ಮೈಸೂರು: ದಸರಾ ಮಹೋತ್ಸವ ಪ್ರಯುಕ್ತ ನಡೆದ ವೈಮಾನಿಕ ಸಾಹಸ ಪ್ರದರ್ಶನ ನೋಡುಗರ ಮನ ಸೂರೆಗೊಂಡಿತು.
ಬನ್ನಿಮಂಟಪದ ಪಂಜಿನ ಕವಾಯತು ಮೈದಾನದಲ್ಲಿ ಸೋಮವಾರ ಸಂಜೆ ಭಾರತೀಯ ವಾಯುಪಡೆಯ ‘ಲೋಹದ ಹಕ್ಕಿಗಳು’ ಮಾಯಾಲೋಕವನ್ನು ಸೃಷ್ಟಿಸಿದವು. 9 ‘ಸೂರ್ಯಕಿರಣ್’ ವಿಮಾನಗಳು

ನೀಲಿ ಆಗಸದಲ್ಲಿ ಶ್ವೇತ ಬಣ್ಣದಲ್ಲಿ ಚಿತ್ತಾರ ಮೂಡಿಸಿದವು. ಸೇನೆಯ ವಿಂಗ್ ಕಮಾಂಡರ್ಗಳ ಸಾಹಸವು ಮೈನವಿರೇಳಿಸಿತು. 9 ‘ಸೂರ್ಯಕಿರಣ’ಗಳು ಸಂಚಲನ ಮೂಡಿಸಿ ಆಕಾಶದಲ್ಲಿಯೇ ಧೂಮದಲ್ಲಿ ವಿವಿಧ ಆಕಾರಗಳ ಚಿತ್ತಾರ ಮೂಡಿಸಿದವು. ಮೈಸೂರಿನಲ್ಲಿ ದಸರಾದಲ್ಲಿ ವೈಮಾನಿಕ ಪ್ರದರ್ಶನ ವಾಯುಪಡೆ ಸೂರ್ಯಕಿರಣ್ ಏರೋ ಬ್ಯಾಟಿಕ್ ತಂಡ ಒಂದು ಗಂಟೆಗೂ ಹೆಚ್ಚು ವೈಮಾನಿಕ ಪ್ರದರ್ಶನ ನಡೆಸಿಕೊಟ್ಟಿತು. ಮೈಸೂರಿನ ಆಗಸದಲ್ಲಿ ಬಗೆಬಗೆಯ ಪ್ರದರ್ಶನ ನೀಡುತ್ತಾ ಹೊರಟ ಯುದ್ದವಿಮಾನಗಳ

ವೈಯ್ಯಾರವನ್ನು ಜನ ವೀಕ್ಷಿಸಿ ಖುಷಿ ಪಟ್ಟರು.ಮೈಸೂರಿನ ಬನ್ನಿಮಂಟಪ ಮೂಲಕ ಹಾರಿ ಹೋದ ಯುದ್ದ ವಿಮಾನಗಳು ಅಲ್ಲಿ ಸೇರಿದ್ದ ಸಹಸ್ರಾರು ಮಂದಿಯಲ್ಲಿ ಪುಳಕ, ಕುತೂಹಲ ಉಂಟು ಮಾಡಿದವು.
ಮುಖ್ಯಮಂತ್ರಿ ಸಿದ್ದರಾಮಯ್ಯ ವೈಮಾನಿಕ ಪ್ರದರ್ಶನವನ್ನು ಸಂಪುಟದ ಸಹದ್ಯೋಗಿಗಳೊಂದಿಗೆ ವೀಕ್ಷಿಸಿದರು.
















