ಸುಳ್ಯ: ಸುಳ್ಯದಲ್ಲಿ ಎ.27ರಂದು ಗುಡುಗು ಸಹೀತ ಭಾರೀ ಮಳೆಯಾಗಿದೆ. ಸುಳ್ಯ ನಗರ ಸೇರಿದಂತೆ ತಾಲೂಕಿನ ವಿವಿಧ ಭಾಗಗಳಲ್ಲಿ ಮಳೆ ಸುರಿದಿದೆ. ಮಧ್ಯಾಹ್ನದ ಬಳಿಕ ಮೋಡ ಕವಿದ ವಾತಾವರಣ ಇದ್ದು ಸಂಜೆ 3.30 ರ ಬಳಿಕ ಮಳೆ ಸುರಿದಿದೆ. ಗುಡುಗು ಸಿಡಿಲಿನ ಅಬ್ಬರದೊಂದಿಗೆ ಸುಮಾರು ಒಂದು ಗಂಟೆಗೂ ಹೆಚ್ಚು ಕಾಲ ಉತ್ತಮ ಮಳೆ ಸುರಿದಿದೆ. ಸುಳ್ಯ ನಗರ ಸೇರಿದಂತೆ
ವಿವಿಧೆಡೆ ಮಳೆಯಾಗಿದೆ. ಗಾಳಿಯೂ ಬೀಸಿದೆ. ಕಳೆದ ಕೆಲವು ದಿನಗಳಿಂದ ಉರಿ ಬಿಸಿಲಿನ ಮತ್ತು ವಿಪರೀತ ಸೆಕೆಯ ವಾತಾವರಣ ಇತ್ತು. ಇದೀಗ ಉತ್ತಮ ಮಳೆಯಾಗಿರುವುದರಿಂದ ಇಳೆಗೆ ತಂಪೆರೆದಿದೆ. ಕತ್ತಲು ಕವಿದ ವಾತಾವರಣದೊಂದಿಗೆ ಮಳೆಗಾಲ ನೆನಪಿಸುವಂತೆ ಭರ್ಜರಿ ಮಳೆಯಾಗಿದೆ.ರಾಜ್ಯದ ವಿವಿಧ ಭಾಗಗಳಲ್ಲಿ

ಗುಡುಗು ಸಹಿತ ಸಾಧಾರಣ ಮಳೆಯಾಗುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿತ್ತು.ಕಳೆದ ಕೆಲವು ದಿನಗಳಿಂದ ರಾಜ್ಯದ ವಿವಿಧ ಭಾಗದಲ್ಲಿ ಮಳೆ ಸುರಿಯುತ್ತಿದ್ದು ರಾಜ್ಯದ ವಿವಿಧೆಡೆ ಮುಂದಿನ ಒಂದು ವಾರ ಗುಡುಗು ಸಹಿತ ಮಳೆ ಮುಂದುವರಿಯುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಕರಾವಳಿಯ ದಕ್ಷಿಣ ಕನ್ನಡ, ಉಡುಪಿ ಹಾಗೂ ಉತ್ತರ ಕನ್ನಡ ಜಿಲ್ಲೆಯ ಕೆಲವು ಸ್ಥಳಗಳಲ್ಲಿ ಗುಡುಗು, ಗಾಳಿ ಸಹಿತ ಮಳೆ ಮುಂದುವರಿಯುವ ಸಂಭವವಿದೆ ಎಂಬ ಸೂಚನೆ ಇದೆ.














