ಸುಳ್ಯ:ಸುಳ್ಯದ ರಂಗಮಯೂರಿ ಕಲಾಶಾಲೆ, ಪ್ರಣವ ಸೌಹಾರ್ದ ಸಹಕಾರಿ ಸಂಘ, ಮತ್ತು ಸುದ್ದಿ ಸಮೂಹ ಸಂಸ್ಥೆಗಳ ಆಶ್ರಯದಲ್ಲಿ ವಿವಿಧ ಸಂಘ ಸಂಸ್ಥೆಗಳ ಸಹಯೋಗದಲ್ಲಿ ವಿಕಸಿತ ಭಾರತದ ಕಡೆ ಮಕ್ಕಳ ನಡೆ ಎಂಬ ಧೈಯದೊಂದಿಗೆ ಸುಳ್ಯದಲ್ಲಿ ನಡೆಯುತ್ತಿರುವ ಸಂಕಲ್ಪ ಮಕ್ಕಳ ಹಬ್ಬದಲ್ಲಿ ಮೊದಲ ದಿನ ವಿವಿಧ ವಿಚಾರಗೋಷ್ಠಿಗಳು, ಸಾಂಸ್ಕೃತಿಕ ಸಂಭ್ರಮ ಮೇಳೈಸಿತು.ಸುಳ್ಯದ
ಅಮರಶ್ರೀಭಾಗ್ನ ಜಾನಕಿ ವೆಂಕಟರಮಣ ಗೌಡ ಸಭಾಭವನದಲ್ಲಿ ನಡೆಯುತ್ತಿರುವ ಹಬ್ಬದ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳಿಗೆ ಸಾಂಸ್ಕೃತಿಕ – ಸಾಹಿತ್ಯ ಸ್ಪರ್ಧೆಗಳು, ವೇದಿಕೆ ಪ್ರದರ್ಶನಗಳು, ವಿಚಾರ ಗೋಷ್ಠಿಗಳು ನಡೆಯಿತು. ಮನೆಗೊಂದು ಗಿಡ ಪರಿಸರ ಜಾಗೃತಿ, ಮಕ್ಕಳ ಆರೋಗ್ಯಕರ ಆಹಾರ ಮೇಳ, ಪುಸ್ತಕ ಮೇಳ, ಹೂ – ಹಣ್ಣಿನ ಗಿಡಗಳ ಮಾರಾಟ ಮಳಿಗೆ, ಆರೋಗ್ಯ ತಪಾಸಣಾ ಶಿಬಿರ, ಮಕ್ಕಳ ಆಧಾರ್ ತಿದ್ದುಪಡಿ ಮತ್ತು

ನೋಂದಣಿ, ಉಳಿತಾಯ ಜಾಗೃತಿಗಾಗಿ ಬ್ಯಾಂಕಿಂಗ್ ಸೇವಾ ಮಾಹಿತಿ, ಮಾವು, ಹಲಸು, ಅನನಾಸು ಹಣ್ಣಿನ ಹೋಳಿಗೆ ಸ್ಥಳದಲ್ಲೇ ತಯಾರಿ, ಪೋಷಕರಿಗಾಗಿ ವಿನೂತನ ಮಾಹಿತಿ ಕಾರ್ಯಾಗಾರ ಮಾತೃ ಸಂಗಮ ಗಮನ ಸೆಳೆಯಿತು. ಸಂಜೆ ಸಾಂಸ್ಕೃತಿಕ ಮನೋರಂಜನಾ ಕಾರ್ಯಕ್ರಮಗಳು ಮುದ ನೀಡಿತು. ಆಧುನಿಕ ತಾರಾಲಯ ಪ್ರದರ್ಶನಗಳು, ಕೃತಕ ಬುದ್ದಿಮತ್ತೆಯ ಯಾಂತ್ರಿಕ ಮಾನವ ಮತ್ತು ಶ್ವಾನ ಚಟುವಟಿಕೆಗಳು, ವರ್ಚುವಲ್ ರಿಯಾಲಿಟಿ ಶೋ ಪಾರಂಪರಿಕ ವಸ್ತುಗಳ ಪ್ರದರ್ಶನ ಮತ್ತು ಪ್ರಾತ್ಯಕ್ಷಿಕೆ ವಿಶೇಷ ಆಕರ್ಷಣೆ ಪಡೆಯಿತು.
ವಿಚಾರಗೋಷ್ಠಿಯಲ್ಲಿ ಅ.9ರಂದು ಪರಿಸರ ಜಾಗೃತಿ ಮತ್ತು ನಿರ್ವಹಣೆಯ ವಿಷಯದ ಕುರಿತು ಪರಿಸರ ತಜ್ಞರಾದ ಭಜನ್ ಬೋಪಣ್ಣ ಸಂಪನ್ಮೂಲ ವ್ಯಕ್ತಿಯಾಗಿ ಮಾಹಿತಿ ನೀಡಿದರು.ಮಕ್ಕಳ ಸಾಮಾಜಿಕ ಜವಾಬ್ದಾರಿ ಹಾಗೂ ಮಾಧ್ಯಮಗಳ ಬಳಕೆ ವಿಷಯದ ವಿಚಾರಗೋಷ್ಠಿಯಲ್ಲಿ ಸುಳ್ಯದ

ಶಿಶು ಅಭಿವೃದ್ಧಿ ಯೋಜನಾಧಿಕಾರಿ ಶೈಲಜಾ ಕುಕ್ಕುಜಡ್ಗ ವಿಚಾರ ಮಂಡಿಸಿದರು.ಪೋಷಕರಿಗಾಗಿ ವಿನೂತನ ಕಾರ್ಯಗಾರ ಮಾತೃ ಸಂಗಮ ಮಾಲಿಕೆಯಡಿ ವ್ಯಸ್ಥ ಜೀವನಸ್ವಸ್ಥ ಭೋಜನ ವಿಷಯದ ಕುರಿತು ವಿಚಾರಗೋಷ್ಠಿಯಲ್ಲಿ ಆರೋಗ್ಯಕರ ಆಹಾರ ಹಾಗೂ ತಿಂಡಿಗಳ ತಯಾರಿ ಬಗ್ಗೆ ಕಾರ್ಯಾಗಾರ ಮತ್ತು ಪ್ರಾತ್ಯಕ್ಷಿಕೆ ಸಾವಯವ ಕೃಷಿಕ ಗ್ರಾಹಕ ಬಳಗ ಮಂಗಳೂರು ಪ್ರಸ್ತುತ ಪಡಿಸಿತು.
ಅ.9ರಂದು ಪ್ರಾಥಮಿಕ ಶಾಲಾ ವಿದ್ಯಾರ್ಥಿಗಳಿಗೆ ಗುಂಪು ಗಾಯನ ಸ್ಪರ್ಧೆ, ಅರೆಭಾಷೆ ಹಾಡಿಗೆ ನೃತ್ಯ ಸ್ಪರ್ಧೆ ನಡೆಯಿತು. ಸಂಜೆ
ಸಾಂಸ್ಕೃತಿಕ ಸಂಭ್ರಮ ನಡೆಯಿತು.








