ಸುಳ್ಯ:ಪುತ್ತೂರಿನಲ್ಲಿ ಹೊಸ ಸರಕಾರಿ ಮೆಡಿಕಲ್ ಕಾಲೇಜು ಸ್ಥಾಪನೆ ಮಾಡುವುದಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಬಜೆಟ್ನಲ್ಲಿ ಘೋಷಣೆ ಮಾಡಿರುವುದು ಸ್ವಾಗತಾರ್ಹ ಎಂದು ಪುತ್ತೂರು ಸರಕಾರಿ ಮೆಡಿಕಲ್ ಕಾಲೇಜು ಹೋರಾಟ ಸಮಿತಿಯ ಮಾಜಿ ಪ್ರಧಾನ ಕಾರ್ಯದರ್ಶಿ ಹಾಗೂ ಸದಸ್ಯರಾದ ಅಶೋಕ್ ಎಡಮಲೆ ಹೇಳಿದ್ದಾರೆ. ಸುಳ್ಯ ಪ್ರೆಸ್ ಕ್ಲಬ್ನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಹಲವಾರು
ವರ್ಷಗಳ ಬೇಡಿಕೆ, ಹೋರಾಟದ ಫಲವಾಗಿ ಪುತ್ತೂರಿನಲ್ಲಿ ಮೆಡಿಕಲ್ ಕಾಲೇಜು ಸ್ಥಾಪನೆಗೆ ಸರಕಾರ ಅಸ್ತು ನೀಡಿದೆ. ಮೆಡಿಕಲ್ ಕಾಲೇಜಿಗೆ ನಿರಂತರ ಶ್ರಮ ವಹಿಸಿದ ಪುತ್ತೂರು ಶಾಸಕರಾದ ಅಶೋಕ್ ಕುಮಾರ್ ರೈ ಹಾಗೂ ಮೆಡಿಕಲ್ ಕಾಲೇಜಿಗೆ ವರ್ಷಗಳ ಹಿಂದೆಯೇ ಬನ್ನೂರಿನಲ್ಲಿ 40 ಎಕ್ರೆ ಜಾಗ ಕಾದಿರಿಸಿದ ಮಾಜಿ ಶಾಸಕಿ ಶಕುಂತಲಾ ಶೆಟ್ಟಿ ಅವರಿಗೆ ಅಭಿನಂದನೆ ಸಲ್ಲಿಸುತ್ತೇವೆ ಎಂದು ಅವರು ಹೇಳಿದರು. ದ.ಕ.ಜಿಲ್ಲೆಗೆ ಪ್ರಥಮ ಸರಕಾರಿ ಮೆಡಿಕಲ್ ಕಾಲೇಜು ಘೋಷಣೆ ಮಾಡಿರುವುದು ಜಿಲ್ಲೆಯ ಜನ ಸಾಮಾನ್ಯರಿಗೆ ಸಂತಸದ ವಿಷಯ.
ಸುಳ್ಯ, ಪುತ್ತೂರು, ಕಡಬ, ಬೆಳ್ತಂಗಡಿ, ಬಂಟ್ವಾಳ ತಾಲೂಕಿನ ಜನರಿಗೆ ಅತೀ ಹೆಚ್ಚು ಪ್ರಯೋಜನ ಆಗಲಿದೆ. ಜಿಲ್ಲೆಯ ಜನರ ಪಾಲಿಗೆ ಇದೊಂದು ಮಹತ್ವದ ಘೋಷಣೆ. ಈ ಕಾಲೇಜು ಪೂರ್ಣ ಪ್ರಮಾಣದಲ್ಲಿ ಸರಕಾರಿ ಮೆಡಿಕಲ್ ಕಾಲೇಜು ಆಗಿಯೇ ಇರಬೇಕು. ಮೆಡಿಕಲ್ ಕಾಲೇಜ್ ಅದಷ್ಟು ಬೇಗ ಅನುಷ್ಠಾನ ಆಗಬೇಕು. ಈ ನಿಟ್ಟಿನಲ್ಲಿ ಎಲ್ಲರ ಪ್ರಯತ್ನ ಬೇಕು ಎಂದು ಅಶೋಕ್ ಎಡಮಲೆ ಹೇಳಿದರು. ಸುಳ್ಯ ಹಾಗೂ ಪುತ್ತೂರಿನ ಪ್ರಮುಖರು ಸೇರಿ ದಕ್ಷಿಣ ಕನ್ನಡ ಜಿಲ್ಲೆಯ ಹಲವರು ಮೆಡಿಕಲ್ ಕಾಲೇಜಿಗಾಗಿ ನಡೆಸಿದ ಹೋರಾಟದಲ್ಲಿ ಭಾಗವಹಿಸಿದ್ದರು ಎಂದರು.
ಮಲೆನಾಡು ಜಂಟಿ ಕ್ರಿಯಾ ಸಮಿತಿಯ ಸಂಚಾಲಕ ಪ್ರದೀಪ್ ಕುಮಾರ್ ಕೆ.ಎಲ್.ಮಾತನಾಡಿ ಪುತ್ತೂರಿಗೆ ಮೆಡಿಕಲ್ ಕಾಲೇಜು ಘೋಷಣೆ ಮಾಡಿರುವುದು ಸ್ವಾಗತಾರ್ಹ ಮತ್ತು ಸಂತಸದ ವಿಷಯ. ಪುತ್ತೂರು ಜಿಲ್ಲೆಯಾಗುವ ನಿಟ್ಟಿನಲ್ಲಿ ಇದು ಮೊದಲ ಹೆಜ್ಜೆ ಎಂದರು.
ಸುದ್ದಿಗೋಷ್ಠಿಯಲ್ಲಿ ವಸಂತ ಗೌಡ ಪೆಲ್ತಡ್ಕ, ಮಾಧವ ಗೌಡ ಸುಳ್ಯಕ್ಕೋಡಿ, ದಿವಾಕರ ಪೈ ಉಪಸ್ಥಿತರಿದ್ದರು.