ಸುಳ್ಯ: ಸುಳ್ಯ ಸರಕಾರಿ ಆಸ್ಪತ್ರೆಯಲ್ಲಿರುವ ಪೌಷ್ಟಿಕ ಪುನರ್ವಸತಿ ಕೇಂದ್ರಕ್ಕೆ ಪುತ್ತೂರು ಸಹಾಯಕ ಕಮೀಷನರ್ ಜುಬಿನ್ ಮಹಾಪಾತ್ರ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಕೇಂದ್ರದ ಕಾರ್ಯ ಚಟುವಟಿಕೆಗಳ ಬಗ್ಗೆ ಮಾಹಿತಿ ಪಡೆದು ವೈದ್ಯರುಗಳೊಂದಿಗೆ ಹಾಗೂ ಅಧಿಕಾರಿಗಳೊಂದಿಗೆ ಚರ್ಚೆ ನಡೆಸಿದರು. ಪೌಸ್ಟಿಕ ಪುನರ್ ವಸತಿ ಕೇಂದ್ರದ ಬಗ್ಗೆ ಹೆಚ್ಚು ಮಾಹಿತಿ ನೀಡಬೇಕು, ಕೇಂದ್ರದ ಹೆಚ್ಚು ಪ್ರಯೋಜನ ಜನರಿಗೆ
ಲಭಿಸುವಂತಾಗಬೇಕು. ಈ ನಿಟ್ಟಿನಲ್ಲಿ ಪುತ್ತೂರು ಉಪ ವಿಭಾಗ ವ್ಯಾಪ್ತಿಯ ಸುಳ್ಯ, ಪುತ್ತೂರು, ಕಡಬ, ಬೆಳ್ತಂಗಡಿ ತಾಲೂಕುಗಳ ತಾಲೂಕು ಆರೋಗ್ಯಾಧಿಕಾರಿಗಳು, ಸಿಡಿಪಿಒ ಮತ್ತು ವೈದ್ಯರುಗಳ ಸಭೆ ಮುಂದಿನ ವಾರ ಕರೆಯಲಾಗುವುದು ಎಂದು ಅವರು ತಿಳಿಸಿದರು. ಸುಳ್ಯ ತಾಲೂಕು ಆರೋಗ್ಯಾಧಿಕಾರಿ ಡಾ.ಬಿ.ನಂದಕುಮಾರ್, ಸಾರ್ವಜನಿಕ ಆಸ್ಪತ್ರೆಯ ಆಡಳಿತ ವೈದ್ಯಾಧಿಕಾರಿ ಡಾ.ಕರುಣಾಕರ ಕೆ.ವಿ, ಸುಳ್ಯ ತಾಲೂಕು ಶಿಶು ಅಭಿವೃದ್ಧಿ ಯೋಜನಾಧಿಕಾರಿ ಶೈಲಜಾ ದಿನೇಶ್ ಮತ್ತಿತರರು ಉಪಸ್ಥಿತರಿದ್ದರು.
ತಾಲೂಕು ಮಟ್ಟದ ಏಕೈಕ ಪೌಷ್ಟಿಕ ಪುನರ್ವಸತಿ ಕೇಂದ್ರ:
ಮಕ್ಕಳಲ್ಲಿರುವ ಅಪೌಷ್ಟಿಕತೆ ಗುರುತಿಸಿ ನಿವಾರಿಸುವ ಯೋಜನೆಯ ಭಾಗವಾಗಿ ಸುಳ್ಯದ ತಾಲೂಕು ಆಸ್ಪತ್ರೆಯಲ್ಲಿ ಪೌಷ್ಟಿಕ ಪುನರ್ವಸತಿ ಕೇಂದ್ರ ಮೂರು ವರ್ಷದ ಹಿಂದೆ ಆರಂಭಗೊಂಡಿತು.ಜಿಲ್ಲೆಯಲ್ಲಿ ಮಂಗಳೂರು ವೆನ್ಲಾಕ್ ಆಸ್ಪತ್ರೆ ಹೊರತು ಪಡಿಸಿದರೆಪೌಷ್ಟಿಕ ಪುನರ್ವಸತಿ ಕೇಂದ್ರ ಸುಳ್ಯದಲ್ಲಿ ಮಾತ್ರ ಇದೆ. ಅಂದರೆ ತಾಲೂಕು ಮಟ್ಟದಲ್ಲಿ ಕಾರ್ಯಾಚರಿಸುವ ಏಕೈಕ ಕೇಂದ್ರ ಇದಾಗಿದೆ. ರಾಜ್ಯದ ಮೀಸಲು ವಿಧಾನಸಭೆ ಕ್ಷೇತ್ರಗಳಲ್ಲಿ ಪೌಷ್ಟಿಕ ಪುನರ್ವಸತಿ ಕೇಂದ್ರಗಳನ್ನು ತೆರೆಯಲು ಸರಕಾರ ನಿರ್ಧರಿಸಿತ್ತು.ಈ ಹಿನ್ನಲೆಯಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ಏಕೈಕ ಮೀಸಲು ವಿಧಾನಸಭೆ ಕ್ಷೇತ್ರ ಸುಳ್ಯದಲ್ಲಿ ಪೌಷ್ಟಿಕ ಪುನರ್ವಸತಿ ಕೇಂದ್ರ ಆರಂಭಿಸ ಲಾಗಿತ್ತು. 6 ವರ್ಷದೊಳಗಿನ ಮಕ್ಕಳಲ್ಲಿ ತೀವ್ರ ಹಾಗೂ ಸಾಧಾರಣ ಅಪೌಷ್ಟಿಕತೆ ಯನ್ನು ಗುರುತಿಸುವಿಕೆ, ಚಿಕಿತ್ಸೆ ಹಾಗೂ ಪುನಃಶ್ಚತನ ಸೇವೆಗಳನ್ನು ಇಲ್ಲಿ ನೀಡಲಾಗುತ್ತದೆ. ಅಪೌಷ್ಟಿಕತೆಯಿಂದ ಬಳಲುತ್ತಿರುವ ಮಕ್ಕಳನ್ನು ಈ ಕೇಂದ್ರಕ್ಕೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತದೆ. ಮಕ್ಕಳ ಬೆಳವಣಿಗೆ ಸಂಬಂಧಿಸಿ ಅಂಗನವಾಡಿ, ಆಶಾ ಕಾರ್ಯಕರ್ತೆಯರಲ್ಲಿರುವ ಮಾಹಿತಿ ಪ್ರಕಾರ ಯಾವ ಮಕ್ಕಳಲ್ಲಿ ಅಪೌಷ್ಟಿಕತೆ ಕಂಡುಬರುತ್ತಿದೆ ಎನ್ನುವುದನ್ನು ಗಮನಿಸಿ ಅಂತಹವರನ್ನು ಪುನರ್ವಸತಿ ಕೇಂದ್ರಕ್ಕೆ ದಾಖ ಲಿಸಲು ಸಲಹೆ ನೀಡಲಾಗುತ್ತದೆ.
ಮಕ್ಕಳ ವಯೋಮಿತಿಗೆ ಅನುಗುಣವಾಗಿ ತೂಕ, ಬೆಳವಣಿಗೆ, ಪೌಷ್ಟಿಕಾಂಶ ಕೊರತೆ ಮುಂತಾದವುಗಳ ವಿಚಾರದಲ್ಲಿ ಅಪೌಷ್ಟಿಕತೆಯಿಂದ ಬಳಲುತ್ತಿರುವುದನ್ನು ದೃಢೀಕರಿಸಿದ ಬಳಿಕ ಕೇಂದ್ರಕ್ಕೆ ದಾಖಲಿಸಲು ಅವಕಾಶ ಇದೆ.
ಸುಳ್ಯದಲ್ಲಿರುವ ಐದು ಹಾಸಿಗೆಗಳ ಸಾಮರ್ಥ್ಯದ ಕೇಂದ್ರದಲ್ಲಿ ಈ ವರ್ಷ 15 ಮಕ್ಕಳಿಗೆ ಚಿಕಿತ್ಸೆ ನೀಡಲಾಗಿದೆ. ಮೂರು ವರ್ಷದಲ್ಲಿ ಸುಮಾರು ನೂರರಷ್ಟು ಮಕ್ಕಳಿಗೆ ಪೌಷ್ಟಿಕತೆಗೆ ಸಂಬಂಧಿಸಿದಂತೆ ಚಿಕಿತ್ಸೆ ನೀಡಲಾಗಿದೆ ಎಂದು ಸುಳ್ಯ ಸಾರ್ವಜನಿಕ ಆಸ್ಪತ್ರೆಯ ಆಡಳಿತ ವೈದ್ಯಾಧಿಕಾರಿ ಡಾ.ಕರುಣಾಕರ ಮಾಹಿತಿ ನೀಡಿದ್ದಾರೆ.
ಮಕ್ಕಳಲ್ಲಿನ ಅಪೌಷ್ಠಿಕತೆಯನ್ನು ನಿವಾರಿಸುವ ನಿಟ್ಟಿನಲ್ಲಿ ಇದೊಂದು ಮಹತ್ವದ ಯೋಜನೆ.ಮಕ್ಕಳಿಗೆ ಉಚಿತ ಚಿಕಿತ್ಸೆ ನೀಡುವುದರ ಜೊತೆಗೆ ಈ ಸಂದರ್ಭದಲ್ಲಿ ಮಕ್ಕಳ ಜೊತೆಗಿರುವ ಒಬ್ಬ ಪೋಷಕರಿಗೂ ನರೇಗಾ ಅಡಿಯಲ್ಲಿ ವೇತನ ನೀಡುವ ವ್ಯವಸ್ಥೆಯೂ ಇದೆ ಎನ್ನುತ್ತಾರೆ ತಾಲೂಕು ಆರೋಗ್ಯಾಧಿಕಾರಿ ಡಾ.ಬಿ.ನಂದಕುಮಾರ್.