ಬೆಂಗಳೂರು: ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಚೆನ್ನೈ ಸೂಪರ್ ಕಿಂಗ್ಸ್ ತಂಡಗಳು ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಶನಿವಾರ ನಡೆಯಲಿರುವ ಐಪಿಎಲ್ ಪಂದ್ಯದಲ್ಲಿ ಮುಖಾಮುಖಿಯಾಗಲಿವೆ. ಪ್ಲೇ ಆಫ್ ಪ್ರವೇಶಿಸಲು ಈ ಪಂದ್ಯವು ಉಭಯ ತಂಡಗಳಿಗೂ ನಿರ್ಣಾಯಕವಾಗಿದೆ. ಈಗಾಗಲೇ ಮೂರು ತಂಡಗಳು ಪ್ಲೇ ಆಫ್ ಪ್ರವೇಶಿಸಿವೆ. ಉಳಿದಿರುವ ನಾಲ್ಕನೇ ಸ್ಥಾನ ಪಡೆಯಲು
ಫಫ್ ಬಳಗ ಮತ್ತು ಋತುರಾಜ್ ಗಾಯಕವಾಡ್ ಪಡೆ ಸೆಣಸಲಿವೆ. 13 ಪಂದ್ಯಗಳಿಂದ 14 ಅಂಕ ಹಾಗೂ ಉತ್ತಮ ರನ್ರೇಟ್ (+0.528) ಕೂಡ ಹೊಂದಿರುವ ಚೆನ್ನೈ ಸದ್ಯ ನಾಲ್ಕನೇ ಸ್ಥಾನದಲ್ಲಿದೆ. ಒಂದೊಮ್ಮೆ ಈ ಪಂದ್ಯದಲ್ಲಿ ಜಯಿಸಿದರೆ ಅಥವಾ ಮಳೆ ಬಂದು ಪಂದ್ಯ ರದ್ದಾದರೂ ಚೆನ್ಣೈ ತಂಡವು ನಿರಾಯಾಸವಾಗಿ ನಾಲ್ಕರ ಘಟ್ಟ ಪ್ರವೇಶಿಸಲಿದೆ.
ಆದರೆ ಆರ್ಸಿಬಿಯ ಲೆಕ್ಕಾಚಾರ ಸರಳವಾಗಿಲ್ಲ. ತಂಡಕ್ಕೆ ಬರೀ ಗೆಲುವಷ್ಟೇ ಸಾಕಾಗುವುದಿಲ್ಲ. 13 ಪಂದ್ಯಗಳಲ್ಲಿ 12 ಅಂಕ ಗಳಿಸಿರುವ ಬೆಂಗಳೂರು ತಂಡವು ಎದುರಾಳಿಗೆ ಗುರಿಯೊಡ್ಡಿದರೆ 18 ರನ್ಗಳಿಗಿಂತ ಹೆಚ್ಚು ಅಂತರ ಅಥವಾ ಗುರಿ ಬೆನ್ನಟ್ಟಿದರೆ 18.1 ಓವರ್ಗಳಲ್ಲಿ ಗೆಲುವು ಸಾಧಿಸಬೇಕು. ಆಗ ‘ಹಾಲಿ ಚಾಂಪಿಯನ್’ ಚೆನ್ನೈ ಟೂರ್ನಿಯಿಂದ ಹೊರಬಿದ್ದು, ಆರ್ಸಿಬಿ ನಾಲ್ಕನೇ ಸ್ಥಾನಕ್ಕೇರುವುದು. ಅಲ್ಲದೇ ಈ ಟೂರ್ನಿಯ ಮೊಟ್ಟಮೊದಲ ಪಂದ್ಯದಲ್ಲಿ (ಮಾರ್ಚ್ 22) ಚೆನ್ನೈ ಎದುರು ಅನುಭವಿಸಿದ್ದ ಸೋಲಿಗೆ ಮುಯ್ಯಿ ತೀರಿಸಿಕೊಂಡಂತೆಯೂ ಆಗಲಿದೆ. ಆದರೆ, ಒಂದೊಮ್ಮೆ ಆರ್ಸಿಬಿಯು ಈ ಮೇಲಿನ ಅಂತರವನ್ನು ಸಾಧಿಸದೇ ಪಂದ್ಯ ಗೆದ್ದರೂ ಪ್ರಯೋಜನವಾಗದು.
ಈ ಸಲ ಡುಪ್ಲೆಸಿ ಬಳಗವು ಈ ನಿರ್ಣಾಯಕ ಘಟ್ಟಕ್ಕೆ ಬಂದಿರುವುದೇ ವಿಶೇಷ. ಏಕೆಂದರೆ; ಟೂರ್ನಿಯ ಮೊದಲ ಎಂಟು ಪಂದ್ಯಗಳಲ್ಲಿ ಏಳರಲ್ಲಿ ಸೋತಿತ್ತು. ಆದರೆ ನಂತರ ಪುಟಿದೆದ್ದು ಕಳೆದ ಐದು ಪಂದ್ಯಗಳಲ್ಲಿ ಸತತ ಜಯ ಸಾಧಿಸಿದೆ. ಆದ್ದರಿಂದಲೇ ಈ ಪಂದ್ಯದಲ್ಲಿಯೂ ಜಯಿಸುವ ಆತ್ಮವಿಶ್ವಾಸದಲ್ಲಿದೆ. ತಂಡದ ಪ್ರಮುಖ ಬ್ಯಾಟರ್ ವಿಲ್ ಜ್ಯಾಕ್ಸ್ ಇಂಗ್ಲೆಂಡ್ಗೆ ಮರಳಿದ್ದಾರೆ. ಆದ್ದರಿಂದ ಗ್ಲೆನ್ ಮ್ಯಾಕ್ಸ್ವೆಲ್ ಮತ್ತೆ ಕಣಕ್ಕಿಳಿಯಬಹುದು. ಅವರು ಲಯಕ್ಕೆ ಮರಳಿದರೆ ತಂಡದ ಬ್ಯಾಟಿಂಗ್ ಬಲ ಹೆಚ್ಚಲಿದೆ.