ಸುಳ್ಯ: ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಅಭಿವೃದ್ಧಿ ಆಧಾರದಲ್ಲೇ ಮತ ಯಾಚನೆ ಮಾಡುತಿದ್ದು ಈ ಬಾರಿಯೂ ಬಿಜೆಪಿ ಅಭ್ಯರ್ಥಿ ಕಳೆದ ಬಾರಿಯ ಮತಗಳಿಂದಲೂ ಹೆಚ್ಚು ಲೀಡ್ ಪಡೆದು ಗೆಲುವು ಸಾಧಿಸಲಿದ್ದಾರೆ
ಎಂದು ಮಾಜಿ ಸಚಿವ ಎಸ್.ಅಂಗಾರ ಹೇಳಿದರು. ಸುಳ್ಯ ಪ್ರೆಸ್ ಕ್ಲಬ್ ನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಸುಳ್ಯ ವಿಧಾನಸಭಾ ಕ್ಷೇತ್ರದ ವಿವಿಧ ಭಾಗದಲ್ಲಿ ಚುನಾವಣಾ ಪ್ರಚಾರ ನಡೆಸಿದ ಸಂದರ್ಭ ಕಳೆದ ಬಾರಿಗಿಂತಲೂ
ಹೆಚ್ಚಿಗೆ ಜನರು ಬಿಜೆಪಿಯ ಮೇಲೆ ಒಲವು ವ್ಯಾಪಕವಾಗಿ ವ್ಯಕ್ತವಾಗುತ್ತಿದೆ. ಸರಕಾರದ ಅಭಿವೃದ್ಧಿ ಜನರ ಮನ ಮುಟ್ಟಿದೆ ಎಂದು ಹೇಳಿದರು. ಬಿಜೆಪಿಯವರು ಭಾವನಾತ್ಮಕ ವಾಗಿ ಜನರ ಮುಂದೆ ಹೋಗುತಿದ್ದಾರೆ ಎಂದು ಕಾಂಗ್ರೆಸ್ ಹೇಳುತಿದ್ದು ಅವರ ಮಾತನ್ನು ನಾವು ಖಂಸುತ್ತೇವೆ. ನಾವು ಭಾವನಾತ್ಮಕ ವಾಗಿಯೂ ಎಲ್ಲಿಯೂ ಮತ ಕೇಳಿಲ್ಲ. ಅಭಿವೃದ್ಧಿಯ ಆಧಾರದಲ್ಲೇ ಮತಯಾಚನೆ ಮಾಡುತಿದ್ದೇವೆ. ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಿಸಿದ್ದು ನಮ್ಮ ಸಾಧನೆ. ಬಿಜೆಪಿ ಸರಕಾರದ ಸಾಧನೆ ಸಹಿಸಲು ಸಾಧ್ಯವಾಗದ ಕಾಂಗ್ರೆಸ್ ಬಿಜೆಪಿ ವಿರುದ್ಧ ಆರೋಪ ಮಾಡುತಿದೆ ಎಂದರು. ಅಟಲ್ ಬಿಹಾರಿ ವಾಜಪೇಯಿಯವರು ಪ್ರಧಾನಿಯಾದ ಬಳಿಕ ಪಿಎಂಜಿಎಸ್ವೈ ಯೋಜನೆಯ ಮೂಲಕ ರಸ್ತೆಗಳ ಅಭಿವೃದ್ಧಿಗೆ ವಿಶೇಷ ಮುತುವರ್ಜಿ ವಹಿಸಿ ಗ್ರಾಮೀಣ ರಸ್ತೆಗಳ ಅಭಿವೃದ್ಧಿ ಗೆ ಆದ್ಯತೆ ನೀಡಿದರು. ಬಳಿಕ ಬಂದ ಯುಪಿಎ ಸರಕಾರ ಈ ವ್ಯವಸ್ಥೆಯನ್ನು ನಿಲ್ಲಿಸಿತು.
ಕಳೆದ 10 ವರ್ಷಗಳ ಹಿಂದ ಆಡಳಿತಕ್ಕೆ ಬಂದ ನರೇಂದ್ರ ಮೋದಿಯವರ ಸರಕಾರ ಮತ್ತೆ ಈ ಯೋಜನೆಗೆ ಆದ್ಯತೆ ನೀಡಿ ರಸ್ತೆಗಳ ಅಭಿವೃದ್ಧಿ ಯಾದವು. ಸುಳ್ಯಕ್ಷೇತ್ರದಲ್ಲಿ 24ಕ್ಕೂ ಅಧಿಕ ರಸ್ತೆಗಳು ಸುಸಜ್ಜಿತಗೊಂಡಿರುವುದು ಇದೇ ಯೋಜನೆಯಲ್ಲಿ. ಅಲ್ಲದೆ 21 ರಸ್ತೆಗಳನ್ನು ಮೇಲ್ದರ್ಜೆಗೇರಿಸಿ ಅಭಿವೃದ್ಧಿ ಮಾಡಲಾಗಿದೆ ಎಂದು ಮಾಜಿ ಶಾಸಕರು ವಿವರ ನೀಡಿದರು.1994ರ ಬಳಿಕ ಕ್ಷೇತ್ರದಲ್ಲಿ ರಸ್ತೆ ಅಭಿವೃದ್ಧಿ ಮಾತ್ರವಲ್ಲದೆ, 148 ಸೇತುವೆಗಳ ಅಭಿವೃದ್ಧಿ ಮಾಡಲಾಗಿದೆ. ಮೂಲಭೂತ ಸೌಕರ್ಯಗಳಿಗೂ ಆದ್ಯತೆ ನೀಡಲಾಗಿದೆ. ಬಿಜೆಪಿ ಮಾಡಿದ ಅಭಿವೃದ್ಧಿ ಕಾಂಗ್ರೆಸ್ ಗೆ ಸಹಿಸಲು ಆಗದ ಸ್ಥಿತಿ ಇದೆ. ಆದ್ದರಿಂದ ಇಲ್ಲಸಲ್ಲದ ಆರೋಪ ಮಾಡುತಿದ್ದಾರೆ. ಬಿಜೆಪಿ ಅಭ್ಯರ್ಥಿ ಸುಮಾರು 60 ಸಾವಿರಕ್ಕೂ ಅಧಿಕ ಲೀಡ್ ಪಡೆದು ಗೆಲುವು ಸಾಧಿಸಲಿದ್ದಾರೆ ಎಂದು ಅಂಗಾರರು ಹೇಳಿದರು.
ಪತ್ರಿಕಾಗೋಷ್ಠಿಯಲ್ಲಿ ಬಿಜೆಪಿ ಮಂಡಲ ಪ್ರಧಾನ ಕಾರ್ಯದರ್ಶಿ ವಿನಯ ಕುಮಾರ್ ಕಂದಡ್ಕ, ಯುವ ಮೋರ್ಚಾ ಅಧ್ಯಕ್ಷ ಶ್ರೀಕಾಂತ್ ಮಾವಿನಕಟ್ಟೆ, ಸುನಿಲ್ ಕೇರ್ಪಳ, ನಿಕೇಶ್ ಉಬರಡ್ಕ, ಜಗನ್ನಾಥ ಜಯನಗರ, ಪ್ರದೀಪ್ ಕೊಲ್ಲರಮೂಲೆ, ಲತೀಶ್ ಗುಂಡ್ಯ ನಿಖಿಲ್ ಐವರ್ನಾಡು ಉಪಸ್ಥಿತರಿದ್ದರು.