*ಗಂಗಾಧರ ಕಲ್ಲಪಳ್ಳಿ.
(ಸಾಂದರ್ಭಿಕ ಚಿತ್ರ.)
ಸುಳ್ಯ:ಮುಂಗಾರು ಮಳೆ ಕೈಕೊಟ್ಟ ಕಾರಣ ನೀರಿನ ಅಭಾವ ಎದುರಾಗಿದ್ದು ಕೃಷಿಕರು ಈಗಾಗಲೇ ಪಂಪ್ ಮೂಲಕ ಕೃಷಿಗೆ ನೀರು ಹಾಯಿಸುವ ಪರಿಸ್ಥಿತಿ ನಿರ್ಮಾಣ ಆಗಿದೆ. ಸುಳ್ಯ ತಾಲೂಕಿನಲ್ಲಿ ಹಲವು ಗ್ರಾಮಗಳಲ್ಲಿ ಭತ್ತದ ಕೃಷಿಯಿದ್ದು ಮುಖ್ಯವಾಗಿ ಮಳೆಯನ್ನೇ ನಂಬಿ ಭತ್ತ ಕೃಷಿ ಮಾಡಲಾಗುತ್ತಿದೆ. ಆದರೆ ಈ ಬಾರಿ ಮಳೆ ಕೈಕೊಟ್ಟ ಕಾರಣ ಭತ್ತ ಕೃಷಿಕರು ಪಂಪ್ ಮೂಲಕ ನೀರು ಹಾಯಿಸುವ ಪರಿಸ್ಥಿತಿ ಉಂಟಾಗಿದೆ. ಕಳೆದ ಒಂದು ತಿಂಗಳಿನಿಂದ ತಮ್ಮ ಒಂದು ಏಕ್ರೆ ಭತ್ತದ ಕೃಷಿಗೆ
ಬೋರ್ವೆಲ್ನಿಂದ ಪಂಪ್ ಮೂಲಕ ನೀರು ಹಾಯಿಸಲಾಗುತಿದೆ ಎನ್ನುತ್ತಾರೆ ಕೊಡಿಯಾಲದ ಭತ್ತದ ಕೃಷಿಕ ವೆಂಕಪ್ಪ ಹೆಗ್ಡೆ. ತಾಲೂಕಿನ ಕೆಲವೆಡೆ ನೀರು ಹಾಯಿಸುವ ಸ್ಥಿತಿ ಇದ್ದರೂ ಕೆಲವೆಡೆ ಸದ್ಯ ನೀರು ಇದೆ. ಇನ್ನೂ ಕೆಲವು ದಿನ ಮಳೆ ಬಾರದಿದ್ದರೆ ಹಲವೆಡೆ ಭತ್ತದ ಕೃಷಿಗೆ ತೊಂದರೆ ಆಗುವ ಸಾಧ್ಯತೆ ಇದೆ ಎನ್ನುತ್ತಾರೆ ಕೃಷಿಕರು. ಬೆಟ್ಟು ಗದ್ದೆ ಹಾಗೂ ಮಜಲು ಗದ್ದೆಗಳಿಗೆ ನೀರಿನ ಅಭಾವ ಉಂಟಾಗುವ ಅಪಾಯ ಇದೆ. ಜೂನ್ ತಿಂಗಳಲ್ಲಿ ಸಾಮಾನ್ಯವಾಗಿ ಬಿತ್ತನೆ ನಡೆದು ಭತ್ತ ಬೆಳೆಯಲು 125-130 ದಿನ ಬೇಕು. ನವೆಂಬರ್ ತಿಂಗಳಲ್ಲಿ ಕಟಾವಿಗೆ ಬರುತ್ತದೆ. ಈ ಸಂದರ್ಭದಲ್ಲಿ ಪಸಂದಾಗಿ ಮಳೆ, ನೀರು ಬೇಕಾಗುತ್ತದೆ.
135 ಹೆಕ್ಟೇರ್ ಭತ್ತದ ಕೃಷಿ:
ಸುಳ್ಯ ತಾಲೂಕಿನಲ್ಲಿ ಪ್ರಸ್ತುತ 135 ಹೆಕ್ಟೇರ್ ಪ್ರದೇಶದಲ್ಲಿ ಭತ್ತದ ಕೃಷಿ ಮಾಡಲಾಗುತ್ತದೆ. ಆಲೆಟ್ಟಿ, ಅರಂತೋಡು, ಸುಳ್ಯ ಕಸಬಾ, ಬೆಳ್ಳಾರೆ, ಮರ್ಕಂಜ, ಸಂಪಾಜೆ, ಪೆರುವಾಜೆ, ಕೊಡಿಯಾಲ, ಮಂಡೆಕೋಲು, ಪಂಜ, ಎಣ್ಮೂರು, ದೇವಚಳ್ಳ, ಮುರುಳ್ಯ, ಎಡಮಂಗಲ ಗ್ರಾಮಗಳಲ್ಲಿ ಭತ್ತದ ಕೃಷಿ ಮಾಡಲಾಗುತ್ತದೆ. ಒಂದು ಕಾಲದಲ್ಲಿ ಸಂಪೂರ್ಣ ಭತ್ತದ ಗದ್ದೆಗಳಾಗಿದ್ದ ಸುಳ್ಯ ತಾಲೂಕು ಬಳಿಕ ವಾಣಿಜ್ಯ ಕೃಷಿಗೆ ರೂಪಾಂತರಗೊಂಡಿತು. ಆದರೂ ಕೆಲವು ಗ್ರಾಮಗಳಲ್ಲಿ ಭತ್ತದ ಕೃಷಿ ಇದೆ. ಇತ್ತೀಚಿನ ವರ್ಷಗಳಲ್ಲಿ ಭತ್ತದ ಕೃಷಿಯೆಡೆಗೆ ಒಲವು ಹೆಚ್ಚುತ್ತಿದ್ದು ಹಡಿಲು ಬಿದ್ದ ಗದ್ದೆಗಳಲ್ಲಿ ಕೃಷಿ ಮಾಡಲು ಆರಂಭಿಸಿದ್ದಾರೆ. ಬೆಟ್ಟು ಗದ್ದೆ, ಮಜಲು ಗದ್ದೆ, ಬಯಲು ಗದ್ದೆಗಳಲ್ಲಿ ಕೃಷಿ ನಡೆಸಲಾಗುತ್ತದೆ.
ಕೃಷಿ ಇಲಾಖೆಯಿಂದ 10 ಕ್ವಿಂಟಲ್ ಬಿತ್ತನೆ ಬೀಜ ವಿತರಣೆ:
ಮುಂಗಾರು ಹಂಗಾಮಿನಲ್ಲಿ ಸುಳ್ಯ ತಾಲೂಕು ಕೃಷಿ ಇಲಾಖೆಯ ವತಿಯಿಂದ 10 ಕ್ವಿಂಟಲ್ ಬಿತ್ತನೆ ಬೀಜ ವಿತರಿಸಲಾಗಿದೆ. ಸುಳ್ಯ ಕೃಷಿ ಇಲಾಖೆಯಿಂದ 8 ಕ್ವಿಂಟಾಲ್ ಬೀಜ ಹಾಗೂ ಪಂಜ ರೈತ ಸಂಪರ್ಕ ಕೇಂದ್ರದಿಂದ 2 ಕ್ವಿಂಟಲ್ ಬೀಜ ಬಿತ್ತನೆ ಸಹಾಯ ಧನದಲ್ಲಿ ವಿತರಣೆ ಮಾಡಲಾಗಿದೆ. ಎಂಒ4 ತಳಿಯ ಬೀಜ ನೀಡಲಾಗಿದೆ. ಅಲ್ಲದೆ ಲಘು ಪೋಷಕಾಂಶಗಳನ್ನು ವಿತರಿಸಲಾಗಿದೆ. ಸುಣ್ಣ, ಬೋರೆಕ್ಸ್, ಸಾವಯವ ಬಿತ್ತನೆ ಬೀಜ, ಸೇಬಿನ ಬೀಜವನ್ನು ಶೇ.50 ಸಬ್ಸಿಡಿ ದರದಲ್ಲಿ ಕೃಷಿ ಇಲಾಖೆಯಿಂದ ನೀಡಲಾಗಿದೆ.ಮುಂಗಾರು ಹಾಗೂ ಹಿಂಗಾರು ಹಂಗಾಮಿನಲ್ಲಿ ಬೀಜ ಹಾಗೂ ಲಘು ಪೋಷಕಾಂಶಗಳನ್ನು ವಿತರಣೆ ಮಾಡಲಾಗುತ್ತದೆ ಎಂದು ಕೃಷಿ ಇಲಾಖೆಯ ಅಧಿಕಾರಿಗಳು ತಿಳಿಸಿದ್ದಾರೆ.
” ಕಳೆದ ಕೆಲವು ವರ್ಷಗಳಿಂದ ಭತ್ತದ ಕೃಷಿಯೆಡೆಗೆ ಜನರ ಒಲವು ಹೆಚ್ಚುತ್ತಿರುವುದು ಕಂಡು ಬಂದಿದೆ. ಹಡಿಲು ಬಿದ್ದ ಗದ್ದೆಗಳಲ್ಲಿ ಬಿತ್ತನೆ ಮಾಡಿ ಭತ್ತ ಕೃಷಿ ನಡೆಸಲಾಗುತಿದೆ.”
-ಮೋಹನ್ ನಂಗಾರು
ನಿವೃತ್ತ ತಾಂತ್ರಿಕ ಕೃಷಿ ಅಧಿಕಾರಿ
ಕೃಷಿ ಇಲಾಖೆ ಸುಳ್ಯ