ಸುಳ್ಯ:ಸುಳ್ಯ ತಾಲೂಕಿನಲ್ಲಿ ಉಂಟಾಗಿರುವ ವಿದ್ಯುತ್ ಕಡಿತ, ಲೋವೋಲ್ಟೇಜ್ ಸಮಸ್ಯೆಗಳನ್ನು ಶೀಘ್ರದಲ್ಲಿ ಪರಿಹರಿಸುವ ಪ್ರಯತ್ನ ಮೆಸ್ಕಾಂ ಮಾಡುತಿದೆ. ಅತಿ ಶೀಘ್ರದಲ್ಲಿ ಪರಿಹಾರ ಸಾಧ್ಯವಾಗಲಿದೆ ಎಂದು ಸುಳ್ಯ ಮೆಸ್ಕಾಂ ಉಪ ವಿಭಾಗದ ಸಹಾಯ ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್ ಹರೀಶ್ ನಾಯ್ಕ್ ಹೇಳಿದ್ದಾರೆ. ವಿದ್ಯುತ್ ಸಮಸ್ಯೆ ಬಗೆಹರಿಸಬೇಕು ಎಂದು ಆಗ್ರಹಿಸಿ
ಸುಳ್ಯ ತಾಲೂಕು ಕೃಷಿಕ ಸಮಾಜ ಪದಾಧಿಕಾರಿಗಳು ಸಲ್ಲಿಸಿದ ಮನವಿ ಸ್ವೀಕರಿಸಿ ಅವರು ಮಾತನಾಡಿದರು.ಕಾವು, ಸುಳ್ಯ 33 ಕೆವಿ ಏಕಪಥ ಮಾರ್ಗವನ್ನು ದ್ವಿಪಥ ಮಾರ್ಗವಾಗಿ ಬದಲಾಯಿಸುವ ಕಾಮಗಾರಿ ಪೂರ್ಣಗೊಂಡಿದೆ.ಇದರಿಂದ ಮುಂದಿನ ದಿನಗಳಲ್ಲಿ ಸುಳ್ಯ ತಾಲೂಕಿನಲ್ಲಿ ಉತ್ತಮ ಗುಣಮಟ್ಟದ ವೋಲ್ಟೇಜ್ನ ವಿದ್ಯುತ್ ಸರಬರಾಜು ಆಗಲಿದೆ.
ಅಲ್ಲದೆ ಮಾಡಾವು-ಸುಳ್ಯ 33 ಕೆವಿ ಲೈನ್ಗೆ ಪರ್ಯಾಯವಾಗಿ ಬೆಳ್ಳಾರೆಯಿಂದ ಸುಳ್ಯಕ್ಕೆ 33 ಕೆವಿ ಅಂಡರ್ ಗ್ರೌಂಡ್ ಕೇಬಲ್ ವಿದ್ಯುತ್ ಸರಬರಾಜು ನಿರ್ಮಾಣಕ್ಕೆ ಲೈನ್ ನಿರ್ಮಾಣಕ್ಕೆ ಕಾಮಗಾರಿಯ ಟೆಂಡರ್ ಪೂರ್ತಿಯಾಗಿದೆ. ಸುಮಾರು 17 ಕೋಟಿ ವೆಚ್ಚದಲ್ಲಿ ಭೂಗರ್ಭ ಕೇಬಲ್ ಲೈನ್ ನಿರ್ಮಿಸಲಾಗುವುದು. ಆರು ತಿಂಗಳಲ್ಲಿ ಕಾಮಗಾರಿ ಪೂರ್ತಿ ಮಾಡಲು ಸೂಚನೆ ನೀಡಲಾಗಿದೆ. ಅಂಡರ್ ಗ್ರೌಂಡ್ ಕೇಬಲ್ ಕಾಮಗಾರಿ ಪೂರ್ತಿಗೊಂಡರೆ ಸುಳ್ಯದ 33 ಕೆವಿ ಲೈನ್ನಲ್ಲಿ ತಡೆ ಉಂಟಾದರೆ ಬೆಳ್ಳಾರೆಯಿಂದ ಸುಳ್ಯಕ್ಕೆ ವಿದ್ಯುತ್ ಸರಬರಾಜು ಮಾಡಬಹುದು.ಮಳೆಗಾಲ ಹಾಗೂ ಇತರ ಸಮಸ್ಯೆ ಉಂಟಾದರೆ ಈ ಪರ್ಯಾಯ ಲೈನ್ ಬಳಸಿ ನಿರಂತರ ವಿದ್ಯುತ್ ಸರಬರಾಜು ಮಾಡಬಹುದು ಎಂದು ಅವರು ವಿವರಿಸಿದರು.
ಮೆಸ್ಕಾಂ ಸಹಾಯಕ ಇಂಜಿನಿಯರ್ ಸುಪ್ರೀತ್, ಸುಳ್ಯ ತಾಲೂಕು ಕೃಷಿಕ ಸಮಾಜದ ಅಧ್ಯಕ್ಷ ಎ.ಟಿ.ಕುಸುಮಾಧರ, ಪ್ರಧಾನ ಕಾರ್ಯದರ್ಶಿ ಶ್ಯಾಮ್ಪ್ರಸಾದ್ ಅಡ್ಡಂತ್ತಡ್ಕ, ಕೋಶಾಧಿಕಾರಿ ಸವಿನ್ ಕಡಪಳ, ನಿರ್ದೇಶಕರಾದ ಮನ್ಮಥ.ಎ.ಎಸ್, ರುಕ್ಮಯ್ಯ ಗೌಡ ಎಸ್.ಎನ್, ಕೆ. ಸುಧಾಕರ ಪ್ರಭು, ನಾರಾಯಣ ಆಲಂಕಳ್ಯ, ಪ್ರಮುಖರಾದ ರಾಜೇಶ್ ಮೇನಾಲ, ಸುಪ್ರೀತ್ ಮೋಂಟಡ್ಕ, ಜಗನ್ನಾಥ ಜಯನಗರ, ಆಶೋಕ್ ಅಡ್ಕಾರ್, ನಾರಾಯಣ ಎಸ್.ಎಂ, ನವೀನ್ ಕುದ್ಪಾಜೆ, ಕಿಶೋರ್ ಕಾಯರ್ತೋಡಿ ಮತ್ತಿತರರು ಉಪಸ್ಥಿತರಿದ್ದರು.