನಗಳಿಂದ ಟ್ರಾಫಿಕ್ ಸಮಸ್ಯೆ ಬಿಗಡಾಯಿಸಲು ಕಾರಣವಾಗುತಿದೆ. ರಸ್ತೆ ಬದಿಯಲ್ಲಿ ಪೈಪ್ ಲೈನ್ ಕಾಮಗಾರಿ ನಡೆಸಿ ಹೊಂಡ ಸರಿಯಾಗಿ ಮುಚ್ಚದೆ ಇರುವುದು, ಕೆಲವೆಡೆ ಅರ್ಧಂಬರ್ಧ ಕಾಮಗಾರಿ ನಡೆಸಿರುವುದು ಸಮಸ್ಯೆಗೆ ಕಾರಣವಾಗಿದೆ. ಪೈಪ್ ಅಳವಡಿಸಿ ಮಣ್ಣು ಮುಚ್ಚಲಾಗಿದ್ದರೂ ಸಮರ್ಪಕವಾಗಿ ಮುಚ್ಚಿ ಸಮತಟ್ಟು ಮಾಡಿಲ್ಲ.

ಕೆಲವೆಡೆ ಇನ್ನೂ ಪೈಪ್ ಲೈನ್ ಕಾಮಗಾರಿ ನಡೆಸಿ ಹೊಂಡ ಮುಚ್ಚಿಲ್ಲ.ಇದರಿಂದ ಅಲ್ಲಿ ವಾಹನ ಸಂಚರಿಸಲು, ಪಾರ್ಕ್ ಮಾಡಲು ಸಾಧ್ಯವಾಗುತ್ತಿಲ್ಲ. ಇದರಿಂದ ರಸ್ತೆಯಲ್ಲಿ ವಾಹನ ದಟ್ಟಣೆಗೆ ಕಾರಣವಾಗುತಿದೆ.ಮಾತ್ರವಲ್ಲದೆ ನಗರ ಪೂರ್ತಿ ಧೂಳುಮಯವಾಗಿದೆ.
ಎರಡೂ ಬದಿ ಪಾರ್ಕಿಂಗ್ನಿಂದ ಟ್ರಾಫಿಕ್ ಕಿರಿಕಿರಿ:
ಸುಳ್ಯ ನಗರದಲ್ಲಿ ವಾಹನ ಪಾರ್ಕಿಂಗ್ ಮಾಡಲು ಸೂಕ್ತವಾದ ಪ್ರತ್ಯೇಕ ಪಾರ್ಕಿಂಗ್ ಸ್ಥಳ ಇಲ್ಲದ ಕಾರಣ ರಸ್ತೆಯ ಬದಿಯಲ್ಲಿಯೇ ವಾಹನ ಪಾರ್ಕಿಂಗ್ ಮಾಡಲಾಗುತ್ತದೆ. ರಸ್ತೆಯಲ್ಲಿ ವಾಹನ ದಟ್ಟಣೆ ಕಡಿಮೆ ಮಾಡಲು ಒಂದು ದಿನ ರಸ್ತೆಯ ಬಲ ಬದಿ, ಮರುದಿನ ರಸ್ತೆಯ ಎಡ ಬದಿಯಲ್ಲಿ ವಾಹನ ಪಾರ್ಕಿಂಗ್ ಮಾಡಬೇಕು ಎಂದು ಪೊಲೀಸ್ ಇಲಾಖೆ ಹಿಂದೆಯೇ ಕಾನೂನು ರೂಪಿಸಿತ್ತು.ಅದೇ ರೀತಿ
ಮುಂದುವರಿಯುತಿದೆ. ಇದನ್ನು ಸರಿಯಾಗಿ ಪಾಲನೆ ಮಾಡಿದರೆ ನಗರದ ವಾಹನ ದಟ್ಟಣೆ ನಿಯಂತ್ರಣ ಮಾಡಲು ಸುಲಭವಾಗುತ್ತದೆ. ಆದರೆ

ಕೆಲವೆಡೆ ವಾಹನ ಸವಾರರು ಎಲ್ಲೆಂದರಲ್ಲಿ ವಾಹನ ಪಾರ್ಕ್ ಮಾಡುವುದರಿಂದ ಮತ್ತು ಎಗ್ಗಿಲ್ಲದೆ ಎರಡೂ ಬದಿ ಪಾರ್ಕಿಂಗ್ ಮಾಡುವುದರಿಂದ ನಗರದಲ್ಲಿ ತೀವ್ರ ಟ್ರಾಫಿಕ್ ಸಮಸ್ಯೆಗೆ ಕಾರಣವಾಗುತ್ತಿದೆ.ಬೆಳಿಗ್ಗೆ ಮತ್ತು ಸಂಜೆಯ ಹೊತ್ತು ಎರಡೂ ಬದಿಯಲ್ಲಿ ವಾಹನ ಪಾರ್ಕಿಂಗ್ ಮಾಡುವುದು.ಕೆಲವು ಘನ ವಾಹನಗಳು ಹಗಲಿನ ಹೊತ್ತು ರಸ್ತೆ ಬದಿಯಲ್ಲಿ ನಿಲ್ಲಿಸಿ ಅನ್ ಲೋಡ್ ಮಾಡುವುದರಿಂದ ಸರಾಗವಾದ ವಾಹನ ಸಂಚಾರಕ್ಕೆ ತೊಡಕಾಗುತಿದೆ ಎಂದು ಸಾರ್ವಜನಿಕರು ದೂರುತ್ತಾರೆ.ಕೆಲವು ವಾಹನ ಸವಾರರ ಅತಿವೇಗದ ಮತ್ತು ಅಜಾಗರುಕತೆಯ ವಾಹನ ಚಾಲನೆಯೂ ಭಯ ಹುಟ್ಟಿಸುತ್ತಿದೆ.

“ನಗರದಲ್ಲಿ ರಸ್ತೆ ಬದಿಯಲ್ಲಿ ಪೈಪ್ ಲೈನ್ ಕಾಮಗಾರಿ ನಡೆಸಿ ಹೊಂಡಗಳನ್ನು ಸರಿಯಾಗಿ ಮುಚ್ಚದ ಕಾರಣ ಏರು ತಗ್ಗು ಆಗಿ ರಸ್ತೆ ಬದಿ ಪಾರ್ಕಿಂಗ್ ಸಮಸ್ಯೆ ಮತ್ತು ವಾಹನ ದಟ್ಟಣೆ ಉಂಟಾಗುತಿದೆ. ಆದುದರಿಂದ ಪೈಪ್ಲೈನ್ಗೆ ತೆಗೆದ ಹೊಂಡ ಸರಿಯಾಗಿ ಮುಚ್ಚಬೇಕು ಮತ್ತು ಎರಡೂ ಕಡೆ ಪಾರ್ಕಿಂಗ್ ಮಾಡುವುದಕ್ಕೆ ಕಡಿವಾಣ ಹಾಕಬೇಕು
-ಶರೀಫ್ ಕಂಠಿ
ನಗರ ಪಂಚಾಯತ್ ಸದಸ್ಯ
ಸುಳ್ಯ
