ಧರ್ಮಶಾಲಾ: ಬ್ಯಾಟಿಂಗ್ ಹಾಗೂ ಬೌಲಿಂಗ್ ಎರಡೂ ವಿಭಾಗದಲ್ಲಿ ಸಂಘಟಿತ ಹೋರಾಟ ನಡೆಸಿದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಐಪಿಎಲ್ನ ನಿರ್ಣಾಯಕ ಪಂದ್ಯದಲ್ಲಿ ಪಂಜಾಬ್ ಕಿಂಗ್ಸ್ ವಿರುದ್ಧ 60 ರನ್ಗಳ ಭರ್ಜರಿ ಗೆಲುವು ದಾಖಲಿಸಿದೆ. ಮೊದಲು ಬ್ಯಾಟ್ ಮಾಡಿದ ಆರ್ಸಿಬಿ 20 ಓವರ್ಗಳಲ್ಲಿ 7 ವಿಕೆಟ್ ನಷ್ಟಕ್ಕೆ 241 ರನ್ ಗಳಿಸಿತು. ಗುರಿ ಬೆನ್ನಟ್ಟಿದ
ಪಂಜಾಬ್ ಕಿಂಗ್ಸ್ 17 ಓವರ್ಗಳಲ್ಲಿ181 ರನ್ಗೆ ಆಲ್ ಔಟ್ ಆಯಿತು. ಪಂಜಾಬ್ ಪರ ರೈಲ್ ರೋಸೋವ್ 27 ಎಸೆತಗಳಲ್ಲಿ 61, ಶಶಾಂಕ್ ಸಿಂಗ್ 21 ಎಸೆತಗಳಲ್ಲಿ 37, ಜಾನಿ ಬೆಯರ್ಸ್ಟೋವ್ 16 ಎಸೆತಗಳಲ್ಲಿ 27 ರನ್ ಬಾರಿಸಿದರು. ಆರ್ಸಿಬಿ ಪರ ಮಹಮ್ಮದ್ ಸಿರಾಜ್ 3, ಸ್ವಪ್ನಲ್ ಸಿಂಗ್, ಲಾಕಿ ಫರ್ಗ್ಯುಸನ್ ತಲಾ ಎರಡು ವಿಕೆಟ್ ಕಿತ್ತರು.
ಮೊದಲು ಬ್ಯಾಟಿಂಗ್ ಮಾಡಿದ ಆರ್ಸಿಬಿ ಪರ ಆರಂಭಿಕ ಬ್ಯಾಟರ್ ವಿರಾಟ್ ಕೊಹ್ಲಿ 92 ರನ್ ಬಾರಿಸಿದರು. 42 ಎಸೆತಗಳಲ್ಲಿ 7 ಬೌಂಡರಿ ಮತ್ತು 6 ಸಿಕ್ಸರ್ ಸಿಡಿಸುವ ಮೂಲಕ ಪ್ರೇಕ್ಷಕರಿಗೆ ಭರಪೂರ ಮನರಂಜನೆ ನೀಡಿದರು. ಯುವ ಬ್ಯಾಟರ್ ರಜತ್ ಪಾಟಿದಾರ್ 23 ಎಸೆತಗಳಲ್ಲಿ ಬೌಂಡರಿ ಹಾಗೂ 6 ಸಿಕ್ಸರ್ ಸಹಿತ 55 ರನ್ ಚಚ್ಚಿದರು. ಈ ಇಬ್ಬರ 76 ರನ್ಗಳ ಜತೆಯಾಟ ಆರ್ಸಿಬಿಗೆ ಬೃಹತ್ ಮೊತ್ತ ದಾಖಲಿಸಲು ನೆರವಾದವು. ಕ್ಯಾಮರೂನ್ ಗ್ರೀನ್ 46 ರನ್,
ವಿಲ್ ಜ್ಯಾಕ್ಸ್ 12, ಫಫ್ ಡುಪ್ಲೆಸಿಸ್ 9, ಮಹಿಪಾಲ್ 0 ಹಾಗೂ ದಿನೇಶ್ ಕಾರ್ತಿಕ್ 18 ರನ್ ಗಳಿಸಿದರು.
ಪಂಜಾಬ್ ಪರ ಹರ್ಷಲ್ ಪಟೇಲ್ 3 ವಿಕೆಟ್ ಪಡೆದರು.
ವಿದ್ವತ್ ಕಾವೇರಪ್ಪ 2 , ಸ್ಯಾಮ್ ಕರನ್, ಅರ್ಶದೀಪ್ ಸಿಂಗ್ ತಲಾ 1 ವಿಕೆಟ್ ಪಡೆದರು.
ವಿರಾಟ್ ಕೊಹ್ಲಿ ಪ್ಲೆಯರ್ ಆಪ್ ದ ಮ್ಯಾಚ್ ಆದರು. 12 ಪಂದ್ಯಗಳನ್ನು ಆಡಿರುವ ಆರ್ಸಿಬಿ 5 ಗೆಲುವು ದಾಖಲಿಸಿ 10 ಅಂಕಗಳೊಂದಿಗೆ 7ನೇ ಸ್ಥಾನದಲ್ಲಿದೆ.