ಎಜ್ಬಾಸ್ಟನ್: ಇಂಗ್ಲೆಂಡ್ ತಂಡದ ನಾಯಕ ಬೆನ್ ಸ್ಟೋಕ್ಸ್ ಟೆಸ್ಟ್ ಕ್ರಿಕೆಟ್ನಲ್ಲಿ ಇದೇ ಮೊದಲ ಬಾರಿಗೆ ‘ಗೋಲ್ಡನ್ ಡಕ್’ (ಮೊದಲ ಎಸೆದಲ್ಲೇ ಔಟ್) ಆದರು. ಸರಣಿಯ 2ನೇ ಪಂದ್ಯದಲ್ಲಿ, ಇಂಗ್ಲೆಂಡ್ ಇನಿಂಗ್ಸ್ನ 22ನೇ ಓವರ್ನಲ್ಲಿ ಕ್ರೀಸ್ಗಿಳಿದ ಅವರನ್ನು ಟೀಂ ಇಂಡಿಯಾದ ವೇಗಿ ಮೊಹಮ್ಮದ್ ಸಿರಾಜ್ ಔಟ್ ಮಾಡಿದರು.
ಇದಕ್ಕೂ ಮುನ್ನ 112 ಪಂದ್ಯಗಳ 201 ಇನಿಂಗ್ಸ್ಗಳಲ್ಲಿ ಬ್ಯಾಟಿಂಗ್ ಮಾಡಿದ್ದ ಸ್ಟೋಕ್ಸ್, ಒಮ್ಮೆಯೂ
ಮೊದಲ ಎಸೆತದಲ್ಲೇ ಔಟ್ ಆಗಿರಲಿಲ್ಲ. ರೂಟ್ ವಿಕೆಟ್ ಉರುಳಿದ ವೇಳೆ ಬ್ಯಾಟಿಂಗ್ಗೆ ಬಂದ ಸ್ಟೋಕ್ಸ್ ಮೇಲೆ ದೊಡ್ಡ ಇನಿಂಗ್ಸ್ ಆಡುವ ಒತ್ತಡವಿತ್ತು. ಆದರೆ, ಅವರಿಗೆ ಖಾತೆ ತೆರೆಯಲೂ ಸಾಧ್ಯವಾಗಲಿಲ್ಲ. ತಾವೆದುರಿಸಿದ ಮೊದಲ ಎಸೆತದಲ್ಲಿ ಪಿಚ್ ಮೇಲೆ ಬಿದ್ದು ವೇಗವಾಗಿ ಪುಟಿದ ಚೆಂಡಿನ ಗತಿ ಅರಿಯಲು ವಿಫಲರಾದ ಸ್ಟೋಕ್ಸ್, ವಿಕೆಟ್ಕೀಪರ್ ರಿಷಭ್ ಪಂತ್ಗೆ ಕ್ಯಾಚ್ ನೀಡಿ ಬಂದಷ್ಟೇ ವೇಗದಲ್ಲಿ ಪೆವಿಲಿಯನ್ಗೆ ವಾಪಸ್ ಆದರು.ಇದುವರೆಗೆ 16 ಬಾರಿ ಸೊನ್ನೆ ಸುತ್ತಿರುವ ಸ್ಟೋಕ್ಸ್, ಗೋಲ್ಡನ್ ಡಕ್ ಆದದ್ದು ಇದೇ ಮೊದಲು. ಇದರೊಂದಿಗೆ, ಅಪರೂಪದ ದಾಖಲೆಯೊಂದು ರಾಹುಲ್ ದ್ರಾವಿಡ್ ಅವರ ಹೆಸರಿನಲ್ಲೇ ಉಳಿಯಿತು.
ಟೆಸ್ ಕ್ರಿಕೆಟ್ನಲ್ಲಿ 164 ಪಂದ್ಯಗಳ 286 ಇನಿಂಗ್ಸ್ಗಳಲ್ಲಿ ಬ್ಯಾಟಿಂಗ್ ಮಾಡಿರುವ ಭಾರತದ ದ್ರಾವಿಡ್, ಒಮ್ಮೆಯೂ ಗೋಲ್ಡನ್ ಡಕ್ ಆಗಿಲ್ಲ. 250ಕ್ಕಿಂತ ಹೆಚ್ಚು ಇನಿಂಗ್ಸ್ಗಳಲ್ಲಿ ಬ್ಯಾಟಿಂಗ್ ಮಾಡಿದವರ ಪೈಕಿ, ಈ ದಾಖಲೆ ಹೊಂದಿರುವುದು ಅವರೊಬ್ಬರೇ. ಈ ದಾಖಲೆಯನ್ನು ಮುರಿಯುವುದು ಕಠಿಣವೇ ಆದರೂ, ಅಂತಹ ಅವಕಾಶ ಸ್ಟೋಕ್ಸ್ಗೆ ಇತ್ತು. ಅದನ್ನು ಕೈಚೆಲ್ಲಿದರು.