ನವದೆಹಲಿ: ಸನ್ರೈಸರ್ಸ್ ಹೈದರಾಬಾದ್ ತಂಡದ ಬ್ಯಾಟರ್ಗಳು ಹರಿಸಿದ ಹರಿಸಿದ ರನ್ ಪ್ರವಾಹದ ಮುಂದೆ ಮಣಿದ ಡೆಲ್ಲಿ ಕ್ಯಾಪಿಟಲ್ಸ್ 67 ರನ್ ಸೋಲೊಪ್ಪಿಕೊಂಡಿತು. ಎಸ್.ಆರ್.ಎಚ್ನ ಆರಂಭಿಕ ಜೋಡಿ ಟ್ರಾವಿಸ್ ಹೆಡ್ (89; 32ಎ, 4X11, 6X6) ಮತ್ತು ಅಭಿಷೇಕ್ ಶರ್ಮಾ (46; 12ಎ, 4X2, 6X6) ಅವರ ಸ್ಫೋಟಕ ಶೈಲಿಯ ಬ್ಯಾಟಿಂಗ್ ರಂಗೇರಿತು. ಪವರ್ ಪ್ಲೇಯ 6 ಓವರ್ಗಳಲ್ಲಿಯೇ ದಾಖಲೆಯ 125 ರನ್ ಕಲೆಹಾಕಿದರು. ಅವರ ಬಿರುಸಿನ ಆಟದ ಬಲದಿಂದ
ಹೈದರಾಬಾದ್ ತಂಡವು 20 ಓವರ್ಗಳಲ್ಲಿ 7 ವಿಕೆಟ್ಗಳಿಗೆ 266 ರನ್ ಗಳಿಸಿತು. ಈ ಬೃಹತ್ ಗುರಿಯನ್ನು ಬೆನ್ನತ್ತಿದ ಡೆಲ್ಲಿ
19.1 ಓವರ್ಗಳಲ್ಲಿ 199 ರನ್ಗೆ ಕುಸಿಯಿತು. ಡೆಲ್ಲಿ ಪರ
ಜೇಕ್ ಫ್ರೇಸರ್ ಮೆಕ್ಗುರ್ಕ್ (65; 18ಎ, 4×5, 6×7) ಮತ್ತು (ಅಭಿಷೇಕ್ ಪೊರೆಲ್ (42; 22ಎ, 4×7, 6×1) ಸ್ಫೋಟಕ ಬ್ಯಾಟಿಂಗ್ ನಡೆಸಿ ಮೂರನೇ ವಿಕೆಟ್ಗೆ 80 ರನ್ (30ಎ) ಸೇರಿಸಿ ಹೋರಾಟ ನಡೆಸಿದರು. ಹೀಗಾಗಿ, ಪವರ್ಪ್ಲೇ ಅವಧಿಯಲ್ಲಿ 88 ರನ್ಗಳು ಹರಿದುಬಂದವು.
ಅವರು ನಿರ್ಗಮಿಸಿದ ನಂತರ ನಾಯಕ ರಿಷಭ್ ಪಂತ್ (44; 35ಎ, 4×5, 6×1) ಕೊಂಚ ಹೋರಾಟ ತೋರಿದರು. ಉಳಿದಂತೆ ಟಿಸ್ಟನ್ ಸ್ಟಬ್ಸ್ (10), ಲಿಖಿತ್ ಯಾದವ್ (7), ಅಕ್ಷರ್ ಪಟೇಲ್ (6) ನಿರಾಸೆ ಅನುಭವಿಸಿದರು. ತಂಡವು ಟಿ. ನಟರಾಜನ್ ನಾಲ್ಕು ವಿಕೆಟ್ ಪಡೆದರೆ, ಮಯಂಕ್ ಮಾರ್ಕಂಡೆ ಮತ್ತು ನಿತೀಶ್ ಕುಮಾರ್ ರೆಡ್ಡಿ ತಲಾ ಎರಡು ವಿಕೆಟ್ ಪಡೆದರು. ಈ ಗೆಲುವಿನೊಂದಿಗೆ ಹೈದರಾಬಾದ್ ತಂಡವು 10 ಅಂಕಗಳೊಂದಿಗೆ ಪಾಯಿಂಟ್ಪಟ್ಟಿಯಲ್ಲಿ ಎರಡನೇ ಸ್ಥಾನಕ್ಕೆ ಬಡ್ತಿ ಪಡೆಯಿತು. ಡೆಲ್ಲಿ ತಂಡವು 6ರಿಂದ 7ನೇ ಸ್ಥಾನಕ್ಕೆ ಕುಸಿಯಿತು.
ಇದಕ್ಕೂ ಮೊದಲು ಟಾಸ್ ಗೆದ್ದ ಡೆಲ್ಲಿ ತಂಡದ ನಾಯಕ ರಿಷಭ್ ಪಂತ್ ಫೀಲ್ಡಿಂಗ್ ಆಯ್ಕೆ ಮಾಡಿಕೊಂಡರು. ಆದರೆ, ಅವರ ನಿರ್ಧಾರ ತಪ್ಪು ಎಂಬುದನ್ನು ಟ್ರಾವಿಸ್ ಹೆಡ್ ಮತ್ತು ಅಭಿಷೇಕ್ ತೋರಿಸಿಕೊಟ್ಟರು. ಮೊದಲ 3 ಓವರ್ಗಳಲ್ಲಿಯೇ ತಂಡದ ಮೊತ್ತವು 62 ರನ್ಗಳಾಯಿತು. ಅದರಲ್ಲಿ ಹೆಡ್ 16 ಎಸೆತಗಳಲ್ಲಿ 54 ರನ್ ಗಳಿಸಿದರು. ಅದರಲ್ಲಿ ಏಳು ಬೌಂಡರಿ ಮತ್ತು ನಾಲ್ಕು ಸಿಕ್ಸರ್ ಬಾರಿಸಿದರು. ಅಭಿಷೇಕ್ 2 ಎಸೆತಗಳಲ್ಲಿ 8 ರನ್ ಗಳಿಸಿದ್ದರು. ನಂತರದ ಮೂರು ಓವರ್ಗಳಲ್ಲಿ ಹೆಡ್ ಜೊತೆಗೆ ಅಭಿಷೇಕ್ ಕೂಡ ಅಬ್ಬರಿಸಿದರು. ಐದು ಓವರ್ಗಳಲ್ಲಿಯೇ ತಂಡವು ಶತಕದ ಗಡಿ ದಾಟಿತು.
ಮುಂಬೈ ಎದುರಿನ ಪಂದ್ಯದಲ್ಲಿ 16 ಎಸೆತಗಳಲ್ಲಿ ಅರ್ಧಶತಕ ಹೊಡೆದಿದ್ದ ಅಭಿಷೇಕ್ ಇಲ್ಲಿ 12 ಎಸೆತಗಳಲ್ಲಿ 46 ರನ್ ಗಳಿಸಿದರು. ಇವರಿಬ್ಬರ ಆಟದ ಭರಾಟೆ ನೋಡಿದರೆ ತಂಡವು 300 ರನ್ಗಳ ಮೊತ್ತದ ಗಡಿ ದಾಟಿ ದಾಖಲೆ ಬರೆಯುವ ಸಾಧ್ಯತೆ ಇತ್ತು.
ಆದರೆ ಡೆಲ್ಲಿ ತಂಡದ ಎಡಗೈ ಸ್ಪಿನ್ ಜೋಡಿ ಕುಲದೀಪ್ ಯಾದವ್ (55ಕ್ಕೆ4) ಮತ್ತು ಅಕ್ಷರ್ ಪಟೇಲ್ (29ಕ್ಕೆ1) ಸನ್ರೈಸರ್ಸ್ ಓಟಕ್ಕೆ ತಡೆಯೊಡ್ಡಿದರು. ಕೊನೆಯ ಹಂತದ ಓವರ್ಗಳಲ್ಲಿ ರನ್ ಗಳಿಸುವ ಹೊಣೆಯನ್ನು ಅಚ್ಚುಕಟ್ಟಾಗಿ ನಿಭಾಯಿಸಿದ ಶಾಬಾಜ್ ಅಹಮದ್ (ಔಟಾಗದೇ 59; 29ಎ, 4X2, 6X5) ತಂಡದ ಮೊತ್ತವನ್ನು ಹೆಚ್ಚಿಸಿದರು. ಅವರೊಂದಿಗೆ ಅಬ್ದುಲ್ ಸಮದ್ (13) ಕೂಡ ಕಾಣಿಕೆ ನೀಡಿದರು.
ಈ ಬಾರಿಯ ಟೂರ್ನಿಯಲ್ಲಿ ಸನ್ರೈಸರ್ಸ್ ತಂಡವು ಮೂರನೇ ಸಲ 250 ರನ್ಗಳಿಗಿಂತಲೂ ಹೆಚ್ಚಿನ ಮೊತ್ತ ಕಲೆಹಾಕಿತು. ಈ ಮೊದಲು ತಂಡವು ಆರ್ಸಿಬಿ ಎದುರು 3ಕ್ಕೆ287, ಮುಂಬೈ ಎದುರು 3ಕ್ಕೆ277 ರನ್ ಗಳಿಸಿ ದಾಖಲೆ ಬರೆದಿತ್ತು.