ಸುಳ್ಯ:ಸರಕಾರದಿಂದ ಬಿಡುಗಡೆಯಾದ ಅನುದಾನದಲ್ಲಿ ಗುದ್ದಲಿಪೂಜೆ, ಕಾಮಗಾರಿಗಳ ಉದ್ಘಾಟನೆ ಸಂದರ್ಭದಲ್ಲಿ ಶಾಸಕರು ಕೇವಲ ಬಿಜೆಪಿ ನಾಯಕರನ್ನು ಮತ್ತು ಕಾರ್ಯಕರ್ತರನ್ನು ಮತ್ತು ಸೇರಿಸಿ ಕಾರ್ಯಕ್ರಮ ನಡೆಸುತ್ತಿದ್ದಾರೆ. ಕಾಂಗ್ರೆಸ್ ಪ್ರತಿನಿಧಿಗಳನ್ನು ಹಾಗು ಇಲಾಖಾ ಅಧಿಕಾರಿಗಳನ್ನು ಕಡೆಗಣಿಸುತ್ತಿದ್ದಾರೆ ಎಂದು ರಾಜ್ಯ ಕನಿಷ್ಠ ವೇತನ ಸಲಹಾ ಮಂಡಳಿ ಅಧ್ಯಕ್ಷ ಟಿ.ಎಂ.ಶಹೀದ್ ತೆಕ್ಕಿಲ್ ಹೇಳಿದರು. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ
ಅವರು ವಿವಿಧ ಗ್ರಾಮಗಳಲ್ಲಿ ಸರಕಾರಿ ಅನುದಾನದಲ್ಲಿ ಶಾಸಕರು ಗುದ್ದಲಿ ಪೂಜೆ ನೆರವೇರಿಸುವ ಸಂದರ್ಭದಲ್ಲಿ ಬಿಜೆಪಿ ಕಾರ್ಯಕರ್ತರು, ನಾಯಕರು ಮಾತ್ರ ಇರುತ್ತಾರೆ.ಕಾಂಗ್ರೆಸ್ ಪ್ರತಿನಿಧಿಗಳು ಹಾಗು ಇಲಾಖಾ ಅಧಿಕಾರಿಗಳನ್ನು ಶಾಸಕರು ವಿಶ್ವಾಸಕ್ಕೆ ತೆಗೆದುಕೊಳ್ಳುವುದಿಲ್ಲ ಎಂದು ಹೇಳಿದರು. ಅಡಿಕೆ ಕೃಷಿಕರ ಸಮಸ್ಯೆ ಪರಿಹಾರಕ್ಕೆ ಕೇಂದ್ರ ಕೃಷಿ ಸಚಿವರನ್ನು ಕರೆ ತರುವುದಾಗಿ ಸಂಸದರು ಹೇಳಿ ಎರಡು ವರ್ಷ ಕಳೆದರೂ ಇನ್ನೂ ಕೂಡ ಸಚಿವರು ಬರಲಿಲ್ಲಿ, ಹಳದಿ ರೋಗ ಬಾದಿತ ಅಡಿಕೆ ಕೃಷಿಕರಿಗೆ ಯಾವುದೇ ಪರಿಹಾರ ದೊರಕಿಸಿಲ್ಲ ಎಂದು ಅವರು ಹೇಳಿದರು.
ಸುಳ್ಯದ ವಿದ್ಯುತ್ ಸಮಸ್ಯೆ ಕುರಿತು ಪತ್ರಕರ್ತರು ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು ಸುಳ್ಯದಲ್ಲಿ ವಿದ್ಯುತ್ ಸಮಸ್ಯೆ ಬಿಗಡಾಯಿಸಿರುವುದರ ಬಗ್ಗೆ ಇಂಧನ ಸಚಿವರ ಹಾಗು ಮೆಸ್ಕಾಂ ಅಧ್ಯಕ್ಷರ ಗಮನಕ್ಕೆ ತರಲಾಗಿದೆ. ಮುಂದಿನ ವಾರದಲ್ಲಿ ಮೆಸ್ಕಾಂ ಅಧಿಕಾರಿಗಳ ಸಭೆ ನಡೆಸುವುದಾಗಿ ಮೆಸ್ಕಾಂ ಅಧ್ಯಕ್ಷರು ತಿಳಿಸಿದ್ದಾರೆ ಎಂದು ಅವರು ಹೇಳಿದರು.
ಮತ ಕಳ್ಳತನದ ಬಗ್ಗೆ ಜನಜಾಗೃತಿ ಮೂಡಿಸಲು ಪ್ರತಿ ಬ್ಲಾಕ್ ಮಟ್ಟದಲ್ಲಿ ಜನಜಾಗೃತಿಗಾಗಿ ಪಾದಯಾತ್ರೆ ನಡೆಸಲು ಕೆಪಿಸಿಸಿ ನಿರ್ಧರಿಸಿದೆ ಎಂದು ಶಹೀದ್ ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಕಾಂಗ್ರೆಸ್ ಮುಖಂಡರಾದ ಸಿದ್ದಿಕ್ ಕೊಕ್ಕೊ, ಸಲೀಂ ಪೆರಂಗೋಡಿ, ರಕ್ಷಿತ್ ದೊಡ್ಡಡ್ಕ, ಗಣೇಶ್ ನಾಗಪಟ್ಟಣ ಉಪಸ್ತಿತರಿದ್ದರು.








