ಮೈಸೂರು:ಮೈಸೂರು ದಸರಾ ಮಹೋತ್ಸವದ ಪ್ರಮುಖ ಆಕರ್ಷಣೆಯಾದ ಜಂಬೂ ಸವಾರಿ ಅತ್ಯಂತ ವಿಜೃಂಭಣೆಯಿಂದ ನಡೆಯಿತು.ಲಕ್ಷಾಂತರ ಮಂದಿ ಜಂಬೂ ಸವಾರಿ ವೀಕ್ಷಿಸಿದರು. ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ತಾಯಿ ಚಾಮುಂಡೇಶ್ವರಿಗೆ ಪುಷ್ಪಾರ್ಚನೆ ಮಾಡುವ ಮೂಲಕ ಈ ಐತಿಹಾಸಿಕ ಮೆರವಣಿಗೆಗೆ ಚಾಲನೆ ನೀಡಿದರು.ಇದೇ ಮೊದಲ ಬಾರಿಗೆ
ಪ್ರಶಾಂತ ಆನೆಯು 750 ಕೆಜಿ ತೂಕದ ಭವ್ಯ ಚಿನ್ನದ ಅಂಬಾರಿಯಲ್ಲಿ ನಾಡದೇವತೆ ತಾಯಿ ಚಾಮುಂಡೇಶ್ವರಿಯನ್ನು ಹೊತ್ತು ರಾಜ ಗಾಂಭೀರ್ಯದಿಂದ ಹೆಜ್ಜೆ ಹಾಕಿದ್ದಾನೆ. ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರೊಂದಿಗೆ ಸಂಸದ ಹಾಗೂ ರಾಜವಂಶಸ್ಥ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್,ಕೇರಳಂ ಸಿಎಂ ವಿ.ಡಿ.ಸತೀಶನ್, ತೆಲಂಗಾನ ಸಿಎಂ ರೇವಂತ್ ರೆಡ್ಡಿ,ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಯತೀಂದ್ರ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ಶಿವರಾಜ್ ತಂಗಡಗಿ ಸೇರಿ ಗಣ್ಯರು ಉಪಸ್ಥಿತರಿದ್ದರು.ಅರಮನೆ ಆವರಣದಿಂದ

ಆರಂಭವಾದ ಈ ಜಂಬೂ ಸವಾರಿ ಮೆರವಣಿಗೆಯು ಸುಮಾರು 5 ಕಿ.ಮೀ. ದೂರದಲ್ಲಿರುವ ಬನ್ನಿಮಂಟಪದವರೆಗೆ ಸಾಗಿತು. ಹಾದಿಯುದ್ದಕ್ಕೂ ನೆರೆದಿರುವ ಲಕ್ಷಾಂತರ ಭಕ್ತರು ಮತ್ತು ಪ್ರವಾಸಿಗರು ತಾಯಿ ಚಾಮುಂಡೇಶ್ವರಿಯ ದರ್ಶನ ಪಡೆದು ಪುನೀತರಾಗುತ್ತಿದ್ದಾರೆ.
ರಾಜ್ಯದ ವಿವಿಧ ಕಲೆ, ಸಂಸ್ಕೃತಿ ಹಾಗೂ ಸರ್ಕಾರದ ಸಾಧನೆಗಳನ್ನು ಬಿಂಬಿಸುವ ಸ್ತಬ್ಧಚಿತ್ರಗಳು ಮತ್ತು ಜಾನಪದ ಕಲಾತಂಡಗಳು ಮೆರವಣಿಗೆಯ ರಂಗನ್ನು ಮತ್ತಷ್ಟು ಹೆಚ್ಚಿಸಿತು.
ಇದಕ್ಕೂ ಮುನ್ನ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ಇಲ್ಲಿನ ಅರಮನೆಯ ಅಂಬಾವಿಲಾಸ ಅರಮನೆಯ ಬಲರಾಮ ದ್ವಾರದಲ್ಲಿ ನಂದಿಧ್ವಜ ಪೂಜೆ ಸಲ್ಲಿಸುವ ಮೂಲಕ ವಿಜಯದಶಮಿ ಮೆರವಣಿಗೆಗೆ (ಜಂಬೂಸವಾರಿ) ಮುನ್ನುಡಿ ಬರೆದರು.










