*ಡಾ.ಸುಂದರ ಕೇನಾಜೆ.
ಒಂದು ಕಾಲದಲ್ಲಿ, ತುಳುನಾಡಿನ ಎಲ್ಲೆಂದರಲ್ಲಿ ಜಿಟಿಜಿಟಿ ಮಳೆ, ಗುಡುಗಿನ ತಾಳವಾದ್ಯಗಳ ಮಧ್ಯೆ ಮಾರ್ದನಿಸುತ್ತಿತ್ತು ಆ ಪಲ್ಲವಿ. ಮೈ ಬಗ್ಗಿಸಿ ನೆಲಮುಖ ಮಾಡಿ ಎಳೆಯುತ್ತಿದ್ದ ಆ ಸ್ವರ ಯೋಜನಾ ದೂರಗಳ ಬೈಲುಗಳಲ್ಲಿ ಎರಡು ಮೂರು ತಿಂಗಳು ಅನುರಣಿಸುತ್ತಲೇ ಇತ್ತು, ಓ ಬೇಲೆ……(ಓ ಕೆಲಸವೇ….). ತುಳುನಾಡಿನ ಸಮೃದ್ಧಿಯ ಸಂಕೇತವೆಂಬಂತೆ ನಾಟಿ ಗದ್ದೆಗಳಲ್ಲಿ ಮೊಳಗುತ್ತಿದ್ದ ಹಾಡದು. ಇದೊಂದು ಕೆಲಸದ ಹಾಡು. ತುಳುವಿನಲ್ಲಿ ಇಂತಹಾ ಹಾಡುಗಳನ್ನು
‘ಕಬಿತ’ ಎನ್ನುವರು(ಕಬಿತ ಎನ್ನುವುದು ಕನ್ನಡದ ಕವಿತೆ ಎನ್ನುವುದರ ರೂಪ) ಈ ಕಬಿತವಲ್ಲದೇ ಗದ್ದೆಗಳಲ್ಲಿ ‘ಪಾಡ್ದನ’(ಲಾವಣಿಗಳನ್ನು ಹೋಲುವ ಚಾರಿತ್ರಿಕ ಅಥವಾ ಐತಿಹ್ಯಗಳ ಸಾಹಸಗಾಥೆ) ಹಾಡುವ ಸಂದರ್ಭಗಳೂ ಇದ್ದವು. ಏಣೆಲು ನೇಜಿ(ಭತ್ತದ ಎಳತು ಸಸಿ) ನೆಡುವಾಗ ಕಬಿತವನ್ನೂ ಸುಗ್ಗಿ ನೇಜಿ ಕೀಳುವಾಗ ಪಾಡ್ದನವನ್ನೂ ಹಾಡಬೇಕೆಂಬ ನಿಯಮವೊಂದಿತ್ತು. ಹೀಗೆ ಗದ್ದೆಯಲ್ಲಿ ಹಾಡುವ ಈ ಕಬಿತ ಮತ್ತು ಪಾಡ್ದನಗಳಿಗೆ ಕೆಲವೊಂದು ಮಾಂತ್ರಿಕ ಶಕ್ತಿಗಳಿವೆ ಎನ್ನುವ ನಂಬಿಕೆಯೂ ಜನಪದರಲ್ಲಿತ್ತು.
ಸಾಮಾನ್ಯವಾಗಿ ಇಂತಹಾ ಜನಪದ ಕಾವ್ಯ ಪ್ರಕಾರಗಳು, ಬಹಳ ದೀರ್ಘವಾದ, ರಂಜನೆಯಿಂದ ಕೂಡಿದ ಮತ್ತು ದುಡಿಮೆಯ ಆಯಾಸವನ್ನು ಪರಿಹರಿಸುವ ಸಾಮರ್ಥ್ಯವುಳ್ಳ ಹಾಡುಗಳು. ಇವುಗಳಲ್ಲೂ ಓ ಬೇಲೆ…. ಎನ್ನುವುದು ಲೌಕಿಕವಾದ ಸಂಗತಿಯನ್ನೇ ಹೆಣೆದು, ಬದುಕಿಗೆ ತೀರಾ ಹತ್ತಿರವಾದ ವಿಷಯಗಳನ್ನು ಹೇಳುವಂತದ್ದು. ಅದೇ ಪಾಡ್ದನಗಳಾದರೆ, ಅಲೌಕಿಕ ಮತ್ತು ಅತಿಮಾನುಷ ಶಕ್ತಿಗಳನ್ನು ಹೇಳಿ ನಂಬಿಕೆಯ ಆವರಣವನ್ನು ಗಟ್ಟಿಗೊಳಿಸುವಂತದ್ದು. ವಸ್ತುವಿನ ದೃಷ್ಟಿಯಿಂದ ಕಬಿತಗಳ ಮಹತ್ವ ಕಡಿಮೆಯದ್ದಾದರೂ ಪರಿಣಾಮದ ಹಿನ್ನಲೆಯಿಂದ ಬಳಕೆಯಾಗುತ್ತಿದ್ದುದೇ ಹೆಚ್ಚು. ಲಯಬದ್ದ ಹಾಡಿನ ವೇಗಕ್ಕೆ ನೇಜಿಯನ್ನು ಕೆಸರು ನೆಲಕ್ಕೂರುವ ಅಥವಾ ಕೀಳುವ ಅನಿವಾರ್ಯ, ರಾಗಬದ್ಧ ಸ್ವರಾಲಾಪನೆಯಲ್ಲಿ ಸಾಗುವ ಕೆಲಸದಿಂದ ಸಿಗುವ ಉಲ್ಲಾಸ, ರಂಜನೆಯೊಂದಿಗೆ ಮಹತ್ವದ ಕೆಲಸವನ್ನು ಸುಸೂತ್ರವಾಗಿ ಮುಗಿಸುವ ಕಾರ್ಯಯೋಜನೆ ಇತ್ಯಾದಿಗಳೇ ಇಲ್ಲಿಯ ಪರಿಣಾಮಗಳು. ಕೆಲಸಗಳೇ ಒತ್ತಡಗಳಾಗುತ್ತಿರುವ ಈ ಕಾಲಘಟ್ಟದಲ್ಲಿ ಒತ್ತಡದ ಕೆಲಸಗಳನ್ನೇ
ಹಗುರಗೊಳಿಸುವ ಜನಪದ ತಂತ್ರವನ್ನು ಈ ಹಾಡುಗಳಲ್ಲಿ ಕಾಣಬಹುದು.
ಒಂದು ಕಾಲದ ತುಳುನಾಡ ಚರಿತ್ರೆ, ಅದರಲ್ಲೂ ಇಲ್ಲಿಗೆ ಬಂದ ವಲಸೆ ಪ್ರಕ್ರಿಯೆಗಳನ್ನು ತಿಳಿದುಕೊಳ್ಳುವುದರಲ್ಲೂ ಈ ಕಬಿತ, ಪಾಡ್ದನಗಳ ವಸ್ತು ಪರಿಣಾಮಕಾರಿಯಾಗಿದೆ. ಓ ಬೇಲೆ ಕಬಿತ, ಘಟ್ಟದ ಮೇಲ್ಭಾಗದಿಂದ ತುಳುನಾಡಿಗೆ ವಲಸೆ ಬಂದ ಕೃಷಿ ಕಾರ್ಮಿಕರ ಮಾಹಿತಿಯನ್ನು ನೀಡುತ್ತದೆ. ಕನ್ನಡವನ್ನು ಮಾತನಾಡುವ ಜನವರ್ಗ ಇಲ್ಲಿ ಕಾರ್ಮಿಕರಾಗಿ ದುಡಿದು, ನಂತರ ಇಲ್ಲೇ ನೆಲೆ ನಿಂತ ಸಂಗತಿಯನ್ನು ತಿಳಿಸುತ್ತದೆ. ಇಂದಿಗೂ ತುಳುನಾಡಿನಲ್ಲಿ ಕನ್ನಡ ಮಾತನಾಡುವ ಜನವರ್ಗ ಕರ್ನಾಟಕದ ಬೇರೆಬೇರೆ ಭಾಗಗಳಿಂದ ವಲಸೆ ಬಂದವರೆಂಬ ಸತ್ಯವನ್ನು ಈ ಸಾಮಾನ್ಯ ಹಾಡು ಅರ್ಥೈಸುತ್ತದೆ. ತುಳುನಾಡಿನಲ್ಲಿ ಆರಾಧಿಸಲ್ಪಡುವ ಬಹುತೇಕ ದೈವಗಳ ಮೂಲ ನೆಲೆ ಘಟ್ಟದ ಮೇಲ್ಭಾಗ. ಈ ದೈವಗಳು ಕೂಡ ವಲಸೆ ಬಂದೇ ಇಲ್ಲಿಯ ಜನರನ್ನು ಪೊರೆಯುವ ಕಾರ್ಯ ಮಾಡಿದ್ದು! ಇದನ್ನು ಪಾಡ್ದನಗಳು ಸ್ಪಷ್ಟಪಡಿಸುತ್ತವೆ(ಘಟ್ಟದ ಮೇಲ್ಭಾಗದ ರಾಜರುಗಳೇ ತುಳುನಾಡನ್ನು ಆಳಿದ್ದು ಎನ್ನುವುದು ಐತಿಹಾಸಿಕ ಸತ್ಯ)
ತುಳುನಾಡಿನ ನಾನಾ ಪ್ರದೇಶಗಳ ಹೆಸರನ್ನು ಸೂಚಿಸುವ, ತುಳುವರು ಬಳಸುತ್ತಿದ್ದ ನಾನಾ ಆಭರಣಗಳನ್ನು ಹೆಸರಿಸುವ, ಇಲ್ಲಿಯ ಬದುಕು, ಪ್ರಾಣಿ, ಪಕ್ಷಿಗಳನ್ನು ಪರಿಚಯಿಸುವ ಅನೇಕ ಕಬಿತಗಳು, ದೈವದ ಕಾರಣಿಕಯನ್ನು ಸವಿಸ್ತಾರವಾಗಿ ವರ್ಣಿಸುವ ನೂರಾರು ಪಾಡ್ದನಗಳು ಇತ್ತೀಚಿನ ವರೆಗೂ ಊರಿಗೆ ಊರೇ ಕೇಳುವಂತೆ ಗದ್ದೆಯ ಮಧ್ಯ ಭಾಗದಿಂದ ಕೇಳುತ್ತಿತ್ತು. ಸಾಮಾನ್ಯವಾಗಿ ಈ ಕಾವ್ಯಗಳನ್ನು ಪ್ರಧಾನ ಹಾಡುಗಾರ್ತಿ ಏರುಸ್ವರದಲ್ಲಿ ಹಾಡುತ್ತಿದ್ದರೆ, ಉಳಿದವರು ಪಲ್ಲವಿಯೊಂದಿಗೆ ಧ್ವನಿಗೂಡಿಸುತ್ತಿದ್ದರು. ಪ್ರಧಾನ ಹಾಡುಗಾರ್ತಿಯ ತಿಳುವಳಿಕೆ, ಜಾಣ್ಮೆ, ಕರ್ತೃತ್ವ ಶಕ್ತಿ, ಗುಂಪಿಗೆ ದಾಟಿಸುವ ಸಾಮರ್ಥ್ಯದ ಹಿನ್ನಲೆಯಲ್ಲಿ ಇದು ಪ್ರಭಾವ ಬೀರುತ್ತಿತ್ತು. ಗದ್ದೆ ಕೆಲಸದಲ್ಲಿ ತೊಡಗಿಕೊಂಡ ಮೂವತ್ತು ನಲವತ್ತು ಮಹಿಳೆಯರನ್ನು ಕೆಲಸದೊಂದಿಗೆ ಸಂಯೋಜಿಸುವ ಕಾರ್ಯವೂ ಈ ಹಾಡಿನ ಮೂಲಕ ನಡೆಯುತ್ತಿತ್ತು.
ಗದ್ದೆಯಲ್ಲಿ ಈ ರೀತಿಯ ಹಾಡು ಹೇಳಿದ್ದೇ ಆದರೆ ಫಸಲು ಹೆಚ್ಚಾಗುತ್ತದೆ ಎನ್ನುವ ನಂಬಿಕೆಯನ್ನು ಪಕ್ಕಕ್ಕಿರಿಸಿದರೂ, ಕೆಲಸದ ದಕ್ಷತೆಯನ್ನು ಹೆಚ್ಚಿಸುವ, ಆಯಾಸ ಕಡಿಮೆಗೊಳಿಸುವ, ಉಲ್ಲಾಸವನ್ನು ಕಂಡುಕೊಳ್ಳುವ ಕೆಲಸಗಳಿಂದ ಹೆಚ್ಚು ಪ್ರತಿಫಲ ನಿರೀಕ್ಷಿಸುವ ಬಾಹ್ಯ ಪರಿಣಾಮಗಳನ್ನು ಅಲ್ಲಗಳೆಯುವಂತಿಲ್ಲ. ಅದಕ್ಕಿಂತಲೂ ಮುಖ್ಯವಾದ ಆಂತರಿಕ ಪರಿಣಾಮವೊಂದರ ಕಡೆಗೆ ಗಮನಹರಿಸಲೇಬೇಕು. ತುಳುನಾಡಿನ ಕಬಿತ, ಪಾಡ್ದನಗಳಿಗೂ ಇಲ್ಲಿಯ ಸೌಹಾರ್ದ ಪರಂಪರೆಗೂ ನಿಕಟ ಸಂಬಂಧವಿತ್ತು. ಇಲ್ಲಿಯ ದೈವ-ದೇವರನ್ನು ವಿವರಿಸುವ, ಅವರ ಸಾಹಸ, ಸಾಧನೆ, ಅಭಯದ ನೆರಳನ್ನು ಪ್ರಚುರಪಡಿಸುವ ನೆಲೆಯಲ್ಲಿ ಈ ಕಾವ್ಯಗಳು ಬಳಕೆಯಾಗುತ್ತಿದ್ದುದೇ ಹೆಚ್ಚು. ಇವೆಲ್ಲವೂ ದೈವ ಕೋಲ(ಉತ್ಸವ)ದ ಹೊರತಾಗಿ ಮತ್ತೆ ಕಂಡು ಬರುತ್ತಿದ್ದುದು ಈ ಬೇಸಾಯ ಗದ್ದೆಗಳಲ್ಲಿ ಮಾತ್ರ. ಈ ಬೇಸಾಯ ಗದ್ದೆಗಳೋ, ತುಳುನಾಡಿನ ಎಲ್ಲಾ ಜಾತಿ, ಧರ್ಮಗಳ ಜನರನ್ನು ಒಟ್ಟು ಸೇರಿಸುತ್ತಿದ್ದ ಪಾರಂಪರಿಕ ತಾಣಗಳು. ವರ್ಗಗಳ ಭಿನ್ನತೆಗೆ ಅವಕಾಶ ನೀಡದೇ, ಧರ್ಮಗಳ ಕಂದಕದ ಗೋಜಿಗೆ ಹೋಗದೇ ದುಡಿಮೆಯೇ ದೇವರೆಂದು ಬಗೆದ ಕ್ಷೇತ್ರಗಳು. ಈ ಗದ್ದೆಗಳಲ್ಲಿ ಕೋಟಿ- ಚೆನ್ನಯ, ಸಿರಿ, ದೇವುಪೂಂಜ, ಕಲ್ಕುಡ-ಕಲ್ಲುರ್ಟಿ, ಲೆಕ್ಕೆಸಿರಿ, ಬಬ್ಬರ್ಯಾ, ಪಂಜುರ್ಲಿಯಂತಹಾ ಮಹತ್ವದ ಆರಾಧನಾ ಹಿನ್ನಲೆಯ ಪಾಡ್ದನಗಳನ್ನು ಹಾಡಲಾಗುತ್ತಿತ್ತು. ಧರ್ಮದ ಹಂಗಿಲ್ಲದೇ ಕಲಾವಿದರ ಪ್ರತಿಭೆಯೊಂದೇ ಮಾನದಂಡವಾಗಿ, ಸರ್ವ ಜಾತಿಯ, ಸರ್ವಧರ್ಮದ ಹಾಡುಗಾರರೂ
ಇವುಗಳಲ್ಲಿ ಪಾಲ್ಗೊಳ್ಳುತ್ತಿದ್ದರು. ಇಲ್ಲಿ ಸಾಮೂಹಿಕವಾಗಿ ನಡೆಯವ ಕೆಲಸಗಳೇ ಮುಖ್ಯ, ಸೌಹಾರ್ದ ಬದುಕಿನ ಆಶಯಗಳೇ ಪ್ರಧಾನ. ಈ ಉದ್ದೇಶಕ್ಕಾಗಿ ಬಹುತೇಕ ಎಲ್ಲಾ ಸಮುದಾಯದ ಮಹಿಳೆಯರು ಕಬಿತ ಅಥವಾ ಪಾಡ್ದನಗಳನ್ನು ಹಾಡುವ ಕಲೆಯನ್ನು ಬೆಳೆಸಿಕೊಂಡಿದ್ದರು. ಆ ಕಾಲದಲ್ಲಿ ಸ್ವರ ಎತ್ತಿ ಹಾಡುತ್ತಿದ್ದ ಕಬಿತಗಳೇ ಈ ಓ… ಬೇಲೆ… ಮತ್ತು ದೈವ ಪಾಡ್ದನಗಳು.
ಈ ಎಲ್ಲಾ ಜನಪದ ಕಾವ್ಯಗಳಲ್ಲಿನ ಮೌಲ್ಯಗಳಿಗಿಂತ ಅದನ್ನು ವ್ಯಕ್ತಪಡಿಸುವ ಮಾದರಿಯ ಮೌಲ್ಯವೂ ದೊಡ್ಡದು. ಗದ್ದೆ ಇದಕ್ಕೊಂದು ವೇದಿಕೆ. ಈ ವೇದಿಕೆ ಮರುಸೃಷ್ಟಿಗೊಳ್ಳಬೇಕು, ಕಬಿತ, ಪಾಡ್ದನಗಳು ಮಾರ್ದನಿಸಬೇಕು, ತುಳುನಾಡಿನ ಪಾರಂಪರಿಕ ಪರಿಕಲ್ಪನೆ ಕಾಲಾತೀತವಾಗಿ ಉಳಿಯಬೇಕು, ಸಂತಸಕ್ಕಂತೂ ಇವಿಷ್ಟಿದ್ದರೆ ಧಾರಾಳ ಸಾಕು.
(ಡಾ.ಸುಂದರ ಕೇನಾಜೆ ಅವರು ಅಂಕಣಕಾರರು, ಜಾನಪದ ಸಂಶೋಧಕರು)