ಶಿರೂರು: ಶಿರೂರು ಗುಡ್ಡ ಕುಸಿತದಿಂದ ನಾಪತ್ತೆಯಾದ ಕ್ಯಾಲಿಕಟ್ ಮೂಲದ ಅರ್ಜುನ್ ಸೇರಿ ಮೂವರಿಗಾಗಿ ಕಾರ್ಯಾಚರಣೆ ಮುಂದುವರೆದಿದೆ. ಮುಳುಗು ತಜ್ಞ ಉಡುಪಿಯ ಈಶ್ವರ ಮಲ್ಪೆ ತಂಡ ಲಾರಿ ಹಾಗೂ ಕಣ್ಮರೆಯಾದವರಿಗಾಗಿ ಹುಟುಕಾಟ ಶನಿವಾರ ದಿನಪೂರ್ತಿ ಶೋಧ ಕಾರ್ಯ ನಡೆಸಿದರು. ನದಿಯಲ್ಲಿ ನಾಲ್ಕು ಲೋಹದ ವಸ್ತುಗಳು ಇರುವುದು ಸ್ಕ್ಯಾನಿಂಗ್ನಲ್ಲಿ ಖಚಿತವಾಗಿದೆ. ಈ ಹಿನ್ನಲೆಯಲ್ಲಿ ಹಲವು
ಕಾರ್ಯಾಚರಣೆಗಳಲ್ಲಿ ಪಾಲ್ಗೊಂಡಿರುವ ಉಡುಪಿಯ ಮುಳುಗು ತಜ್ಞ ಈಶ್ವರ ಮಲ್ಪೆ ತಂಡವು ಕಾರ್ಯಾಚರಣೆ ನಡೆಸಿದರು. ತಂಡದ ಸದಸ್ಯರು, ಅಧಿಕಾರಿಗಳು ಹಾಗೂ ಕಾರ್ಯಾಚರಣೆಯಲ್ಲಿ ಪಾಲ್ಗೊಂಡ ಸಿಬ್ಬಂದಿಯಿಂದ ಮಾಹಿತಿ ಪಡೆದುಕೊಂಡು ಗಂಗಾವಳಿ ನದಿಗಿಳಿದು ಹುಡುಕಾಟ ನಡೆಸಿದರು. ನದಿಯಲ್ಲಿ ಗುರುತಿಸಿರುವ ಪಾಯಿಂಟ್ಗಳಲ್ಲಿ ಈಶ್ವರ ಮಲ್ಪೆ ತಂಡ ನೀರಿನ ಆಳಕ್ಕೆ ಇಳಿದು ಕಾರ್ಯಾಚರಣೆ ನಡೆಸಿದರೂ ಟ್ರಕ್ ಪತ್ತೆ ಸಾಧ್ಯವಾಗಲಿಲ್ಲ. ತುಂಬಿದ ಕೆಸರು ಹಾಗೂ ಕಲ್ಲುಗಳು ಇದ್ದ ಕಾರಣ ಟ್ರಕ್ ಪತ್ತೆ ಸಾಧ್ಯವಾಗಲಿಲ್ಲ. ಶೋಧ ಕಾರ್ಯ 13ನೇ ದಿನವಾದ ಭಾನುವಾರವೂ ಮುಂದುವರಿಯಲಿದೆ. ಈ ಹಿಂದೆಯೂ ನೀರಲ್ಲಿ ಮುಳುಗಿ ಹಲವರನ್ನು ರಕ್ಷಣೆ ಮಾಡಲು ಕಾರ್ಯಾಚರಣೆ ಮಾಡಿರುವ ತಂಡ, ಉಡುಪಿಯಿಂದ ಅಂಕೋಲಾದ ಶಿರೂರಿಗೆ ಆಗಮಿಸಿ ಭಾರೀ ನೀರಿನ ಸೆಳೆತದ ಮಧ್ಯೆಯೂ ನೀರಿಗೆ ಇಳಿದು ಕಾರ್ಯಾಚರಣೆ ನಡೆಸಿದರು.
ಈ ಬಗ್ಗೆ ಮಾಹಿತಿ ನೀಡಿರುವ ಜಿಲ್ಲಾಧಿಕಾರಿ ಲಕ್ಷ್ಮೀಪ್ರಿಯಾ ಕೆ., ”ಡ್ರೋನ್ ಸ್ಕ್ಯಾನಿಂಗ್ ತಂಡವು 4 ಸ್ಥಳಗಳನ್ನು ಗುರುತಿಸಿ ವರದಿ ನೀಡಿದೆ. ಈ ಪೈಕಿ ಒಂದು ಜಾಗದಲ್ಲಿ ಸ್ಟ್ರಾಂಗ್ ಸಿಗ್ನಲ್ಗಳನ್ನು ಗುರುತಿಸಿದೆ. ಇಲ್ಲಿ ತಂಡ ಪರಿಶೀಲನೆ ನಡೆಸಿದೆ. ಫ್ಲೋಟಿಂಗ್ ಪ್ಲಾಟ್ಫಾರಂ ತಜ್ಞರ ತಂಡ ಅಗಮಿಸಲಿದೆ. ಹುಡುಕಾಟ ಪ್ರಯತ್ನವನ್ನು ಮುಂದುವರೆಸುತ್ತೇವೆ ಎಂದು ಮಾಹಿತಿ ನೀಡಿದರು.