ಸುಳ್ಯ: ಹಬ್ಬ ಹರಿ ದಿನಗಳ ಆಚರಣೆಗಳಿಂದ ಭವ್ಯ ಭಾರತೀಯ ಸಾಂಸ್ಕೃತಿಕ ಪರಂಪರೆ ಉಳಿವು ಸಾಧ್ಯ ಎಂದು ಬಿಜೆಪಿ ರಾಜ್ಯಾಧ್ಯಕ್ಷ, ಸಂಸದ ನಳಿನ್ ಕುಮಾರ್ ಕಟೀಲ್ ಹೇಳಿದ್ದಾರೆ. ಶ್ರೀ ಶಾರದಾಂಬಾ ದಸರಾ ಸೇವಾ ಟ್ರಸ್ಟ್ ಸುಳ್ಯ, ಸಾರ್ವಜನಿಕ ಶ್ರೀ ಶಾರದಾಂಬಾ ಸೇವಾ ಸಮಿತಿ ಸುಳ್ಯ ಹಾಗೂ ದಸರಾ ಉತ್ಸವ ಸಮಿತಿ ಇದರ ಆಶ್ರಯದಲ್ಲಿ 52ನೇ ವರ್ಷದ ಶ್ರೀ ಶಾರದಾಂಬಾ ಉತ್ಸವ ‘ಸುಳ್ಯ ದಸರಾ’ ಅಂಗವಾಗಿ ನಡೆದ
ಸಾಂಸ್ಕೃತಿಕ ಉತ್ಸವದ ಸಮಾರೋಪ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿದರು.
ಸಕಲ ಚರಾಚರಗಲ್ಲಿಯೂ ದೇವರನ್ನು ಕಾಣುವ ಸಂಸ್ಕೃತಿ ನಮ್ಮದು. ಸಾಹಿತ್ಯ, ಸಂಗೀತದಲ್ಲಿಯೂ ದೇವರನ್ನು ಕಾಣುತ್ತೇವೆ. ಸಂಗೀತ, ಸಾಹಿತ್ಯ ಮತ್ತು ವಿದ್ಯೆಯ ಅಧಿ ದೇವತೆಯಾದ ಶಾರದೆಯ ಆರಾಧನೆಯಿಂದ ನಮ್ಮ ಸಾಂಸ್ಕೃತಿಕ ಪರಂಪರೆ ಇನ್ನಷ್ಟು ಗಟ್ಟಿಯಾಗಿ ಮುಂದುವರಿಯುತ್ತದೆ ಎಂದು ಅವರು ಹೇಳಿದರು.
ಮುಖ್ಯ ಅತಿಥಿಯಾಗಿದ್ದ ಮಾಜಿ ಸಚಿವ ಬಿ.ರಮಾನಾಥ ರೈ ಮಾತನಾಡಿ’ ನವರಾತ್ರಿ ನಮ್ಮ ಪ್ರಮುಖ ಆಚರಣೆ. ದಸರಾ ನಮ್ಮ ನಾಡಹಬ್ಬ. ಹಬ್ಬಗಳ ಆಚರಣೆಯಿಂದ ಆಧ್ಯಾತ್ಮಿಕ ಭಾವನೆಗಳನ್ನು ಮನ ಮನಗಳಲ್ಲಿ ಮುಟ್ಟಿಸಲು
ಸಾಧ್ಯ ಎಂದು ಹೇಳಿದರು. ಜನರ ಮಧ್ಯೆಯ ಪ್ರೀತಿ ವಿಶ್ವಾಸಗಳನ್ನು ಹೆಚ್ಚಿಸಲು ಆಚರಣೆಗಳು ಪೂರಕ ಎಂದು ಅವರು ಹೇಳಿದರು.
ಮಾಜಿ ಶಾಸಕ ಎಸ್.ಅಂಗಾರ ಮಾತನಾಡಿ ಪ್ರತಿಯೊಬ್ಬರೂ ಭಾವನೆ ಮತ್ತು ಭಕ್ತಿಯಿಂದ ಆರಾಧನೆ ಮಾಡಿದರೆ ದೇವರ ಅನುಗ್ರಹ ಪಡೆಯಲು ಸಾಧ್ಯ. ಜನರ ಸಹಕಾರ ಇದ್ದರೆ ಮಾತ್ರ ಕಾರ್ಯಕ್ರಮಗಳು ಯಶಸ್ವಿಯಾಗಲು ಸಾಧ್ಯ ಎಂದು ಹೇಳಿದರು.
ಮುಖ್ಯ ಅತಿಥಿಯಾಗಿದ್ದ ಸಿನಿಮಾ ನಿರ್ದೇಶಕ ಸಂತೋಷ್ ಕೊಡೆಂಕೇರಿ ಮಾತನಾಡಿ ತನ್ನ ಹೊಸ ಸಿನಿಮಾ ರವಿಕೆ ಪ್ರಸಂಗ ಸದ್ಯದಲ್ಲಿಯೇ ಬಿಡುಗಡೆ ಆಗಲಿದೆ ಎಂದು ಹೇಳಿದರು.
ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಶಾಸಕಿ ಭಾಗೀರಥಿ ಮುರುಳ್ಯ ಮಾತನಾಡಿ’ ನಮ್ಮ ಧಾರ್ಮಿಕ ಮತ್ತು ಸಾಂಸ್ಕೃತಿಕ ಸೊಬಗನ್ನು ಉಳಿಸಿ ಬೆಳೆಸಲು ಹಬ್ಬಗಳ ಆಚರಣೆ ಸಹಾಯಕ ಎಂದು ಹೇಳಿದರು. ಸುಳ್ಯ ದಸರಾಕ್ಕೆ ಸರಕಾರದಿಂದ ಅನುದಾನ ಬಿಡುಗಡೆ ಮಾಡಲು ಪ್ರಯತ್ನ ನಡೆಸುವುದಾಗಿ ಹೇಳಿದರು.
ಮಾಂಡೋವಿ ಮೋಟಾರ್ಸ್ನ ಸಹಾಯಕ ವ್ಯವಸ್ಥಾಪಕ ಸುರೇಶ್, ಪಾವನಾ ಸಂತೋಷ್, ಉದ್ಯಮಿ ಜಿತೇಂದ್ರ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಸಾರ್ವಜನಿಕ ಶ್ರೀ ಶಾರದಾಂಬಾ ಸೇವಾ ಸಮಿತಿ ಗೌರವಾಧ್ಯಕ್ಷ ಕೆ.ಗೋಕುಲ್ದಾಸ್, ಸಾರ್ವಜನಿಕ ಶ್ರೀ ಶಾರದಾಂಬಾ ಸೇವಾ ಸಮಿತಿಯ ಅಧ್ಯಕ್ಷ ಚಿದಾನಂದ ವಿದ್ಯಾನಗರ, ಸಾರ್ವಜನಿಕ ಶ್ರೀ ಶಾರದಾಂಬಾ ದಸರಾ ಸೇವಾ ಟ್ರಸ್ಟ್ನ ಅಧ್ಯಕ್ಷ ನವೀನ್ಚಂದ್ರ ಕೆ.ಎಸ್, ಉಪಾಧ್ಯಕ್ಷರಾದ ನಾರಾಯಣ ಕೇಕಡ್ಕ, ಪ್ರಧಾನ ಕಾರ್ಯದರ್ಶಿ ಸತೀಶ್ ಎಂ.ಕೆ,ದಸರಾ ಉತ್ಸವ ಸಮಿತಿಯ ಪ್ರಧಾನ ಕಾರ್ಯದರ್ಶಿ ಬೂಡು ರಾಧಾಕೃಷ್ಣ ರೈ, ಸಾರ್ವಜನಿಕ ಶ್ರೀ ಶಾರದಾಂಬಾ ಸೇವಾ ಸಮಿತಿಯ ಪ್ರಧಾನ ಕಾರ್ಯದರ್ಶಿ ರವಿಚಂದ್ರ ಕೊಡಿಯಾಲಬೈಲು, ಕೋಶಾಧಿಕಾರಿ ಪುರುಷೋತ್ತಮ ಕೆ, ಸಾರ್ವಜನಿಕ ಶ್ರೀ ಶಾರದಾಂಬಾ ಸೇವಾ ಸಮಿತಿಯ ನಿರ್ದೇಶಕರಾದ ರಾಜು ಪಂಡಿತ್, ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಶಾರದಾ ಉತ್ಸವದ ಬಗ್ಗೆ ಭವಾನಿಶಂಕರ ಕಲ್ಮಡ್ಕ ನೇತೃತ್ವದಲ್ಲಿ ಹೊರತಂದ ಸಂಚಿಕೆ ಬಿಡುಗಡೆ ಮಾಡಲಾಯಿತು. ಜಿತೇಂದ್ರ ಅವರು ವಿದ್ಯಾರ್ಥಿಗಳಿಗೆ ನೀಡುವ ಪ್ರೋತ್ಸಾಹಕ ಧನವನ್ನು ವಿತರಿಸಲಾಯಿತು.
ಬೂಡು ರಾಧಾಕೃಷ್ಣ ರೈ ಸ್ವಾಗತಿಸಿ, ಕೆ.ಗೋಕುಲ್ದಾಸ್ ಪ್ರಾಸ್ತಾವಿಕವಾಗಿ ಮಾತನಾಡಿದರು. ನಾರಾಯಣ ಕೇಕಡ್ಕ ಶೊಭಾಯಾತ್ರೆಯ ಕುರಿತು ಮಾತನಾಡಿದರು. ಚಿದಾನಂದ ವಿದ್ಯಾನಗರ ವಂದಿಸಿದರು. ಪತ್ರಕರ್ತ ಶಿವಪ್ರಸಾದ್ ಆಲೆಟ್ಟಿ ಕಾರ್ಯಕ್ರಮ ನಿರೂಪಿಸಿದರು. ಬಳಿಕ ಸಂಗೀತ ರಸಮಂಜರಿ ಕಾರ್ಯಕ್ರಮ ನಡೆಯಿತು