ಲಾಸ್ ಏಂಜಲೀಸ್: ಫಿಫಾ ವಿಶ್ವಕಪ್ ಟೂರ್ನಿಯ ಕ್ವಾರ್ಟರ್ಫೈನಲ್ನಲ್ಲಿ ಬೆಲ್ಜಿಯಂ ತಂಡದ ವಿರುದ್ಧ ಸ್ಪೇನ್ 2–1 ಅಂತರದ ಗೋಲುಗಳಿಂದ ಗೆಲುವು ಸಾಧಿಸಿ ಸೆಮಿಫೈನಲ್ ಪ್ರವೇಶಿಸಿದೆ.ಪಂದ್ಯದ 30ನೇ ನಿಮಿಷದಲ್ಲಿ ಸ್ಪೇನ್ನ ಫ್ಯಾಬಿಯನ್ ರೂಯಿಜ್ ಪಂದ್ಯದ
ಮೊದಲ ಗೋಲು ದಾಖಲಿಸಿದರು. ಮೊದಲಿಗೆ ಹಿನ್ನಡೆ ಅನುಭವಿಸಿದ್ದ ಬೆಲ್ಜಿಯಂ ತಂಡವು, 41ನೇ ನಿಮಿಷದಲ್ಲಿ ಚಾರ್ಲ್ಸ್ ಡಿ ಕೆಟೆಲೇರ್ ಅವರ ಗೋಲಿನ ಮೂಲಕ ಸಮಬಲ ಸಾಧಿಸಿತು. ಈ ಆವೃತ್ತಿಯಲ್ಲಿ ಸ್ಪೇನ್ ತಂಡವು ಬಿಟ್ಟುಕೊಟ್ಟ ಮೊದಲ ಗೋಲು ಇದಾಗಿತ್ತು.88ನೇ ನಿಮಿಷದಲ್ಲಿ ಮೈಕೆಲ್ ಮೆರಿನೊ ಗೋಲು ದಾಖಲಿಸುವ ಮೂಲಕ ಸ್ಪೇನ್ ಗೆಲುವಿಗೆ ಕಾರಣರಾದರು.
16 ವರ್ಷಗಳ ಬಳಿಕ ಪ್ರಶಸ್ತಿ ಗೆಲ್ಲುವ ನಿರೀಕ್ಷೆಯಲ್ಲಿರುವ ಸ್ಪೇನ್ ತಂಡವು ಬುಧವಾರ(ಜುಲೈ 15) ಸೆಮಿಫೈನಲ್ನಲ್ಲಿ ಬಲಿಷ್ಠ ಫ್ರಾನ್ಸ್ ವಿರುದ್ಧ ಆಡಲಿದೆ.





