ಸುಳ್ಯ:ಅ.24ರಂದು ಸುಳ್ಯ ದಸರಾದ ಶ್ರೀ ಶಾರದಾಂಬೆಯ ಶೋಭಾಯಾತ್ರೆ ಮೆರವಣಿಗೆ ನಡೆಯುವ ಹಿನ್ನಲೆಯಲ್ಲಿ ಸುಳ್ಯ ನಗರದಲ್ಲಿ ವಾಹನ ಸಂಚಾರ ನಿಷೇಧಿಸಿ, ಬದಲಿ ಮಾರ್ಗ ಸೂಚಿಸಿ ದ.ಕ.ಜಿಲ್ಲಾಧಿಕಾರಿ ಆದೇಶ ನೀಡಿದ್ದಾರೆ. ಶ್ರೀಚೆನ್ನಕೇಶವ ದೇವಾಲಯದಿಂದ ಪ್ರಾರಂಭವಾಗಿ ಸುಳ್ಯ ನಗರದಲ್ಲಿ ಶೋಭಾಯಾತ್ರೆ ನಡೆಯಲಿದೆ.ಈ ವೇಳೆಯಲ್ಲಿ
ಸುಳ್ಯ ನಗರದಲ್ಲಿ ರಾಷ್ಟ್ರೀಯ ಹೆದ್ದಾರಿ 275 ಸಂಚಾರವನ್ನು ನಿಷೇಧಿಸಿ ಬದಲಿ ಮಾರ್ಗ ಸೂಚಿಸಲಾಗಿದೆ.
ಬದಲಿ ಮಾರ್ಗ ಸೂಚಿಯಂತೆ ಮೈಸೂರು ಮಡಿಕೇರಿ ಕಡೆಯಿಂದ ಮಂಗಳೂರು ಕಡೆಗೆ ಸಂಚರಿಸುವ ವಾಹನಗಳು ಗಾಂಧಿನಗರ – ಪೊಲೀಸ್ ಠಾಣೆ ಮುಂಭಾಗ ಕಟ್ಟೆ ಜಂಕ್ಷನ್ನಿಂದ ಎಡಕ್ಕೆ ತಿರುಗಿ ವಿವೇಕಾನಂದ ಸರ್ಕಲ್ – ಅಜ್ಜಾವರ -ಪೆರಾಲು ಮಾರ್ಗವಾಗಿ ಅಡ್ಕಾರು ಬಳಿ ಎನ್ಎಚ್ 275 ಸಂಪರ್ಕಿಸುವುದು. ಹಾಗೂ ಮಂಗಳೂರು ಕಡೆಯಿಂದ ಸುಳ್ಯ ಕಲ್ಲುಗುಂಡಿ ಮಡಿಕೇರಿ ಕಡೆಗೆ ಹೋಗುವ ವಾಹನಗಳು ಪೈಚಾರು ಎಂಬಲ್ಲಿ ಎಡಕ್ಕೆ ತಿರುಗಿ ಸೋಣಗೇರಿ – ಕಂದಡ್ಕ ಮಾರ್ಗವಾಗಿ ಉಬರಡ್ಕ ಕ್ರಾಸ್ ಕೆಎಸ್ಆರ್ಟಿಸಿ ಡಿಪೋ ರಸ್ತೆಯಿಂದಾಗಿ ಪರಿವಾರಕಾನ ಎಂಬಲ್ಲಿ ರಾಷ್ಟ್ರೀಯ ಹೆದ್ದಾರಿ 275 ಸಂಪರ್ಕಿಸಿ ಸಂಚರಿಸಲು ಮಾರ್ಗ ಬದಲಾವಣೆ ಸೂಚಿಸಲಾಗಿದೆ.ಅ.24 ಅಪರಾಹ್ನ 2 ಗಂಟೆಯಿಂದ ಅ.25ರಂದು ಪೂ.2 ಗಂಟೆಯ ತನಕ ವಾಹನಗಳ ಮಾರ್ಗ ಬದಲಿಸಿ ಸಂಚರಿಸಲು ಆದೇಶಿಸಲಾಗಿದೆ.
ವಾಹನ ಪಾರ್ಕಿಂಗ್ ನಿಷೇಧ:
ಪಟ್ಟಣ ಪಂಚಾಯತ್ ಆದೇಶದಂತೆ ಅ.24ರಂದು ಸುಳ್ಯ ನಗರದಲ್ಲಿ ರಾಷ್ಟ್ರೀಯ ಹೆದ್ದಾರಿ 275ರಲ್ಲಿ ಜ್ಯೋತಿ ಸರ್ಕಲ್ನಿಂದ ಗಾಂಧಿನಗರ ತನಕ ರಸ್ತೆಯ ಎರಡು ಬದಿಯಲ್ಲಿ ವಾಹನಗಳ ಪಾರ್ಕಿಂಗ್ ನಿಷೇಧಿಸಲಾಗಿದೆ. ಗಾಂಧಿನಗರ ಕರ್ನಾಟಕ ಪಬ್ಲಿಕ್ ಸ್ಕೂಲ್ ಆವರಣ, ಪ್ರಭು ಗ್ರೌಂಡ್, ದೇವಾಲಯದ ಬಳಿ ಇರುವ ಜಾಯಿಂಟ್ ವಿಲ್ ಗ್ರೌಂಡ್, ಎಪಿಎಂಸಿ ಗ್ರೌಂಡ್, ಹಾಗೂ ಜೂನಿಯರ್ ಕಾಲೇಜ್ ಆವರಣದಲ್ಲಿ ಪಾರ್ಕಿಂಗ್ ವ ವ್ಯವಸ್ಥೆ ಕಲ್ಪಿಸಲಾಗಿದೆ.









