ಸುಳ್ಯ:ಪುತ್ತಿಲ ಪರಿವಾರ ಸೇವಾ ಟ್ರಸ್ಟ್ ನೇತೃತ್ವದಲ್ಲಿ ಸುಳ್ಯ ನಗರ ಪಂಚಾಯತ್ ಸಹಕಾರದಲ್ಲಿ ಸುಳ್ಯದ ಪೈಚಾರಿನಲ್ಲಿ ಸುಮತಿ ಎಂಬವರಿಗೆ ನೂತನವಾಗಿ ನಿರ್ಮಿಸಿದ ಮನೆ ‘ಸೇವಾಶ್ರಯ’ದ ಹಸ್ತಾಂತರ ಕಾರ್ಯಕ್ರಮ ಮೇ.26ರಂದು ನಡೆಯಿತು. ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿದ್ದ ಪುತ್ತಿಲ ಪರಿವಾರದ ಸ್ಥಾಪಕ ಅರುಣ್ ಕುಮಾರ್ ಪುತ್ತಿಲ ಮಾತನಾಡಿ’ನಮ್ಮ ಜೀವನದ ಭಾಗವಾದ ಸೇವೆಯೆಂಬ ಕಲ್ಪನೆಯ ಮೂಲಕ ಕಷ್ಟದಲ್ಲಿ ಇರುವವರಿಗೆ ಸಹಾಯ ನೀಡಬೇಕೆಂಬ ಕಾರಣದಿಂದ ಎಲ್ಲರ ಸಹಕಾರದಲ್ಲಿ ಈ ಮನೆ ನಿರ್ಮಾಣ ಮಾಡಲಾಗಿದೆ.
ಅಶಕ್ತರ, ಶೋಷಿತರ ಪರವಾಗಿ ನಿಂತು ಅವರ ಸಂತೋಷ ನಮ್ಮ
ಸಂತೋಷ ಎಂದು ತಿಳಿದು ಸೇವೆ ಮಾಡಿದಾಗ ಬದುಕಿನಲ್ಲಿ ನೆಮ್ಮದಿಯನ್ನು ದೊರೆಯಲು ಸಾಧ್ಯ. ಈ ರೀತಿಯ ಸೇವೆಯಿಂದ ಬದುಕಿನಲ್ಲಿ ನೆಮ್ಮದಿ ಮತ್ತು ಸಾರ್ಥಕತೆ ಪಡೆಯಲು ಸಾಧ್ಯ ಎಂದ ಅವರು ಮನುಷ್ಯತ್ವ, ಹೃದಯ ಶ್ರೀಮಂತಿಕೆ ಎಲ್ಲರಲ್ಲಿ ಇರಲಿ,
ಆ ಮೂಲಕ ಹಿರಿಯರ ಕಲ್ಪನೆ ಸಾಕಾರಗೊಳ್ಳುತ್ತದೆ ಎಂದರು. ಸೂರಿಲ್ಲದವರಿಗೆ ಸೂರು ಒದಗಿಸಿ ಕೊಡುವ ನಿಟ್ಟಿನಲ್ಲಿ
ಜನಪ್ರತಿನಿಧಿಗಳ ಪ್ರಯತ್ನ ಇನ್ಬಷ್ಟು ಆಗಬೇಕಾಗಿದೆ. ಆ ಮೂಲಕ ಎಲ್ಲರ ಬಾಳಿನಲ್ಲಿಯೂ ಪ್ರೀತಿ, ವಿಶ್ವಾಸ, ಸಂತಸ ನೆಲೆಯಾಗಲಿ ಎಂದು ಅವರು ಆಶಿಸಿದರು.
ಮನೆಯ ಕೀಯನ್ನು ಹಸ್ತಾಂತರ ಮಾಡಿದ ಡಿಸಿಸಿ ಬ್ಯಾಂಕ್ ನಿರ್ದೇಶಕರಾದ ಎಸ್.ಎನ್.ಮನ್ಮಥ ಮಾತನಾಡಿ ಒಂದು ಸೂರು ನಿರ್ಮಿಸಿ ಕೊಟ್ಟ ಪುತ್ತಿಲ ಪರಿವಾರದ ಸೇವೆ ಐತಿಹಾಸಿಕವಾದುದು. ಕಷ್ಟದಲ್ಲಿ ಇರುವವರಿಗೆ ಸಹಾಯ, ಸಹಕಾರ ನೀಡಬೇಕು. ಎಲ್ಲರಿಗೂ ಸ್ಪೂರ್ತಿ ನೀಡುವ ಈ ಕಾರ್ಯಕ್ರಮ ಇದು ಎಂದರು.
ನಗರ ಪಂಚಾಯತ್ ಮಾಜಿ ಅಧ್ಯಕ್ಷ ಎನ್.ಎ.ರಾಮಚಂದ್ರ ಮಾತನಾಡಿ ಮನೆ ನಿರ್ಮಿಸಿ ಕೊಟ್ಟಿರುವುದು ಒಂದು ದೇವಸ್ಥಾನ ನಿರ್ಮಿಸಿದಂತೆ ಪವಿತ್ರವಾದ ಕೆಲಸ ಎಂದರು.
ಪುತ್ರಿಲ ಪರಿವಾರದ ಅಧ್ಯಕ್ಷ ಪ್ರಸನ್ನ ಕುಮಾರ್ ಮಾರ್ತಾ, ಸುಳ್ಯ ನಗರ ಪಂಚಾಯತ್ ಸದಸ್ಯ ಸದಸ್ಯ ಶರೀಫ್ ಕಂಠಿ,ಪ್ರೆಸ್ ಕ್ಲಬ್ ಅಧ್ಯಕ್ಷ ಹರೀಶ್ ಬಂಟ್ವಾಳ, ದೇವಚಳ್ಳ ಗ್ರಾ.ಪಂ.ಅಧ್ಯಕ್ಷ ಶೈಲೇಶ್ ಅಂಬೆಕಲ್ಲು ಮಾತನಾಡಿದರು. ಪ್ರಮುಖರಾದ ಸಂತೋಷ್ ಜಾಕೆ, ಸಂತೋಷ್ ಕುತ್ತಮೊಟ್ಟೆ, ಡಾ.ಸಾಯಿರಾಂ ಅತಿಥಿಗಳಾಗಿ ಉಪಸ್ಥಿತರಿದ್ದರು.
ಪುತ್ತಿಲ ಪರಿವಾರದ ಸುಳ್ಯ ತಾಲೂಕು ಅಧ್ಯಕ್ಷ ದಿನೇಶ್ ಅಡ್ಕಾರ್ ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿ ವಂದಿಸಿದರು.
ಪುತ್ತಿಲ ಪರಿವಾರದ ಕಾರ್ಯದರ್ಶಿ ಸುಧಾಕರ ಬಾಟೋಳಿ, ಸದಸ್ಯರಾದ ಸಾತ್ವಿಕ್, ಪುಷ್ಪಾಧರ ಯಾನೆ ಪುಟ್ಟ, ಪದ್ಮನಾಭ ಬೀಡು, ಸುಕೇಶ್ ಅಡ್ಕಾರ್ ಸಹಕರಿಸಿದರು.
ಪ್ರಮುಖರಾದ ಸುನಿಲ್ ಕೇರ್ಪಳ, ಸತೀಶ್ ಕೆಮನಬಳ್ಳಿ, ಉಮೇಶ್ ಪುತ್ತೂರು, ಅನಿಲ್ ತೆಂಕಿಲ, ವಸಂತ ನಾಯಕ್ ಅಜೀರು, ವಿನಯಚಂದ್ರ ಮತ್ತಿತರರು ಉಪಸ್ಥಿತರಿದ್ದರು. ರಾಜೇಶ್ ಭಟ್ ಮನೆಯ ಗೃಹ ಪ್ರವೇಶದ ಧಾರ್ಮಿಕ ವಿಧಿ ವಿಧಾನಗಳನ್ನು ನೆರವೇರಿಸಿದರು.