ಮಲ್ಲಪುರಂ: ಕೇರಳದ ನಿಲಾಂಬುರ್ ವಿಧಾನಸಭಾ ಕ್ಷೇತ್ರದಲ್ಲಿ ನಡೆದ ಉಪಚುನಾವಣೆಯಲ್ಲಿ ಕಾಂಗ್ರೆಸ್ ನೇತೃತ್ವದ ಯುಡಿಎಫ್ ಗೆಲುವು ಸಾಧಿಸಿದೆ.ಕಾಂಗ್ರೆಸ್ನ ಆರ್ಯಾಡನ್ ಶೌಕಾತ್ ಅವರು ಸಮೀಪದ ಪ್ರತಿಸ್ಪರ್ಧಿ ಆಡಳಿತಾರೂಢ ಸಿಪಿಐ (ಎಂ) ಪಕ್ಷದ ಎಂ.ಸ್ವರಾಜ್ ಅವರ ಎದುರು 11077 ಮತಗಳ ಅಂತರದಲ್ಲಿ ಗೆಲುವು ಸಾಧಿಸಿದ್ದಾರೆ. ಎಡರಂಗ ಬೆಂಬಲಿತ
ಪಕ್ಷೇತರ ಶಾಸಕ, ಪಿ.ವಿ. ಅನ್ವರ್ ರಾಜೀನಾಮೆ ನೀಡಿದ್ದ ಕಾರಣ ನಿಲಾಂಬುರ್ ಕ್ಷೇತ್ರ ತೆರವಾಗಿತ್ತು, ಎಲ್ಡಿಎಫ್ ಪಕ್ಷ ಉಪಚುನಾವಣೆಯಲ್ಲಿ ಸೋಲುತ್ತಿರುವುದು ಇದು ನಾಲ್ಕನೇ ಬಾರಿಯಾಗಿದೆ. ಈ ಹಿಂದೆ ಪುತ್ತುಪ್ಪಲ್ಲಿ , ಪಾಲಕ್ಕಾಡ್ ಮತ್ತು ತ್ರಿಕ್ಕಾಕಾರ ಕ್ಷೇತ್ರಗಳಲ್ಲಿ ನಡೆದ ಉಪಚುನಾವಣೆ ವೇಳೆ ಸೋಲುಂಡಿತ್ತು. ಜೂನ್ 19 ರಂದು ನಡೆದ ಚುನಾವಣೆಯಲ್ಲಿ ಶೌಕಾತ್ 1,75,989 ಮತಗಳನ್ನು ಪಡೆದಿದ್ದು, ಒಟ್ಟು ಮತಗಳ
ಶೇ 44.17 ಆಗಿದೆ. ಪ್ರತಿಸ್ಪರ್ಧಿ ಸ್ವರಾಜ್ 66,660 ಮತಗಳನ್ನು ಪಡೆದಿದ್ದು, ಒಟ್ಟು ಮತಗಳ ಶೇ 37.88 ಆಗಿದೆ.ಅಚ್ಚರಿ ವಿಚಾರವೆಂದರೆ, ಈ ಹಿಂದೆ ರಾಜೀನಾಮೆ ನೀಡಿ ಈಗ ತೃಣಮೂಲ ಕಾಂಗ್ರೆಸ್ನ ರಾಜ್ಯ ಸಂಚಾಲಕರಾಗಿರುವ ಅನ್ವರ್ ಅವರು ಸ್ವತಂತ್ರವಾಗಿ ಸ್ಪರ್ಧಿಸಿ ಕಾಂಗ್ರೆಸ್ ಮತ್ತು ಎಲ್ಡಿಎಫ್ಗೆ ಪ್ರಬಲ ಪೈಪೋಟಿ ನೀಡಿ, ಶೇ 11.23 ಅಂದರೆ 19,760 ಮತಗಳನ್ನು ಪಡೆದಿದ್ದಾರೆ.