ನವದೆಹಲಿ: ಗಲ್ಫ್ ಸೇರಿದಂತೆ ಯುರೋಪ್ ಹಾಗೂ ಆಗ್ನೇಯ ಏಷ್ಯಾ ದೇಶಗಳಿಂದ ಹೆಚ್ಚಿನ ನೇರ ಅಂತಾರಾಷ್ಟ್ರೀಯ ವಿಮಾನಗಳ ಹಾರಾಟ ಸೇವೆ ಒದಗಿಸುವ ಹಿನ್ನಲೆಯಲ್ಲಿ ಮಂಗಳೂರು ಏರ್ಪೋರ್ಟ್ಗೆ “ಪಾಯಿಂಟ್ ಆಫ್ ಕಾಲ್ ಸ್ಟೇಟಸ್’ ಮಾನ್ಯತೆ ನೀಡುವಂತೆ ದಕ್ಷಿಣ ಕನ್ನಡ ಸಂಸದ ಕ್ಯಾ. ಬ್ರಿಜೇಶ್ ಚೌಟ ಅವರು ಕೇಂದ್ರ ನಾಗರಿಕ ವಿಮಾನಯಾನ ಸಚಿವ ರಾಮ್ ಮೋಹನ್ ನಾಯ್ಡು ಅವರಿಗೆ ಮನವಿ ಸಲ್ಲಿಸಿದ್ದಾರೆ. ನವದೆಹಲಿಯಲ್ಲಿ ಇಂದು ಸಂಸದ ಕ್ಯಾ. ಚೌಟ ಅವರು, ಸಚಿವರನ್ನು ಭೇಟಿ ಮಾಡಿ ಮಂಗಳೂರು ವಿಮಾನ ನಿಲ್ದಾಣದ ಪ್ರಯಾಣಿಕರು ಹಾಗೂ
ಕಾರ್ಗೋ ನಿರ್ವಹಣೆ ಸಾಮರ್ಥ್ಯಕ್ಕೆ ಅನುಗುಣವಾಗಿ ಹೆಚ್ಚಿನ ಸಂಖ್ಯೆಯ ವಿದೇಶಿ ನೇರ ಸಂಪರ್ಕದ ವಿಮಾನ ಸೇವೆ ಆರಂಭಿಸುವ ವಿಚಾರವಾಗಿ ಮಾತುಕತೆ ನಡೆಸಿದ್ದಾರೆ. ಜತೆಗೆ, ಕರಾವಳಿ ಭಾಗದ ಸರ್ವತೋಮುಖ ಅಭಿವೃದ್ಧಿ ದೃಷ್ಟಿಯಿಂದ ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ʼಪಾಯಿಂಟ್ ಆಫ್ ಕಾಲ್ ಸ್ಟೇಟಸ್ʼ ಮನ್ನಣೆ ನೀಡುವುದರಿಂದ ಆರ್ಥಿಕ, ಸಾಮಾಜಿಕವಾಗಿ ಏನೆಲ್ಲಾ ಅನುಕೂಲವಾಗಲಿದೆ ಎಂಬ ಬಗ್ಗೆ ಸಚಿವರಿಗೆ ಸಂಸದರು ಇದೇ ವೇಳೆ ಮನವರಿಕೆ ಮಾಡಿದ್ದಾರೆ. ಜೊತೆಗೆ ಮಂಗಳೂರು ವಿಮಾನ ನಿಲ್ದಾಣದ ವಿಸ್ತರಣೆ ಮತ್ತು ಹೆಚ್ಚುವರಿ ವಿಮಾನ ಮಾರ್ಗದ ಸೌಲಭ್ಯವನ್ನು ಒದಗಿಸುವುದರ ಕುರಿತು ಕೂಡ ಚರ್ಚೆ ನಡೆಸಿದ್ದಾರೆ. ಏರ್ರ್ಪೋರ್ಟ್ಗೆ “ಪಾಯಿಂಟ್ ಆಫ್ ಕಾಲ್” ಮಾನ್ಯತೆ
ನೀಡಿದರೆ ಮಧ್ಯ ಪ್ರಾಚ್ಯ, ಯುರೋಪ್ ಮತ್ತಿತರ ಭಾಗಗಳಿಗೆ ನೇರ ವಿಮಾನಯಾನ ಸೇವೆ ಆರಂಭಿಸುವುದಕ್ಕೆ ಸಾಧ್ಯವಾಗುತ್ತದೆ. ಜತೆಗೆ, ಈ ಭಾಗದಿಂದ ಅಡಿಕೆ, ಗೇರುಬೀಜ, ತೈಲೋತ್ಪನ್ನ, ಸಮುದ್ರೋತ್ಪನ್ನಗಳ ಸಾಗಾಟ ವೃದ್ಧಿಸಿ ಕರಾವಳಿಯ ಆರ್ಥಿಕತೆ ಬೆಳವಣಿಗೆಗೂ ಸಹಕಾರಿಯಾಗಲಿದೆ ಎಂದು ಸಂಸದ ಕ್ಯಾ.ಚೌಟ ಹೇಳಿದ್ದಾರೆ.
ಮಂಗಳೂರು ವಿಮಾನ ನಿಲ್ದಾಣಕ್ಕೆ “ಪಾಯಿಂಟ್ ಆಫ್ ಕಾಲ್” ಮನ್ನಣೆ ದೊರೆತರೆ ಕರಾವಳಿ ಭಾಗದ ಪ್ರವಾಸೋದ್ಯಮ, ಕೈಗಾರಿಕೆಗಳಿಗೂ ಉತ್ತೇಜನ ದೊರೆಯಲಿದೆ. ಅಷ್ಟೇಅಲ್ಲ; ಗಲ್ಫ್ ದೇಶಗಳಲ್ಲಿರುವ ಕರಾವಳಿಯ ಉದ್ದಿಮೆದಾರರಿಗೂ ದುಬೈ, ಅಬುಧಾಬಿ, ದೋಹಾ ಮತ್ತಿತರೆಡೆಗಳಿಂದ ನೇರ ವಿಮಾನ ಸಂಪರ್ಕ ದೊರೆಯಲಿದೆ. ಹೀಗಾಗಿ, ಮಂಗಳೂರು ಏರ್ಪೋರ್ಟ್ಗೆ ಆದಷ್ಟು ಬೇಗ “ಪಾಯಿಂಟ್ ಆಫ್ ಕಾಲ್ ಮಾನ್ಯತೆ” ನೀಡುವಂತೆ ಕ್ಯಾ. ಚೌಟ ಅವರು ವಿಮಾನಯಾನ ಸಚಿವರಿಗೆ ನೀಡಿರುವ ಮನವಿಯಲ್ಲಿ ಒತ್ತಾಯಿಸಿದ್ದಾರೆ.
ಸಚಿವ ಜೈ ಶಂಕರ್ ಭೇಟಿಯಾದ ಸಂಸದ ಕ್ಯಾ. ಚೌಟ:
ಕೇಂದ್ರ ವಿದೇಶಾಂಗ ಸಚಿವ ಡಾ. ಜೈ ಶಂಕರ್ ಅವರನ್ನು ಸಂಸದ ಕ್ಯಾ. ಚೌಟ ಗುರುವಾರ ಭೇಟಿ ಮಾಡಿದ್ದು ಈ ವೇಳೆ ವಿವಿಧ ವಿಷಯಗಳ ಕುರಿತು ಚರ್ಚೆ ನಡೆಸಿದರು. ವಿಶ್ವದ ವಿವಿಧ ಭಾಗಗಳಲ್ಲಿ ವಾಸಿಸುವ ಕರಾವಳಿ ಮೂಲದ ಎನ್ಆರ್ಐ ಎದುರಿಸುತ್ತಿರುವ ಸಮಸ್ಯೆಯ ಕುರಿತು ಸಚಿವರ ಗಮನ ಸೆಳೆದರು. ಈ ಸಂದರ್ಭದಲ್ಲಿ, ಸಂಸದರು ಕರಾವಳಿಯ ಸಂಸ್ಕೃತಿಯ ಪ್ರತೀಕವಾಗಿರುವ ಕಂಬಳ ಕ್ರೀಡೆಯ ಸುಂದರ ಫೋಟೋ ಫ್ರೇಮ್ ಅನ್ನು ಸಚಿವರಿಗೆ ಉಡುಗೊರೆಯಾಗಿ ನೀಡಿದರು.