ಸುಳ್ಯ: ನೆತ್ತಿ ಸುಡುವ ಬಿಸಿಲು, ಬೆವರಿ ಬಸವಳಿಯುವ ಉರಿ ಸೆಕೆ, ಒಣಗಿದ ತೋಟಗಳಿಗೆ ನೀರು ಹಾಯಿಸುವ ಸ್ಥಿತಿ. ಕಂಡು ಕೇಳರಿಯದ ಆಗಸ್ಟ್ ತಿಂಗಳು ಮುಗಿದು ಹೋಗಿದೆ. ಧಾರಾಕಾರ ಕುಂಭದ್ರೋಣ ಮಳೆ ಸುರಿದು ಭೂಮಿ ಪಸಂದಾಗಿ ತೋಯ್ದು ಹೋಗಬೇಕಾದ ದಿನಗಳಲ್ಲಿ ಬಿಸಿಲು, ಒಣ ವಾತಾವರಣ, ಸೆಕೆಯ ದಿನಗಳು ಕಳೆದು ಹೋದವು. ದೇಶದಾದ್ಯಂತ ಎಲ್ಲೆಡೆ ಮಳೆ ಕೊರತೆ
ಉಂಟಾಗಿದೆ. ಬಾರೋ ಬಾರೋ ಮಳೆರಾಯ.. ಹುಯ್ಯೋ..ಹುಯ್ಯೋ ಮಳೆರಾಯ ಎಂದು ಎಲ್ಲೆಡೆ ಹಾಹಾಕಾರ ಶುರುವಾಗಿದೆ. ಸುಳ್ಯ ನಗರದಲ್ಲಿ ಈ ಆಗಸ್ಟ್ ತಿಂಗಳಲ್ಲಿ ಕೇವಲ 330 ಮಿ.ಮಿ.ಮಳೆಯಾಗಿದೆ. 15 ದಿನ ಮಾತ್ರ ಅಲ್ಪ ಸ್ವಲ್ಪ ಮಳೆ ಸುರಿದಿದೆ. 2022 ರಲ್ಲಿ ಆಗಸ್ಟ್ ತಿಂಗಳಲ್ಲಿ1033 ಮಿ.ಮಿ ಮಳೆಯಾಗಿತ್ತು. ಅಂದರೆ ಕಳೆದ ವರ್ಷದ ಆಗಸ್ಟ್ಗಿಂತ ಈ ಆಗಸ್ಟ್ನಲ್ಲಿ 703 ಮಿ.ಮಿ.ಮಳೆ ಕಡಿಮೆಯಾಗಿದೆ. 2022 ಆಗಸ್ಟ್ ಕೊನೆಗೆ 4727 ಮಿ.ಮಿ.ಮಳೆಯಾಗಿದ್ದರೆ ಈ ವರ್ಷ ಆಗಸ್ಟ್ ಮುಕ್ತಾಯದ ವೇಳೆಗೆ 2048 ಮಿ.ಮಿ.ಮಳೆಯಾಗಿದೆ. ಅಂದರೆ 2679 ಮಿ.ಮಿ.ಮಳೆ ಕೊರತೆಯಾಗಿದೆ ಎಂದು ಸುಳ್ಯ ನಗರದಲ್ಲಿ ಮಳೆಯ ಲೆಕ್ಕ ಮಾಡಿ ದಾಖಲಿಸುವ ಶ್ರೀಧರ ರಾವ್ ಹೈದಂಗೂರು ಮಾಹಿತಿ ನೀಡಿದ್ದಾರೆ
2020ರ ಆಗಸ್ಟ್ನಲ್ಲಿ 1243 ಮಿ.ಮಿ ಹಾಗೂ 2021ರಲ್ಲಿ 836 ಮಿ.ಮಿ.ಮಳೆಯಾಗಿತ್ತು.
ಜೂನ್ ತಿಂಗಳಲ್ಲಿ ಮಾನ್ಸೂನ್ ಆರಂಭವಾದಂದಿನಿಂದಲೂ ಮಳೆಯ ಕಣ್ಣಾ ಮುಚ್ಚಾಲೆ ಇತ್ತು. ಜೂನ್ನಲ್ಲಿ ಆಗೊಮ್ಮೆ ಈಗೊಮ್ಮೆ ಮಲೆ ಸುರಿದರೂ ನಿರೀಕ್ಷಿತ ಪ್ರಮಾಣದಲ್ಲಿ ಮಳೆಯಾಗಲಿಲ್ಲ. ಜುಲೈ ತಿಂಗಳಲ್ಲಿ ಉತ್ತಮ ಮಳೆಯಾಗಿದ್ದರೂ ಆಗಸ್ಟ್ ತಿಂಗಳಲ್ಲಿ ಮಳೆ ಸಂಪೂರ್ಣ ದೂರ ಸರಿದಿತ್ತು.
ದೇಶದಲ್ಲಿ ಭಾರೀ ಮಳೆ ಕೊರತೆ:
ಈ ವರ್ಷ ಭಾರತದಲ್ಲಿ ಆಗಸ್ಟ್ ತಿಂಗಳಲ್ಲಿ ಬಿದ್ದ ಸರಾಸರಿ ಮಳೆಯು 16.27 ಸೆಂಟಿ ಮೀಟರ್. ಇದು ಸರಾಸರಿಗಿಂತ 36%ದಷ್ಟು ಕಡಿಮೆಯಾಗಿದೆ. ಈ ತಿಂಗಳಿನಲ್ಲಿ ಸರಾಸರಿ 25.4 ಸೆಂಟಿಮೀಟರ್ ಮಳೆ ಸುರಿಯುತ್ತದೆ. ಇದಕ್ಕಿಂತ ಮೊದಲು, ದೇಶದಲ್ಲಿ ಆಗಸ್ಟ್ ತಿಂಗಳಿನಲ್ಲಿ ಅತ್ಯಂತ ಕಡಿಮೆ ಮಳೆಯಾಗಿದ್ದು 2005ರಲ್ಲಿ. ಆ ವರ್ಷ ದೇಶಾದ್ಯಂತ ಸರಾಸರಿ 19.12 ಸೆಂಟಿಮೀಟರ್ ಮಳೆ ಸುರಿದಿತ್ತು. ಈ ವರ್ಷ ಬಿಹಾರ, ಪೂರ್ವ ಉತ್ತರಪ್ರದೇಶ, ಝಾರ್ಖಂಡ್, ಛತ್ತೀಸ್ಗಢ, ಗಂಗಾ ನದಿ ತೀರದ ಪಶ್ಚಿಮ ಬಂಗಾಳ, ಕೇರಳ, ಕರ್ನಾಟಕದ ಕೆಲವು ಭಾಗಗಳು ಮತ್ತು ಮಹಾರಾಷ್ಟ್ರದಲ್ಲಿ ಕಡಿಮೆ ಮಳೆಯಾಗಿದೆ. ಅದೇ ವೇಳೆ, ಹಿಮಾಚಲಪ್ರದೇಶ ಮತ್ತು ಉತ್ತರಾಖಂಡದಲ್ಲಿ ಮಳೆ ಸಾಮಾನ್ಯ ಪ್ರಮಾಣದಲ್ಲಿತ್ತು.
ಮಳೆಯ ಪ್ರಮಾಣ ಅತ್ಯಂತ ಕಡಿಮೆಯಾಗಿರುವುದಕ್ಕೆ ಅರಬ್ಬಿ ಸಮುದ್ರ ಮತ್ತು ಬಂಗಾಳ ಕೊಲ್ಲಿಯಲ್ಲಿ ನಿರ್ಮಾಣಗೊಂಡಿರುವ ಪ್ರತಿಕೂಲ ಸ್ಥಿತಿಗತಿಗಳು,ಪೂರ್ವ ಮತ್ತು ಮಧ್ಯ ಶಾಂತ ಸಾಗರದ ಮೇಲ್ಮೈ ಬಿಸಿಯಾಗುವ ಎಲ್ ನಿನೊ ಪರಿಸ್ಥಿತಿ ಕಾರಣ ಎಂದು ಭಾರತೀಯ ಹವಾಮಾನ ಇಲಾಖೆ ತಿಳಿಸಿದೆ. ಮಳೆ ಪರಿಸ್ಥಿತಿಯು ಸೆಪ್ಟಂಬರ್ ತಿಂಗಳಲ್ಲಿ ಸುಧಾರಿಸುವ ಸಾಧ್ಯತೆಯಿದೆ ಹವಾಮಾನ ತಜ್ಞರು ವಿಶ್ವಾಸ ವ್ಯಕ್ತಪಡಿಸುತ್ತಾರೆ.