ಲಾರ್ಡ್ಸ್: ಮಾಜಿ ನಾಯಕ, ಆರಂಭಿಕ ಬ್ಯಾಟರ್ ರೋಹಿತ್ ಶರ್ಮ ಅವರ ನಿವೃತ್ತಿ ವಿಷಯ ಮತ್ತೆ ಚರ್ಚೆಗೆ ಬಂದಿದೆ.ಲಾರ್ಡ್ಸ್ನಲ್ಲಿ ಭಾನುವಾರ ನಡೆಯಲಿರುವ ಭಾರತ ಮತ್ತು ಇಂಗ್ಲೆಂಡ್ ನಡುವಿನ ಮೂರನೇ ಏಕದಿನ ಪಂದ್ಯವು ರೋಹಿತ್ ಶರ್ಮಾ ಅವರ ಅಂತರರಾಷ್ಟ್ರೀಯ ಕ್ರಿಕೆಟ್ ಜೀವನದ ಕೊನೆಯ ಪಂದ್ಯವಾಗುವ ಸಾಧ್ಯತೆಯಿದೆ ಎಂದು
ಹೇಳಲಾಗಿದೆ.ಆರಂಭಿಕ ಬ್ಯಾಟರ್ ಆಗಿರುವ 39 ವರ್ಷದ ರೋಹಿತ್ ಅವರನ್ನು ಮುಂದಿನ ಸರಣಿಗೆ ತಂಡಕ್ಕೆ ಪರಿಗಣಿಸಲು ರಾಷ್ಟ್ರೀಯ ಆಯ್ಕೆ ಸಮಿತಿ ಉತ್ಸುಕವಾಗಿಲ್ಲ ಎಂದು ತಿಳಿದುಬಂದಿದೆ. ಟೆಸ್ಟ್ ಮತ್ತು ಟಿ20 ಅಂತರರಾಷ್ಟ್ರೀಯ ಕ್ರಿಕೆಟ್ಗೆ ಈಗಾಗಲೇ ವಿದಾಯ ಹೇಳಿರುವ ಮಾಜಿ ನಾಯಕ ರೋಹಿತ್ ಅವರು ಏಕದಿನ ಮಾದರಿಯಲ್ಲಿ ಮಾತ್ರ ಭಾರತ ತಂಡಕ್ಕೆ ಆಡುತ್ತಿದ್ದಾರೆ.
ಕೊನೆಯ ಎಂಟು ಏಕದಿನ ಪಂದ್ಯಗಳಲ್ಲಿ ರೋಹಿತ್ ಅವರು 30.1ರ ಸರಾಸರಿಯಲ್ಲಿ ಮತ್ತು 88.6ರ ಸ್ಟ್ರೈಕ್ ರೇಟ್ನಲ್ಲಿ ಒಟ್ಟು 241 ರನ್ ಗಳಿಸಿದ್ದಾರೆ. ಅದರಲ್ಲಿ ಒಂದು ಅರ್ಧಶತಕ ಸೇರಿದೆ. ಮುಂದಿನ ವರ್ಷ ನಡೆಯಲಿರುವ ಏಕದಿನ ವಿಶ್ವಕಪ್ ಟೂರ್ನಿಗೆ ಪರಿಗಣಿಸುವುದು ಅನುಮಾನ ಎನ್ನಲಾಗಿದೆ.ಮೂರು ಇನಿಂಗ್ಸ್ಗಳಲ್ಲಿ ಎರಡು ಶತಕ ಬಾರಿಸಿರುವ ಯಶಸ್ವಿ ಜೈಸ್ವಾಲ್ ಅವರಿಗೆ ಅವಕಾಶ ನೀಡಲು ರಾಷ್ಟ್ರೀಯ ಆಯ್ಕೆಗಾರರು ಆಸಕ್ತಿ ತೋರಿದ್ದಾರೆ ಎನ್ನಲಾಗುತಿದೆ. ಮಧ್ಯೆ ಏಕದಿನ ಕ್ರಿಕೆಟ್ಗೂ ರೋಹಿತ್ ಅವರೇ ನಿವೃತ್ತಿ ಘೋಷಣೆ ಮಾಡುವ ಸಾಧ್ಯತೆಯೂ ಇದೆ ಎಂದು ವರದಿಗಳು ಹೇಳಿದೆ.








