ಸುಳ್ಯ: ಹಲವು ವರ್ಷಗಳ ಹೋರಾಟ, ಪ್ರತಿಭಟನೆ, ಮಾಧ್ಯಮಗಳ ವರದಿಯ ಪರಿಣಾಮ ನಿರ್ಮಾಣಗೊಂಡ ಕಾಂಕ್ರೀಟ್ ರಸ್ತೆಯ ಸ್ಥಿತಿ ಅಯೋಮಯವಾಗಿರುವ ದೃಶ್ಯ ಮನ ಕಲಕುತಿದೆ. ಸುಳ್ಯ ನಗರದ ಗಾಂಧಿನಗರದಿಂದ ಆಲೆಟ್ಟಿ ಸಂಪರ್ಕಿಸುವ ಕಾಂಕ್ರೀಟ್ ರಸ್ತೆಯ ಮಧ್ಯೆ ಉದ್ದಕ್ಕೆ ಹೊಂಡ ತೋಡಿ ಅಮೃತ್ ಕುಡಿಯುವ ನೀರಿನ
ಪೈಪ್ ಲೈನ್ ಅಳವಡಿಸಲಾಗಿದೆ. ಆದರೆ ಕಡಿದು ಹಾಕಿದ ಕಾಂಕ್ರೀಟ್ ರಸ್ತೆಯಲ್ಲಿ ಮತ್ತೆ ಕಾಂಕ್ರೀಟ್ ಹಾಕಿ ಸರಿಪಡಿಸದೇ ಇರುವುದರಿಂದ

ರಸ್ತೆ ಸಂಪೂರ್ಣ ನಾಶವಾಗಿದೆ. ರಸ್ತೆಯಲ್ಲಿ ಸಂಚಾರವೂ ದುಸ್ತರವಾಗಿದೆ. ಸಾಮಾನ್ಯವಾಗಿ ರಸ್ತೆಯ ಬದಿಯಲ್ಲಿ ಹೊಂಡ ತೋಡಿ ಪೈಪ್ ಅಳವಡಿಕೆ ಮಾಡಲಾಗುತ್ತದೆ.ಒಂದು ಬದಿಯಿಂದ ಇನ್ನೊಂದು ಬದಿಗೆ ಲೈನ್ ಸ್ಥಾಪಿಸಲು ಅಡ್ಡಕ್ಕೆ ಹೊಂಡ ಮಾಡಲಾಗುತ್ತದೆ. ಆದರೆ ಇಲ್ಲಿ ರಸ್ತೆಯ ಮಧ್ಯೆ ಮೀಟರ್ಗಟ್ಟಲೆ ಉದ್ದಕ್ಕೆ ಬೃಹತ್ ಹೊಂಡ ತೋಡಿ ಎಕ್ಸ್ಪ್ರೆಸ್ ಪೈಪ್ ಲೈನ್ ಅಳವಡಿಸಲಾಗಿದೆ. ಹೊಂಡವನ್ನು ಮುಚ್ಚಿದರೂ ಮತ್ತೆ ಕಾಂಕ್ರೀಟ್ ಮಾಡಿಲ್ಲ. ಇದರಿಂದ ಒಂದು ಬದಿಯ ಕಾಂಕ್ರೀಟ್ ರಸ್ತೆ ಸಂಪೂರ್ಣ ಎಕ್ಕುಟ್ಟಿ ಹೋಗಿದ್ದು ಸಂಚಾರವೇ ದುಸ್ತರವಾಗಿದೆ.
ಇದೀಗ ವಾಹನಗಳು ರಸ್ತೆಯ ಒಂದು ಬದಿಯಲ್ಲಿ ಮಾತ್ರ ಓಡಾಡುವ ಸ್ಥಿತಿ ನಿರ್ಮಾಣ ಆಗಿದೆ. ಇದು ಅಪಾಯವನ್ನು ಆಹ್ವಾನಿಸುತಿದೆ.

ರಸ್ತೆಯ ಸ್ಥಿತಿ ಅಯೋಮಯ:
ಸುಳ್ಯ ಗಾಂಧಿನಗರದಿಂದ ನಾಗಪಟ್ಟಣ ಸೇತುವೆ ತನಕ ಸುಮಾರು 600 ಮೀಟರ್ ರಸ್ತೆ ನಗರ ಪಂಚಾಯತ್ಗೆ ಒಳಪಟ್ಟಿದೆ. ಸಂಪೂರ್ಣ ನಾದುರಸ್ತಿಯಲ್ಲಿದ್ದ ರಸ್ತೆಯನ್ನು
ಹಲವು ವರ್ಷಗಳ ಕಾಲ ಸಾರ್ವಜನಿಕರು ನಡೆಸಿದ ಹೋರಾಟ, ಪ್ರತಿಭಟನೆ, ಮಾಧ್ಯಮಗಳ ವರದಿಯ ಪರುಣಾಮವಾಗಿ ಅಭಿವೃದ್ಧಿ ಪಡಿಸಲಾಗಿತ್ತು. ನಗರ ಪಂಚಾಯತ್ ಅನುದಾನ, ಪ್ರಾಕೃತಿಕ ವಿಕೋಪ ಅನುದಾನ ಬಳಸಿ ರಸ್ತೆ ಅಭಿವೃದ್ಧಿ ಪಡಿಸಲಾಗಿತ್ತು. ಇದರ ಫಲವಾಗಿ

ಸುಂದರ ಕಾಂಕ್ರೀಟ್ ರಸ್ತೆ ನಿರ್ಮಾಣವಾಗಿತ್ತು. ಆದರೆ ಇದೀಗ ಪೈಪ್ಲೈನ್ ಅಳವಡಿಕೆಗೆಂದು ಕಡಿದ ಕಾರಣ ರಸ್ತೆಯ ರಸ್ತೆಯ ಸ್ಥಿತಿ ಸಂಪೂರ್ಣ ಹದಗೆಟ್ಟಿದೆ.
“ಹಲವು ವರ್ಷಗಳ ಬೇಡಿಕೆ, ಹೋರಾಟದ ಫಲವಾಗಿ ನಗರ ಪಂಚಾಯತ್ ಅನುದಾನ, ಪ್ರಾಕೃತಿಕ ವಿಕೋಪ ಪರಿಹಾರ ಅನುದಾನದಿಂದ ರಸ್ತೆ ಅಭಿವೃದ್ಧಿ ಮಾಡಲಾಗಿತ್ತು. ಇದೀಗ ಕಡಿದು ಹಾಕಲಾದ ರಸ್ತೆಯನ್ನು ಕೂಡಲೇ ಮೊದಲಿನಂತೆ ಕಾಂಕ್ರೀಟ್ ರಸ್ತೆ ಮಾಡಿಕೊಡಬೇಕು. ತಪ್ಪಿದಲ್ಲಿ ಸಾರ್ವಜನಿಕರನ್ನು ಸೇರಿಸಿ ಪ್ರತಿಭಟನೆ ನಡೆಸಲಾಗುವುದು.
-ಕೆ.ಎಸ್.ಉಮ್ಮರ್
ನ.ಪಂ. ಸದಸ್ಯರು.
“ಪೈಪ್ಲೈನ್ ಅಳವಡಿಕೆಗೆ ಕಡಿದು ಹಾಕಲಾದ ಎಲ್ಲಾ ರಸ್ತೆಗಳನ್ನು ದುರಸ್ತಿ ಪಡಿಸಿ ಪೂರ್ವಸ್ಥಿತಿಗೆ ತರುವಂತೆ ಒಳಚರಂಡಿ ಮಂಡಳಿ ಇಂಜಿನಿಯರ್ಗಳಿಗೆ ನಗರ ಪಂಚಾಯತ್ ತಿಳಿಸಲಾಗಿದೆ”
-ವಿನಯಕುಮಾರ್ ಕಂದಡ್ಕ
ನ.ಪಂ.ಸದಸ್ಯರು.
