ಅಹಮ್ಮದಾಬಾದ್: ಐಪಿಎಲ್ ಪ್ಲೇಆಫ್ ಪಂದ್ಯಗಳು ಇಂದು ಆರಂಭವಾಗಲಿದೆ. ಮೊದಲ ಕ್ವಾಲಿಫೈಯರ್ನಲ್ಲಿ ಕೊಲ್ಕತ್ತಾ ನೈಟ್ ರೈಡರ್ಸ್ ಮತ್ತು ಸನ್ರೈಸರ್ಸ್ ಹೈದರಾಬಾದ್ ತಂಡಗಳು ಇಂದು ಮುಖಾಮುಖಿಯಾಗಲಿದೆ. ಇದರಲ್ಲಿ ಗೆಲ್ಲುವ ತಂಡ ನೇರವಾಗಿ ಪ್ಲೇಆಫ್ಗೆ ಎಂಟ್ರಿ ಕೊಡಲಿದೆ. ಇನ್ನು ಎಲಿಮಿನೇಟರ್ ಪಂದ್ಯದಲ್ಲಿ ರಾಜಸ್ಥಾನ್ ರಾಯಲ್ಸ್ ಮತ್ತು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಗಳು ನಾಳೆ(ಮೇ.22) ಸೆಣಸಲಿದೆ. ಇದರಲ್ಲಿ
ಗೆಲ್ಲುವ ತಂಡ 2ನೇ ಕ್ವಾಲಿಫೈಯರ್ ಪಂದ್ಯಕ್ಕೆ ಅರ್ಹತೆ ಪಡೆಯಲಿದೆ. 24 ರಂದು ನಡೆಯುವ ಎರಡನೇ ಕ್ವಾಲಿಫೈಯರ್ ಪಂದ್ಯದಲ್ಲಿ ಮೊದಲ ಕ್ವಾಲಿಫೈಯರ್ ಪಂದ್ಯದಲ್ಲಿ ಸೋತ ಮತ್ತು ಎಲಿಮಿನೇಟರ್ ಪಂದ್ಯದಲ್ಲಿ ಗೆದ್ದ ತಂಡಗಳು ಮುಖಾಮುಖಿಯಾಗಲಿದೆ. ಈ ಮ್ಯಾಚ್ನಲ್ಲಿ ಗೆಲ್ಲುವ ತಂಡ ಫೈನಲ್ಗೆ ಪ್ರವೇಶಿಸಲಿದೆ.
ಒಂದು ವೇಳೆ ಈ ನಿರ್ಣಾಯಕ ಪಂದ್ಯಗಳ ವೇಳೆ ಮಳೆ ಬಂದರೆ ಫಲಿತಾಂಶ ನಿರ್ಧರಿಸುವುದು ಹೇಗೆ ಎಂಬ ಪ್ರಶ್ನೆ ಮೂಡುವುದು ಸಹಜ. ಈ ಬಾರಿಯ ಪ್ಲೇಆಫ್ನ ಎಲ್ಲಾ ಪಂದ್ಯಗಳಿಗೂ ಮೀಸಲು ದಿನದಾಟವಿದೆ.
ಟಾಸ್ ಪ್ರಕ್ರಿಯೆಗೂ ಮುನ್ನ ಮಳೆ ಬಂದು ಪಂದ್ಯ ತಡವಾಗಿ ಆರಂಭವಾದರೂ ಓವರ್ಗಳನ್ನು ಕಡಿತಗೊಳಿಸುವುದಿಲ್ಲ. ಅಂದರೆ ಪಂದ್ಯವು ರಾತ್ರಿ 9.40 ರೊಳಗೆ ಶುರುವಾದರೆ ಯಾವುದೇ ಓವರ್ ಕಡಿತ ಇರುವುದಿಲ್ಲ. ಅದರಂತೆ 2 ತಂಡಗಳು 20 ಓವರ್ಗಳನ್ನು ಆಡಲಿದೆ. (ಒಂದು ವೇಳೆ ಮತ್ತೆ ಅಡಚಣೆ ಉಂಟಾಗಲಿದೆ ಎಂಬ ಸೂಚನೆಯಿದ್ದರೆ ಮಾತ್ರ ಓವರ್ಗಳ ಕಡಿತಕ್ಕೆ ಮುಂದಾಗಬಹುದು).
ಮಳೆಯಿಂದ ವಿಳಂಬವಾಗಿ ರಾತ್ರಿ 9.40 ರ ಬಳಿಕ ಪಂದ್ಯ ಆರಂಭವಾಗುವುದಾರೆ, ಓವರ್ಗಳ ಕಡಿತ ಮಾಡಲಾಗುತ್ತದೆ. ಅಂದರೆ ಪ್ರತಿ ಎಂಟು ನಿಮಿಷಗಳ ನಷ್ಟಕ್ಕೆ ಒಂದು ಓವರ್ ಅನ್ನು ಕಡಿತಗೊಳಿಸಲಾಗುತ್ತದೆ.
ಪ್ಲೇಆಫ್ ಪಂದ್ಯಗಳಿಗೆ ಹೆಚ್ಚುವರಿ 120 ನಿಮಿಷಗಳನ್ನು ನಿಗದಿ ಮಾಡಲಾಗಿದೆ. ಅಂದರೆ ಐಪಿಎಲ್ ಪಂದ್ಯದ ನಿಗದಿತ ಸಮಯ 3 ಗಂಟೆ 15 ನಿಮಿಷಗಳು. ಒಂದು ವೇಳೆ ಮಳೆ ಬಂದು ಅಥವಾ ಇನ್ನಿತರ ಕಾರಣಗಳಿಂದ ಪಂದ್ಯಕ್ಕೆ ಅಡಚಣೆಯಾದರೆ ಹೆಚ್ಚುವರಿ 2 ಗಂಟೆಯನ್ನು ಬಳಸಲಾಗುತ್ತದೆ. ಅಂದರೆ ಪ್ಲೇಆಫ್ ಪಂದ್ಯಗಳಿಗೆ 7.30 ರಿಂದ 1 ಗಂಟೆಯವರೆಗೆ ಸಮಯ ನಿಗದಿ ಮಾಡಲಾಗಿದೆ.
ಇದಾಗ್ಯೂ ಪಂದ್ಯ ನಡೆಯದಿದ್ದರೆ ಅಥವಾ ಪೂರ್ಣಗೊಳ್ಳದಿದ್ದರೆ ಮ್ಯಾಚ್ ಅನ್ನು ಮೀಸಲು ದಿನದಾಟವನ್ನು ಬಳಸಲಾಗುತ್ತದೆ. ಮೀಸಲು ದಿನದಾಟದಲ್ಲಿ ಆರಂಭದಿಂದಲೇ ಪಂದ್ಯವನ್ನು ಆಡಲಾಗುತ್ತದೆ. ಅಂದರೆ ನಿಗದಿತ ದಿನದಲ್ಲಿ ಅರ್ಧ ಪಂದ್ಯ ನಡೆದಿದ್ದರೆ ಮೀಸಲು ದಿನದಾಟದಲ್ಲಿ ಮುಂದುವರೆಸಲಾಗುವುದಿಲ್ಲ. ಬದಲಾಗಿ ಹೊಸದಾಗಿ ಪಂದ್ಯವನ್ನು ಆರಂಭಿಸಲಾಗುತ್ತದೆ.
ಮೀಸಲು ದಿನದಾಟದಲ್ಲೂ ನಿಗದಿತ ಸಮಯದೊಳಗೆ ಪಂದ್ಯ ನಡೆಯದಿದ್ದರೆ ಹೆಚ್ಚುವರಿ ಸಮಯ ತೆಗೆದುಕೊಳ್ಳಲಾಗುತ್ತದೆ. ಈ ಮೂಲಕ 5 ಓವರ್ಗಳ ಪಂದ್ಯವನ್ನು ಆಯೋಜಿಸಬಹುದು. ಈ 5 ಓವರ್ಗಳ ಪಂದ್ಯವು ರಾತ್ರಿ 11.56 ರಿಂದ ಶುರುವಾಗಬಹುದು, ಅಲ್ಲದೆ 12.56 ರೊಳಗೆ ಮುಗಿಸುವ ಪರಿಸ್ಥಿತಿ ಇದೆಯಾ ಎಂಬುದನ್ನು ರೆಫರಿ ಅವಲೋಕಿಸಲಿದ್ದಾರೆ.
ಇನ್ನು 11.56 ರಿಂದ 12.56 ರೊಳಗೆ 5 ಓವರ್ಗಳ ಪಂದ್ಯ ಆಯೋಜಿಸಲು ಸಾಧ್ಯವಾಗದಿದ್ದರೆ ಮಾತ್ರ ಸೂಪರ್ ಓವರ್ ಆಡಿಸಲಾಗುತ್ತದೆ. ಅಂದರೆ ಮೀಸಲು ದಿನದಾಟದಲ್ಲಿ ಪಂದ್ಯ ನಡೆಯದಿದ್ದರೆ ಸೂಪರ್ ಓವರ್ ಮ್ಯಾಚ್ ನಡೆಯಲಿದೆ.
ಒಂದು ವೇಳೆ ಮಳೆಯಿಂದಾಗಿ ಕನಿಷ್ಠ ಸೂಪರ್ ಓವರ್ ಪಂದ್ಯ ಕೂಡ ನಡೆಯದಿದ್ದರೆ, ಲೀಗ್ ಹಂತದ 70 ಪಂದ್ಯಗಳ ನಂತರ ಪಾಯಿಂಟ್ಸ್ ಟೇಬಲ್ನಲ್ಲಿ ಅಗ್ರಸ್ಥಾನ ಅಲಂಕರಿಸಿದ ತಂಡವು ಮುಂದಿನ ಹಂತಕ್ಕೇರಲಿದೆ.
ಇಲ್ಲಿ ಕೆಕೆಆರ್ ಮತ್ತು ಎಸ್ಆರ್ಹೆಚ್ ನಡುವಣ ಮೊದಲ ಕ್ವಾಲಿಫೈಯರ್ ಪಂದ್ಯವು ಮಳೆಗೆ ಅಹುತಿಯಾದರೆ ಅಂಕ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿರುವ ಕೊಲ್ಕತ್ತಾ ನೈಟ್ ರೈಡರ್ಸ್ ತಂಡ ಫೈನಲ್ಗೆ ಪ್ರವೇಶಿಸಲಿದೆ.
ಇನ್ನು ರಾಜಸ್ಥಾನ್ ರಾಯಲ್ಸ್ ಮತ್ತು ರಾಯಲ್ ಚಾಲೆಂಜರ್ಸ್ ಬೆಂಗಳೂರು ನಡುವಣ ಎಲಿಮಿನೇಟರ್ ಪಂದ್ಯವು ರದ್ದಾದರೆ ಪಾಯಿಂಟ್ಸ್ ಟೇಬಲ್ನಲ್ಲಿ 3ನೇ ಸ್ಥಾನದಲ್ಲಿರುವ ರಾಜಸ್ಥಾನ್ ರಾಯಲ್ಸ್ ತಂಡ 2ನೇ ಕ್ವಾಲಿಫೈಯರ್ಗೆ ಅರ್ಹತೆ ಪಡೆಯಲಿದೆ.
ಎರಡನೇ ಕ್ವಾಲಿಫೈಯರ್ ಪಂದ್ಯ ಕೂಡ ಮಳೆಗೆ ಅಹುತಿಯಾದರೆ, ಅಂಕ ಪಟ್ಟಿಯಲ್ಲಿ ದ್ವಿತೀಯ ಸ್ಥಾನದಲ್ಲಿರುವ ಎಸ್ಆರ್ಹೆಚ್ ತಂಡ ಫೈನಲ್ಗೆ ಪ್ರವೇಶಿಸಲಿದೆ.
ಇನ್ನು ಫೈನಲ್ ಪಂದ್ಯ ಕೂಡ ಸಂಪೂರ್ಣ ಮಳೆಗೆ ಅಹುತಿಯಾದರೆ, ಅಂಕ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿರುವ ಕೊಲ್ಕತ್ತಾ ನೈಟ್ ರೈಡರ್ಸ್ ತಂಡವನ್ನು ಚಾಂಪಿಯನ್ ಎಂದು ಘೋಷಿಸಲಾಗುತ್ತದೆ.