ಸುಳ್ಯ:ಪಯಸ್ವಿನಿ ನದಿಯಲ್ಲಿ ಮೀನುಗಳ ಮಾರಣ ಹೋಮ ಸಂಭವಿಸಿದ್ದು ಸಾವಿರಾರು ಮೀನುಗಳು ನೀರಿನಲ್ಲಿ ಸತ್ತು ತೇಲುತ್ತಿವೆ. ಫೆ.9 ರಂದು ಸಂಜೆ ನಾಗಪಟ್ಟಣ, ಭಸ್ಮಡ್ಕ ಭಾಗದಲ್ಲಿ ಮೀನುಗಳು ಸತ್ತಿರುವುದು ಕಂಡು ಬಂದಿತ್ತು. ಫೆ.10ರಂದು ಕಾಂತಮಂಗಲ ಮತ್ತಿತರ ಭಾಗದಲ್ಲಿ ಮೀನುಗಳು ವ್ಯಾಪಕವಾಗಿ ಸಾಯುತ್ತಿರುವುದು ಕಂಡು ಬಂದಿದೆ.ಅಲ್ಲಲಿ ಸಾವಿರಾರು ಮೀನುಗಳು ನೀರಿನಲ್ಲಿ ಸತ್ತು ತೇಲುತ್ತಿವೆ. ಸಣ್ಣ ಮೀನುಗಳು, ದೊಡ್ಡ ಮೀನುಗಳು
ಸೇರಿದಂತೆ ಸಾವಿರಾರು ಮೀನುಗಳ ರಾಶಿಯೇ ಸತ್ತು ಬಿದ್ದಿದೆ. ನದಿಯಲ್ಲಿ ನೀರಿನ ಹರಿವು ಸಾಕಷ್ಟಿದ್ದರೂ ಮೀನುಗಳು ಸಾಯುವುದು ಆತಂಕಕ್ಕೆ ಕಾರಣವಾಗುತಿದೆ. ಹಿಂದೆಲ್ಲಾ ಏಪ್ರಿಲ್-ಮೇ ತಿಂಗಳಳಲ್ಲಿ ನದಿಯಲ್ಲಿ ನೀರಿನ ಪ್ರಮಾಣ ತೀರಾ ಕಡಿಮೆಯಾದ ಸಂದರ್ಭದಲ್ಲಿ ಮೀನುಗಳು

ಸಾಯುತ್ತಿತ್ತು. ಇದೀಗ ನೀರು ಇದ್ದರೂ ಮೀನು ಸಾಯುವುದರಿಂದ ಯಾರಾದರೂ ಮೀನು ಹಿಡಿಯಲು ವಿಷ ಬೆರೆಸಿರುವ ಅಥವಾ ವಿಷಪೂರಿತ ತ್ಯಾಜ್ಯ ನೀರಿಗೆ ಸುರಿದಿರುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತದೆ.ಮೀನುಗಳು ಸಾಯುವುದರಿಂದ ನದಿಯ ನೀರು ಕಲುಷಿತವಾಗುವ ಆತಂಕವೂ ಎದುರಾಗಿದೆ. ತ್ಯಾಜ್ಯ ಸುರಿಯುವ ಅಥವಾ ವಿಷ ಬೆರೆಸಿ ಮೀನು ಹಿಡಿಯುವುದನ್ನು ತಡೆಯಲು ಅಗತ್ಯ ಕ್ರಮ ಕೈಗೊಳ್ಳಲು ಪೊಲೀಸ್ ಇಲಾಖೆಗೆ ನಗರ ಪಂಚಾಯತ್ ವತಿಯಿಂದ ಪತ್ರ ಬರೆಯುವುದಾಗಿ ನಗರ ಪಂಚಾಯತ್ ಮುಖ್ಯಾಧಿಕಾರಿ ಸುಧಾಕರ ಎಂ.ಎಚ್. ತಿಳಿಸಿದ್ದಾರೆ.