ಸುಳ್ಯ:ಸುಳ್ಯ ತಾಲೂಕು ರಚನೆಯಾಗಿ 60 ವರ್ಷ ತುಂಬಿದ ಹಿನ್ನಲೆಯಲ್ಲಿ ಸುಳ್ಯ 60 ಸಂಭ್ರಮಾಚರಣೆ ಜ.21ರಂದು ಸುಳ್ಯದ ಜಾನಕಿ ವೆಂಕಟ್ರಮಣ ಗೌಡ ಸಭಾಭವನದಲ್ಲಿ ನಡೆಯಲಿದೆ ಎಂದು ಷಷ್ಟ್ಯಬ್ಧ ಆಚರಣಾ ಸಮಿತಿ ಅಧ್ಯಕ್ಷೆ ಶಾಸಕಿ ಭಾಗೀರಥಿ ಮುರುಳ್ಯ ತಿಳಿಸಿದ್ದಾರೆ.ಸುಳ್ಯ ಪ್ರೆಸ್ ಕ್ಲಬ್ನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು 1965 ಡಿಸೆಂಬರ್ 17 ರಂದು ಆಗಿನ ಮೈಸೂರು ರಾಜ್ಯದ ಮುಖ್ಯಮಂತ್ರಿ ನಿಜಲಿಂಗಪ್ಪರವರು ಸುಳ್ಯಕ್ಕೆ
ಆಗಮಿಸಿ ಸುಳ್ಯ ತಾಲೂಕನ್ನು ಉದ್ಘಾಟಿಸಿದ್ದರು.ಬಳಿಕ ಎಲ್ಲಾ ಇಲಾಖೆಗಳ ಕಚೇರಿಗಳು ಸ್ಥಾಪನೆಯಾಗಿ ಪೂರ್ಣ ಪ್ರಮಾಣದ ತಾಲೂಕು ಕೇಂದ್ರವಾಗಿ ರೂಪುಗೊಂಡು ಜನರಿಗೆ ಸರಕಾರಿ ಕೆಲಸ ಕಾರ್ಯಗಳಿಗೆ ಅನುಕೂಲವಾಯಿತು.ಸುಳ್ಯ ಹಲವಯ ಭಾಷೆ ಮತ್ತು ಸಂಸ್ಕೃತಿಯ ನೆಲ ಹಾಗೂ ಐತಿಹಾಸಿಕ ಹಿನ್ನಲೆಯಿರುವ ಕೃಷಿ ಪ್ರಧಾನ ಪ್ರದೇಶವಾಗಿ ತನ್ನದೇ ಆದ ವೈಶಿಷ್ಟ್ಯವನ್ನು ಹೊಂದಿದೆ. ಕೆವಿಜಿ ವಿದ್ಯಾಸಂಸ್ಥೆಗಳಿಂದಾಗಿ ದೇಶದಲ್ಲೇ ಗುರುತಿಸಲ್ಪಡುವ ತಾಲೂಕಾಗಿದ್ದು ಇದೀಗ ತಾಲೂಕಿಗೆ 60 ವರ್ಷ ಪೂರೈಸುವ ಈ ಸಂದರ್ಭದಲ್ಲಿ ತಾಲೂಕಿನ ಷಷ್ಟ್ಯಬ್ಧ ಆಚರಿಸಲು ನಿರ್ಧರಿಸಲಾಗಿದೆ. ಈ ಕಾರ್ಯಕ್ರಮದಲ್ಲಿ ಎಲ್ಲಾ ಸಾರ್ವಜನಿಕರು ಭಾಗವಹಿಸಿ ಯಶಸ್ವಿಗೊಳಿಸಬೇಕು ಅಲ್ಲದೇ ತಾಲೂಕಿನ ಮುಂದಿನ 15 ವರ್ಷಗಳಲ್ಲಿ ಆಗಬೇಕಾದ ಅಭಿವೃದ್ಧಿ ಕಾರ್ಯಗಳಿಗೆ ಪಕ್ಷಬೇಧ ಮರೆತು ಒಗ್ಗಟ್ಟಿನಿಂದ ಕೈಜೋಡಿಸಬೇಕು. ಆ ಮೂಲಕ ಅಮೃತ ಮಹೋತ್ಸವದ ಆಚರಣೆಯ ವೇಳೆಗೆ ಸುಳ್ಯ ತಾಲೂಕಿನ ಸಮಗ್ರ ಅಭಿವೃದ್ಧಿ ಮಾಡುವ ಕಲ್ಪನೆ ಇದೆ ಎಂದು ಅವರು ಹೇಳಿದರು.

ಕಾರ್ಯಕ್ರಮದ ದಿನದಂದು ಪೂ.9 ಗಂಟೆಗೆ ಸುಳ್ಯದ ಶಾಸ್ತ್ರಿ ವೃತ್ತದಿಂದ ಶ್ರೀ ಕುರುಂಜಿ ಜಾನಕಿ ವೆಂಕಟ್ರಮಣ ಸಭಾಂಗಣದ ವರೆಗೆ ಭವ್ಯವಾದ ಮೆರವಣಿಗೆ ನಡೆಯಲಿದೆ ಎಂದು ಸಂಚಾಲಕ ಹರೀಶ್ ಕಂಜಿಪಿಲಿ ತಿಳಿಸಿದರು.
ಕಾರ್ಯಧ್ಯಕ್ಷ ಎಸ್ ಎನ್ ಮನ್ಮಥ ಮಾತನಾಡಿ ಸುಳ್ಯದ 60 ವರ್ಷಗಳ ಕುರಿತು ಸಾಕ್ಷ್ಯ ಚಿತ್ರ ಪ್ರದರ್ಶನವಾಗಲಿದ್ದು
ಬಳಿಕ ಸಭಾ ವೇದಿಕೆಯಲ್ಲಿ ಸುಳ್ಯ ಅಂದು – ಇಂದು – ಮುಂದು ಎಂಬ ವಿಚಾರಗೋಷ್ಠಿ ನಡೆಯಲಿದೆ. ಎಂ.ಬಿ.ಸದಾಶಿವ, ಭರತ್ ಮುಂಡೋಡಿ ಮತ್ತು ಸಂತೋಷ್ ಕುತ್ತಮೊಟ್ಟೆ ವಿಚಾರ ಮಂಡಿಸಲಿದ್ದಾರೆ. ಇದೇ ಸಂದರ್ಭದಲ್ಲಿ ಅಭಿವೃದ್ದಿ ಕುರಿತಾಗಿ ಪ್ರತಿಜ್ಞೆ ಸ್ವೀಕಾರ – ಜನ ಪ್ರಣಾಳಿಕೆ ಮಂಡನೆ ಮಾಡಲಾಗುವುದು ಎಂದು ತಿಳಿಸಿದರು. ಸಂಚಾಲಕ ರಾಧಾಕೃಷ್ಣ ಬೊಳ್ಳೂರು ಮತ್ತು ಉಪಾಧ್ಯಕ್ಷ ಟಿ.ಎಂ ಶಹೀದ್ ತೆಕ್ಕಿಲ್ ಮಾತನಾಡಿ ತಾಲೂಕು ರಚನೆಗೆ ಪ್ರಯತ್ನಿಸಿದ ಮಹನೀಯರ ಸ್ಮರಣೆ ಹಾಗೂ
ಮಾಜಿ ಶಾಸಕರು,ಮಾಜಿ ಸಂಸದರು,ಮಾಜಿ ಸಚಿವರುಗಳನ್ನು ಗೌರವಿಸಲಾಗುವುದು ಎಂದು ತಿಳಿಸಿದರು.
ಸುದ್ದಿಗೋಷ್ಟಿಯಲ್ಲಿ ಸಮಿತಿಯ ಉಪಾಧ್ಯಕ್ಷ ಸದಾನಂದ ಮಾವಜಿ, ಸಹ ಸಂಚಾಲಕ ಸಂತೋಷ್ ಕುತ್ತಮೊಟ್ಟೆ,ಪ್ರಧಾನ ಕಾರ್ಯದರ್ಶಿ ಹರೀಶ್ ಬಂಟ್ವಾಳ್,ಕೋಶಾಧಿಕಾರಿ ಜಾಕೆ ಸಂತೋಷ್, ಕಾರ್ಯದರ್ಶಿ ದಿನೇಶ್ ಮಡಪ್ಪಾಡಿ,ಸಂಘಟನಾ ಕಾರ್ಯದರ್ಶಿ ಕೆ.ಎಂ ಮುಸ್ತಾಫ ಮತ್ತಿತರರು ಉಪಸ್ಥಿತರಿದ್ದರು.







