ಲಂಡನ್: ಬ್ರಿಟನ್ ಸಂಸತ್ತಿನ 650 ಸ್ಥಾನಗಳಿಗೆ ಗುರುವಾರ (ಜುಲೈ 04) ನಡೆದ ಚುನಾವಣೆಯಲ್ಲಿ ಲೇಬರ್ ಪಕ್ಷ ಪ್ರಚಂಡ ಜಯಗಳಿಸುವ ಮೂಲಕ, ಲೇಬರ್ ಪಕ್ಷದ ನಾಯಕ ಕೀರ್ ಸ್ಟಾರ್ಮರ್ ನೂತನ ಪ್ರಧಾನಿಯಾಗಿ ಪ್ರಮಾಣವಚನ ಸ್ವೀಕರಿಸುವ ಸಾಧ್ಯತೆ ಇದೆ.2024ರ ಬ್ರಿಟನ್ ಸಾರ್ವತ್ರಿಕ ಚುನಾವಣೆಯಲ್ಲಿ
ಆಡಳಿತರೂಢ ರಿಷಿ ಸುನಕ್ ನೇತೃತ್ವದ ಕನ್ಸರ್ವೇಟಿವ್ ಪಕ್ಷ ತೀವ್ರ ಮುಖಭಂಗ ಅನುಭವಿಸಿದ್ದು, 13 ವರ್ಷಗಳಿಂದ ಅಧಿಕಾರದಲ್ಲಿದ್ದ ಕನ್ಸರ್ವೇಟಿವ್ ಪಕ್ಷ ಗದ್ದುಗೆಯಿಂದ ಕೆಳಗಿಳಿದಂತಾಗಿದೆ.
650 ಸದಸ್ಯ ಬಲದ ಬ್ರಿಟನ್ ಸಂಸತ್ ಚುನಾವಣೆಯಲ್ಲಿ ಲೇಬರ್ ಪಕ್ಷ ಬರೋಬ್ಬರಿ 409 ಸ್ಥಾನಗಳಲ್ಲಿ ಜಯಭೇರಿ ಗಳಿಸಿದೆ. ರಿಷಿ ಸುನಕ್ ನೇತೃತ್ವದ ಕನ್ಸರ್ವೇಟಿವ್ ಪಕ್ಷ ಕೇವಲ 113 ಸ್ಥಾನಗಳಲ್ಲಿ ಗೆಲುವು ಸಾಧಿಸಿ ಹೀನಾಯ ಸೋಲನ್ನನುಭವಿಸಿದೆ.
ಬ್ರಿಟನ್ ಸಂಸತ್ ಚುನಾವಣೆಯಲ್ಲಿ ಲೇಬರ್ ಪಕ್ಷ ಐತಿಹಾಸಿಕ ಗೆಲುವು ಸಾಧಿಸಲಿದೆ ಎಂದು ಚುನಾವಣಾ ಪೂರ್ವ ಸಮೀಕ್ಷೆಗಳು
ಭವಿಷ್ಯ ನುಡಿದಿದ್ದವು. ನಿರೀಕ್ಷೆಯಂತೆ ಲೇಬರ್ ಪಕ್ಷ ಅಧಿಕಾರದ ಗದ್ದುಗೆ ಏರಿದೆ. ಲೇಬರ್ ಪಕ್ಷದ ಮುಖಂಡ ಸ್ಟಾರ್ಮರ್ ಪ್ರಧಾನಿಯಾಗಿ ಅಧಿಕಾರ ಸ್ವೀಕರಿಸುವ ಸಾಧ್ಯತೆ ಇದೆ.