ಸುಳ್ಯ:ಸುಳ್ಯ ತಾಲೂಕಿನ ಪೆರುವಾಜೆ ಗ್ರಾಮದ ಮುಕ್ಕೂರು ಸ.ಹಿ.ಪ್ರಾ. ಶಾಲೆಯ ಮೂಲ ಸೌಕರ್ಯದ ಅಗತ್ಯತೆಯನ್ನು ಮನಗಂಡು ಮುಕ್ಕೂರು ನೇಸರ ಯುವಕ ಮಂಡಲದ ವತಿಯಿಂದ ಸಾಮಾಜಿಕ ಜಾಲತಾಣದ ಮೂಲಕ ಪುಸ್ತಕ ಅಭಿಯಾನ, ನಮ್ಮ ಶಾಲೆ-ನಮ್ಮ ಕೊಡುಗೆ ಎಂಬ ಎರಡು ಅಭಿಯಾನ ನಡೆಸಿ ಶಾಲೆ ಮಕ್ಕಳಿಗೆ
ಪುಸ್ತಕ ಶಾಲೆಗೆ ಅಗತ್ಯ ಮೂಲ ಸೌಕರ್ಯ ಒದಗಿಸಲಾಯಿತು. ಮುಕ್ಕೂರು ಶಾಲಾ ಮಕ್ಕಳಿಗೆ ಬರೆಹದ ಪುಸ್ತಕ ನೀಡೋಣ ಬನ್ನಿ ಎಂಬ ಅಭಿಯಾನ ನಡೆಸಲಾಯಿತು.ಅಭಿಯಾನದಲ್ಲಿ ಹಳೆ ವಿದ್ಯಾರ್ಥಿಗಳು, ಗ್ರಾಮಸ್ಥರು ಪಾಲ್ಗೊಂಡು 855 ಪುಸ್ತಕ ಕೊಡುಗೆಯಾಗಿ ನೀಡಿದರು.
ಪುಸ್ತಕ ಅಭಿಯಾನದ ಉಳಿಕೆ ಹಣದಿಂದ ಶಾಲೆಗೆ ಇನ್ ವರ್ಟರ್ ಕೊಡುಗೆಯಾಗಿ ನೀಡಲಾಯಿತು. ಪುಸ್ತಕದ ಜತೆಗೆ ದಾನಿಯೋರ್ವರು ಶಾಲೆಯ ಎಲ್ಲ ಮಕ್ಕಳಿಗೆ, ಶಿಕ್ಷಕರಿಗೆ ಕೊಡೆ, ಲೈಟಿಂಗ್ಸ್ ಕೊಡುಗೆ ರೂಪದಲ್ಲಿ

ನೀಡಿದ್ದು ಪ್ರಾರಂಭೋತ್ಸವ ದಿನ ಅವುಗಳನ್ನು ಹಸ್ತಾಂತರಿಸಲಾಯಿತು.
ಇನ್ನೊಂದೆಡೆ ನೇಸರ ಯುವಕ ಮಂಡಲ, ಯುವತಿ ಮಂಡಲದ ಸಹಯೋಗದಲ್ಲಿ ನಮ್ಮ ಶಾಲೆ-ನಮ್ಮ ಕೊಡುಗೆ ಅಭಿಯಾನ ಕೂಡ ಆರಂಭಿಸಿದ್ದು ಶಾಲೆಗೆ ಅಗತ್ಯ ಇರುವ 24 ವಸ್ತುಗಳ ಪಟ್ಟಿ ತಯಾರಿಸಿ ಅವುಗಳನ್ನು ಕೊಡುಗೆ ರೂಪದಲ್ಲಿ ಪಡೆಯುವ ಪ್ರಯತ್ನ ನಡೆಯುತಿದೆ.ಅಭಿಯಾನ ಆರಂಭಗೊಂಡ ಒಂದು ವಾರದೊಳಗೆ 25 ಸಾವಿರ ರೂ.ವೆಚ್ಚದ ಕೈ ತೊಳೆಯುವ ನೀರಿನ ಘಟಕ, ಫ್ಯಾನ್, ಟೀ ಶರ್ಟ್,ಪೌಷ್ಟಿಕ ಕೈ ತೋಟ ಹೀಗೆ ಶಾಲೆಗೆ ಅಗತ್ಯ ಇರುವ ವಸ್ತುಗಳನ್ನು ಕೊಡುಗೆ ರೂಪದಲ್ಲಿ ಬಂದಿದ್ದು ಅವುಗಳ ಹಸ್ತಾಂತರ, ಶಿಲಾನ್ಯಾಸ ಶಾಲಾ ಪ್ರಾರಂಭೋತ್ಸವದ ದಿನದಂದು ನಡೆಯಿತು.














