ನವದೆಹಲಿ: 14ರ ಯುವ ಬ್ಯಾಟರ್ ವೈಭವ್ ಸೂರ್ಯವಂಶಿ (57; 33ಎ, 4×4, 6×4) ಅವರ ಬಿರುಸಿನ ಅರ್ಧಶತಕದ ನೆರವಿನಿಂದ ರಾಜಸ್ಥಾನ ರಾಯಲ್ಸ್ ತಂಡವು ಮಂಗಳವಾರ ನಡೆದ ಐಪಿಎಲ್ ಪಂದ್ಯದಲ್ಲಿ 6 ವಿಕೆಟ್ಗಳಿಂದ ಚೆನ್ನೈ ಸೂಪರ್ ಕಿಂಗ್ಸ್ ತಂಡವನ್ನು ಮಣಿಸಿತು.ಈ ಪಂದ್ಯವು ಪ್ಲೇ ಆಫ್ ದೃಷ್ಟಿಯಿಂದ ಮಹತ್ವ ಹೊಂದಿರಲಿಲ್ಲ. ರಾಜಸ್ಥಾನ ತಂಡ ಈ ಗೆಲುವಿನೊಂದಿಗೆ ಐಪಿಎಲ್ ಹಾಲಿ ಆವೃತ್ತಿಯ ಅಭಿಯಾನವನ್ನು ಮುಗಿಸಿತು.ಸಂಜು ಸ್ಯಾಮ್ಸನ್ ಬಳಗವು ಒಟ್ಟು
14 ಪಂದ್ಯಗಳಲ್ಲಿ ನಾಲ್ಕನ್ನು ಗೆದ್ದು, ಎಂಟು ಅಂಕಗಳೊಂದಿಗೆ ಅಂಕಪಟ್ಟಿಯಲ್ಲಿ ಒಂಬತ್ತನೇ ಸ್ಥಾನದಲ್ಲಿ ಮುಂದುವರಿಯಿತು. ಚೆನ್ನೈ ತಂಡಕ್ಕೆ ಇನ್ನೊಂದು ಪಂದ್ಯ ಬಾಕಿಯಿದ್ದು, ಆರು ಅಂಕಗಳೊಂದಿಗೆ ಕೊನೆಯ ಸ್ಥಾನದಲ್ಲಿ ಉಳಿಯಿತು.ಮೊದಲು ಬ್ಯಾಟ್ ಮಾಡಿದ ಚೆನ್ನೈ ತಂಡವು 20 ಓವರ್ಗಳಲ್ಲಿ 8 ವಿಕೆಟ್ಗಳಿಗೆ 187 ರನ್ ಗಳಿಸಿತು. ಈ ಗುರಿಯನ್ನು ಬೆನ್ನಟ್ಟಿದ ರಾಜಸ್ಥಾನ ತಂಡವು 17 ಎಸೆತಗಳು ಬಾಕಿ ಇರುವಂತೆ 4 ವಿಕೆಟ್ಗೆ 188 ರನ್ ಗಳಿಸಿ ಗೆಲುವಿನ ನಗೆಬೀರಿತು.
ಆರಂಭಿಕ ಆಟಗಾರರಾದ ಯಶಸ್ವಿ ಜೈಸ್ವಾಲ್ (36;19ಎ) ಮತ್ತು ಸೂರ್ಯವಂಶಿ ಮೊದಲ ವಿಕೆಟ್ಗೆ 37 (22ಎಸೆತ) ರನ್ ಸೇರಿಸಿದರು. ಜೈಸ್ವಾಲ್ ನಿರ್ಗಮಿಸಿದ ಬಳಿಕ ಸೂರ್ಯವಂಶಿ ಅವರನ್ನು ಸೇರಿಕೊಂಡ ಸಂಜು (41;31ಎ, 4×3, 6×2) ಎಚ್ಚರಿಕೆಯ ಆಟವಾಡಿದರು. ಎರಡನೇ ವಿಕೆಟ್ ಜೊತೆಯಾಟದಲ್ಲಿ ಅವರಿಬ್ಬರು 98 (59ಎ) ರನ್ ಗಳಿಸಿ ತಂಡವನ್ನು ಗೆಲುವಿನತ್ತ ಕೊಂಡೊಯ್ದರು. ನಂತರ ರಿಯಾನ್ ಪರಾಗ್ (3) ನಿರಾಸೆ ಮೂಡಿಸಿದರೂ ಧ್ರುವ ಜುರೇಲ್ (ಔಟಾಗದೇ 31;12ಎ, 4×2, 6×3) ಮತ್ತು ಶಿಮ್ರಾನ್ ಹೆಟ್ಮೆಯರ್ (ಔಟಾಗದೇ 12) ಕೊನೆಯಲ್ಲಿ ಅಬ್ಬರಿಸಿ ತಂಡವನ್ನು ಗೆಲುವಿನ ದಡ ಸೇರಿಸಿದರು. ಇದಕ್ಕೂ ಮೊದಲು ಆರಂಭಿಕ ಬ್ಯಾಟರ್ ಆಯುಷ್ ಮ್ಹಾತ್ರೆ (43;20ಎ, 4×8, 6×1) ಮತ್ತು ಡಿವಾಲ್ಡ್ ಬ್ರೆವಿಸ್ (42;25ಎ, 4×3, 6×3) ಅವರ ಬ್ಯಾಟಿಂಗ್ ನೆರವಿನಿಂದ ಚೆನ್ನೈ ತಂಡ ಹೋರಾಟದ ಮೊತ್ತ ಗಳಿಸಿತು.
ಒಂದು ಹಂತದಲ್ಲಿ 78 ರನ್ಗಳಿಗೆ 5 ವಿಕೆಟ್ ಕಳೆದುಕೊಂಡು ಅಲ್ಪಮೊತ್ತಕ್ಕೆ ಕುಸಿಯುವ ಆತಂಕ ಎದುರಾಯಿತು. ಈ ಹಂತದಲ್ಲಿ ಜೊತೆಗೂಡಿದ ಬ್ರೆವಿಸ್ ಮತ್ತು ಶಿವಂ ದುಬೆ (39; 32ಎ, 4X2, 6X2) ಅವರು ತಂಡದ ಆತಂಕ ದೂರ ಮಾಡಿದರು. 6ನೇ ವಿಕೆಟ್ ಜೊತೆಯಾಟದಲ್ಲಿ 59 ರನ್ ಸೇರಿಸಿ ಚೇತರಿಕೆ ನೀಡಿದರು. ರಾಜಸ್ಥಾನ ಪರ ಯುಧವೀರ್ ಸಿಂಗ್ ಚರಕ್ 47ಕ್ಕೆ3, ಆಕಾಶ್ ಮಧ್ವಾಲ್ 29ಕ್ಕೆ3 ವಿಕೆಟ್ ಪಡೆದರು.