ಕೊಚ್ಚಿ:ರಾಷ್ಟ್ರ ಪ್ರಶಸ್ತಿ ವಿಜೇತ ಮಲಯಾಳಂ ನಟ, ಹಾಸ್ಯನಟನೆಯ ಮೂಲಕ ಜನಮನ ಗೆದ್ದ ಸಿನಿಮಾ ತಾರೆ ಸಲೀಂ ಕುಮಾರ್ (56) ಕೊಚ್ಚಿಯ ಖಾಸಗಿ ಆಸ್ಪತ್ರೆಯಲ್ಲಿ ಶನಿವಾರ ರಾತ್ರಿ ನಿಧನರಾಗಿದ್ದಾರೆ. ಅವರು ದೀರ್ಘಕಾಲದಿಂದ ಯಕೃತ್ತಿಗೆ ಸಂಬಂಧಿಸಿದ ಕಾಯಿಲೆಯಿಂದ ಬಳಲುತ್ತಿದ್ದರು. ಮೂರು ದಶಕಗಳಿಗೂ ಹೆಚ್ಚು ಕಾಲ ಚಿತ್ರರಂಗದಲ್ಲಿ
ಸಕ್ರಿಯರಾಗಿದ್ದ ಅವರು, 300ಕ್ಕೂ ಹೆಚ್ಚು ಮಲಯಾಳಂ ಚಿತ್ರಗಳಲ್ಲಿ ನಟಿಸಿದ್ದಾರೆ. ‘ಆದಾಮಿಂತೆ ಮಕನ್ ಅಬು’ ಚಿತ್ರದ ಅತ್ಯುತ್ತಮ ಅಭಿನಯಕ್ಕಾಗಿ ಪ್ರತಿಷ್ಠಿತ ರಾಷ್ಟ್ರ ಪ್ರಶಸ್ತಿ ಹಾಗೂ ನಾಲ್ಕು ಬಾರಿ ಕೇರಳ ರಾಜ್ಯ ಚಲನಚಿತ್ರ ಪ್ರಶಸ್ತಿಗಳನ್ನು ಪಡೆದಿದ್ದಾರೆ.1969ರ ಅಕ್ಟೋಬರ್ 10ರಂದು ಎರ್ನಾಕುಳಂ ಜಿಲ್ಲೆಯ ಚಿತ್ತಾಟುಕರ ಎಂಬಲ್ಲಿ ಗಂಗಾಧರನ್-ಕೌಸಲ್ಯ ದಂಪತಿ ಪುತ್ರನಾಗಿ ಜನಿಸಿದ ಸಲೀಂ ಸುನೀತ ಅವರನ್ನು ಮದುವೆಯಾಗಿದ್ದರು. ಚಂದು, ಆರೋಮಲ್ ಇಬ್ಬರೂ ಮಕ್ಕಳು ಕೂಡ ಸಿನಿಮಾ ಕ್ಷೇತ್ರದಲ್ಲಿದ್ದಾರೆ.
ಸಲೀಂ ಕುಮಾರ್ ಅವರು, ತಮ್ಮ ವಿಶಿಷ್ಟ ಹಾಸ್ಯ ಶೈಲಿ ಮತ್ತು ಪೋಷಕ ಪಾತ್ರಗಳ ಮೂಲಕ ಮಲಯಾಳಂ ಚಿತ್ರರಂಗದ ಇತಿಹಾಸದಲ್ಲಿ ಪ್ರಮುಖ ನಟರಾಗಿ ಗುರುತಿಸಿ ಕೊಂಡಿದ್ದರು.ಗಂಭೀರ ಹಾಸ್ಯ ಪಾತ್ರಗಳ ಮೂಲಕ ಮಕ್ಕಳನ್ನು, ಎಳೆಯಯರನ್ನು ನಕ್ಕು ನಗಿಸಿದ್ದ ಅವರು ಗಂಭೀರ ವ್ಯಕ್ತಿತ್ವ ಪಾತ್ರಗಳಿಂದ ಪ್ರೌಢ ಪ್ರೇಕ್ಷಕರನ್ನು ಸೆಳೆದಿದ್ದರು. ಮಿಮಿಕ್ರಿ ವೇದಿಕೆಗಳಿಂದ ಮಲಯಾಳಂ ಸಿನಿಮಾ ರಂಗಕ್ಕೆ ಕಾಲೂರಿದ್ದ ಅವರು ಹಾಸ್ಯ, ವೖಚಾರಿಕತೆ ಎರಡನ್ನೂ ಅದೃಶವಾಗಿ ಬೆಳ್ಳಿ ಪರದೆಯಲ್ಲಿ ಬಿಂಬಿಸಿ ಜನಮನ ಗೆದ್ದ ಅಪರೂಪದ ಕಲಾವಿದರಾಗಿದ್ದರು.
ಕೊಚ್ಚಿನ್ ಕಲಾಭವನ್ ತಂಡದ ಮೂಲಕ ಅವರು ಟಿ. ವಿ ಚ್ಯಾನೆಲ್ ಪ್ರದರ್ಶನ ನೀಡಿ ಜನಗಮನ ಸೆಳೆದಿದ್ದರು. ಆ ಬಳಿಕ ‘ಇಷ್ಟಮಾಣ್ ನೂರು ವಟ್ಟಂ’ ಸಿನಿಮಾ ಮೂಲಕ ಮಲಯಾಳಂ ಸಿನಿಮಾ ರಂಗದ ಅವಿಭಾಜ್ಯ ಘಟಕವಾದರು. ಅನಂತರ ತಮಿಳು, ಬಂಗಾಳಿ ಸಹಿತ 300 ಸಿನಿಮಾಗಳಲ್ಲಿ ನಟಿಸಿದ ಅವರು ಸೌಂದರ್ಯವಿಲ್ಲದೇ ಪ್ರತಿಭೆಯಿಂದಲೇ ಮೆರೆದ ಅಪರೂಪದ ಕಲಾವಿದರು.
ಅಭಿನಯದ ಜತೆ ನಿರ್ದೇಶಕ, ಬರಹಗಾರನಾಗಿಯೂ ಮಿಂಚಿದ್ದ ಸಲೀಂ ಕುಮಾರ್ ತನಗೆ ಒದಗಿದ ಪಾತ್ರಗಳನ್ನು ತನ್ನದೇ ಪರಿಕಲ್ಪನೆ ಯಲ್ಲಿ ರೂಪಿಸಿ, ಮೆರೆಸಿದ ಅನನ್ಯ ಕಲಾವಿದ.ಸತ್ಯಮೇವ ಜಯತೇ, ‘ತೆಂಗಾಶಿ ಪಟ್ಟಣಂ, ಮೀಶ ಮಾಧವನ್, ಸಿಐಡಿ ಮೂಸ, ಪುಲಿವಾಲ್ ಕಲ್ಯಾಣಂ, ತಿಳಕ್ಕಂ, ಮಾಯಾವಿ, ಪಚ್ಚಕುತಿರ, ಚೆಸ್ ಸೇರಿ ಹಲವು ಹಿಟ್ ಸಿನಿಮಾಗಳ ಭಾಗವಾಗಿದ್ದರು.













