ಚೆನ್ನೈ: ಏಕದಿನ ವಿಶ್ವಕಪ್ ಕ್ರಿಕೆಟ್ ಟೂರ್ನಿಯ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ತಂಡ ಪಾಕಿಸ್ತಾನ ತಂಡದ ವಿರುದ್ಧ 1 ವಿಕೆಟ್ನ ರೋಚಕ ಗೆಲುವು ದಾಖಲಿಸಿತು.ಸತತ ನಾಲ್ಕು ಪಂದ್ಯ ಸೋಲುವ ಮೂಲಕ ಪಾಕಿಸ್ತಾನ ಸೆಮಿಫೈನಲ್ ಹಾದಿ ದುರ್ಗಮವಾಗಿದೆ. ಈ ಗೆಲುವಿನೊಂದಿಗೆ ದಕ್ಷಿಣ ಆಫ್ರಿಕಾ ಅಂಕಪಟ್ಟಿಯಲ್ಲಿ ಅಗ್ರಸ್ಥಾನಕ್ಕೆ ಏರಿತು. ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ಪಾಕಿಸ್ತಾನ ದಕ್ಷಿಣ ಆಫ್ರಿಕಾ ತಂಡಕ್ಕೆ 271 ರನ್ಗಳ ಗುರಿ ನೀಡಿತು. ಇದನ್ನು ಬೆನ್ನತ್ತಿದ್ದ ದಕ್ಷಿಣ ಆಫ್ರಿಕಾಗೆ ಉತ್ತಮ ಆರಂಭ
ಸಿಗಲಿಲ್ಲ. ಟೂರ್ನಿಯಲ್ಲಿ 3 ಶತಕ ಬಾರಿಸಿರುವ ಕ್ವಿಂಟನ್ ಡಿ ಕಾಕ್ 24 ರನ್ ಗಳಿಸಿ ಔಟ್ ಆದರು. ಮತ್ತೋರ್ವ ಆರಂಭಿಕ, ನಾಯಕ ತೆಂಬಾ ಬವುಮ ಆಟ 28 ರನ್ ಗಳಿಸಿ ಔಟ್ ಆದರು.ದಕ್ಷಿಣ ಆಫ್ರಿಕಾದ ಪರ ಉತ್ತಮ ಬ್ಯಾಟಿಂಗ್ ಮಾಡಿದ ಐಡನ್ ಮಾರ್ಕರಂ 93 ಎಸೆತಗಳಲ್ಲಿ 91 ರನ್ ಗಳಿಸಿ ಶತಕ ವಂಚಿತರಾದರು.ಒಂದು ಕಡೆ ವಿಕೆಟ್ ಬೀಳುತ್ತಿದ್ದರೆ, ಇನ್ನೊಂದು ಕಡೆ ಮಾರ್ಕರಂ ಕ್ರೀಸ್ಗೆ ಕಚ್ಚಿ ನಿಂತರು. ಅಂತಿಮವಾಗಿ
9 ವಿಕೆಟ್ ಕಳೆದುಕೊಂಡು 47.2 ಓವರ್ಗಳಲ್ಲಿ 271 ರನ್ ಗಳಿಸಿ ದಕ್ಷಿಣ ಆಫ್ರಿಕಾ ವಿಜಯಿಯಾಯಿತು.
ಪಾಕಿಸ್ತಾನ ಪರ ಶಾಹಿನ್ ಶಾ ಅಫ್ರಿದಿ 3, ಹಾರಿಸ್ ರೌಫ್, ಮೊಹಮ್ಮದ್ ವಾಸಿಂ, ಉಸ್ಮಾನ್ ಮೀರ್ ತಲಾ 2 ವಿಕೆಟ್ ಹಂಚಿಕೊಂಡರು.
ಮೊದಲು ಬ್ಯಾಟಿಂಗ್ ಮಾಡಿದ ಪಾಕಿಸ್ತಾನ ತಂಡ 46.2 ಓವರ್ಗಳಲ್ಲಿ 270 ರನ್ಗೆ ಆಲ್ ಔಟ್ ಆಯಿತು. ನಾಯಕ ಬಾಬರ್ ಅಜಂ (50), ಸೌದ್ ಶಕೀಲ್ (52) ಶದಾಬ್ ಖಾನ್ (43) ಬಲ ತುಂಬಿದರು.
ದಕ್ಷಿಣ ಆಫ್ರಿಕಾ ಪರ ಸ್ಪಿನ್ನರ್ ತಬ್ರೇಜ್ ಶಂಸಿ 4 ವಿಕೆಟ್ ಉರುಳಿಸಿದರೆ, ಮಾರ್ಕೊ ಜಾನ್ಸೆನ್ 3 ವಿಕೆಟ್ ಪಡೆದರು. ಜೆರಾಲ್ಡ್ ಕೊಯೆಟ್ಜಿ ಎರಡು ಹಾಗೂ ಲುಂಗಿ ಎನ್ಗಿಡಿ ಒಂದು ವಿಕೆಟ್ ಕಿತ್ತರು.