ಸುಳ್ಯ: ಪಯಸ್ವಿನಿ ತಟದ ಸುಂದರ ಪರಿಸರದಲ್ಲಿ ರಾಘವೇಂದ್ರ ಮಠ ಸ್ಥಾಪನೆ ಆದ ಬಳಿಕ ಮಠದ ಮೂಲಕ ನಮ್ಮ ಧಾರ್ಮಿಕ ಆಚರಣೆಗಳಿಗೆ ಇನ್ನಷ್ಟು ಪ್ರಾಮುಖ್ಯತೆ ಬಂದಿದೆ, ಎಲ್ಲರಿಗೂ ರಾಯರ ದರ್ಶನ, ಅನುಗ್ರಹ ಪಡೆಯಲು ಸಾಧ್ಯವಾಗಿದೆ ಎಂದು ಶಾಸಕಿ ಭಾಗೀರಥಿ ಮುರುಳ್ಯ ಹೇಳಿದ್ದಾರೆ. ಸುಳ್ಯ ಶ್ರೀ ಗುರು ರಾಘವೇಂದ್ರ ಮಠದಲ್ಲಿ ರಾಯರ 353 ನೇ ವರ್ಷದ ಆರಾಧನಾ ಮಹೋತ್ಸವದ ಅಂಗವಾಗಿ ನಡೆದ
ಧಾರ್ಮಿಕ ಸಭಾ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.ರಾಮನ ನಾಮಸ್ಮರಣೆಯಿಂದ ಬದುಕು ಪಾವನವಾಗುತ್ತದೆ ಎಂದ ಅವರು ರಾಘವೇಂದ್ರ ಮಠದ ಮೂಲಕ ನಿರಂತರ ಧಾರ್ಮಿಕ, ಸಾಂಸ್ಕೃತಿಕ ಚಟುವಟಿಕೆಗಳು ನಡೆಯುವುದರಿಂದ ನಮ್ಮ ಸಂಸ್ಕೃತಿ, ಸಂಸ್ಕಾರ ಬೆಳೆಯುತ್ತದೆ. ನಮ್ಮ ಧರ್ಮ,ಧಾರ್ಮಿಕತೆಯನ್ನು ಇನ್ನಷ್ಟು ಗಟ್ಟಿಯಾಗಿಸಲು ಸಾಧ್ಯವಾಗಿದೆ ಎಂದರು.ನೂತನ ಸಭಾಭವನ ‘ಪ್ರಹ್ಲಾದ ಮಂಟಪ’ದ ಉದ್ಘಾಟನೆಯನ್ನು ಶಾಸಕರು ನೆರವೇರಿಸಿದರು.
ಧಾರ್ಮಿಕ ಉಪನ್ಯಾಸ ನೀಡಿದ ವಿದ್ವಾಂಸರಾದ ವಿಶ್ವಮೂರ್ತಿ ಬಡಕ್ಕಿಲ್ಲಾಯ ಮಾತನಾಡಿ ‘ಶಿಷ್ಯರ ಮನಸ್ಸನ್ನು ಅರಿತು ಶಿಷ್ಯರ ಇಷ್ಟಾರ್ಥಗಳನ್ನು ಈಡೇರಿಸುವ ಮಹಾ ಗುರುಗಳು ಹಾಗೂ ತತ್ವಜ್ಞಾನಿಗಳು ರಾಘವೇಂದ್ರ ಸ್ವಾಮಿಗಳು. ಭಕ್ತರ ಮನಸ್ಸನ್ನು ಅರಿತು, ಬೇಡಿಕೆಯನ್ನು ಈಡೇರಿಸುವವರು. ರಾಘವೇಂದ್ರ ಸ್ವಾಮಿಗಳ ಅನುಗ್ರಹ ಇದ್ದರೆ ಯಾವುದನ್ನೂ ಸಾಧಿಸಬಹುದು.ಕಷ್ಟಗಳನ್ನು ದೂರ ಮಾಡುವ ಕಾರುಣ್ಯವಾರಿಧಿ ರಾಘವೇಂದ್ರ ಸ್ವಾಮಿಗಳು ಎಂದು ಹೇಳಿದರು.
ಮುಖ್ಯ ಅತಿಥಿಗಳಾಗಿದ್ದ ಹಿರಿಯ ಉದ್ಯಮಿ ಬಲರಾಮ
ಆಚಾರ್ಯ ಮಾತನಾಡಿ ಧಾರ್ಮಿಕ ಆಚರಣೆಗಳಿಗೆ ಸಾಮಾಜಿಕ ಅಯಾಮಗಳು ಬರುತ್ತಿರುವುದು ನಮ್ಮಲ್ಲಿ ಒಗ್ಗಟ್ಟನ್ನು ಉಂಟು ಮಾಡಲು ಸಹಾಯಕವಾಗಿದೆ ಎಂದು ಹೇಳಿದರು.
ಬೃಂದಾವನ ಸೇವಾ ಟ್ರಸ್ಟ್ನ ಅಧ್ಯಕ್ಷ ಎಂ.ಎನ್. ಶ್ರೀಕೃಷ್ಣ ಸೋಮಯಾಗಿ ಸಮಾರಂಭದ ಅಧ್ಯಕ್ಷತೆ ವಹಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಕೆವಿಜಿ ಸುಳ್ಯ ಹಬ್ಬ ಸಮಾಜಸೇವಾ ಸಂಘದ ಅಧ್ಯಕ್ಷ ಡಾ.ಎನ್.ಎ.ಜ್ಞಾನೇಶ್, ಸಾಹಿತಿಗಳು ಹಾಗೂ ಕೃಷಿಕರಾದ ಪ್ರಭಾಕರ ಕಲ್ಲೂರಾಯ ಬೊಳ್ಳೂರು, ಸಾಹಿತಿ ಸುಮಾ ಸುಬ್ಬರಾವ್ ಅತಿಥಿಗಳಾಗಿದ್ದರು.
ಪತ್ರಕರ್ತ ಶಿವಪ್ರಸಾದ್ ಆಲೆಟ್ಟಿ ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು. ಪ್ರವೀಣ್ ರಾವ್ ವಂದಿಸಿದರು.
ಸುಳ್ಯ ಶ್ರೀ ಗುರು ರಾಘವೇಂದ್ರ ಮಠದಲ್ಲಿ ರಾಯರ 353 ನೇ ವರ್ಷದ ಆರಾಧನಾ ಮಹೋತ್ಸವದ ಅಂಗವಾಗಿ ಮಠದಲ್ಲಿ ವಿವಿಧ ಕಾರ್ಯಕ್ರಮಗಳು ನಡೆಯಿತು. ಬೆಳಿಗ್ಗಿನಿಂದ ಗಣಪತಿ ಹವನ ,ಪವಮಾನ ಹೋಮ, ಪವಮಾನ ಅಭಿಷೇಕ, ಬ್ರಾಹ್ಮಣಾರಾಧನೆ, ಮಹಾಪೂಜೆ ನಡೆದು ಮಂತ್ರಾಕ್ಷತೆ ಯೊಂದಿಗೆ ಪ್ರಸಾದ ವಿತರಣೆ ನಡೆಯಿತು. ಭಜನಾ ಕಾರ್ಯಕ್ರಮ ನಡೆಯಿತು.