ಮಂಗಳೂರು: ಮಂಗಳೂರಿನಲ್ಲಿ ಪ್ರಧಾನಿ ನರೇಂದ್ರ ಮೋದಿ ರೋಡ್ ಶೋ ನಡೆಸಿ ದಕ್ಷಿಣ ಕನ್ನಡ, ಉಡುಪಿ- ಚಿಕ್ಕಮಗಳೂರು ಕ್ಷೇತ್ರಗಳ ಬಿಜೆಪಿ ಅಭ್ಯರ್ಥಿಗಳ ಪರ ಮತಯಾಚಿಸಿದರು. ಬ್ರಹ್ಮಶ್ರೀ ನಾರಾಯಣಗುರು ಅವರ ಪ್ರತಿಮೆಗೆ ಮಾಲಾರ್ಪಣೆ ಮಾಡಿ ರೋಡ್ ಶೋ ಆರಂಭಿಸಿದರು. ಹೂವುಗಳಿಂದ ಅಲಂಕರಿಸಿದ್ದ ತೆರೆದ ವಾಹನದಲ್ಲಿ ರಸ್ತೆಯ ಇಕ್ಕೆಲಗಳಲ್ಲಿ ಕಿಕ್ಕಿರಿದು ಸೇರಿದ್ದ ಜನಸ್ತೋಮದತ್ತ ಕೈಬೀಸುತ್ತಾ ಸಾಗಿದ ಪ್ರಧಾನಿ ಮೋದಿ ಕಡಲ ತಡಿಯ ನಗರದ
ಕಾರ್ಯಕರ್ತರಲ್ಲಿ ಉತ್ಸಾಹ ತುಂಬಿದರು. ರಸ್ತೆಯ ಇಕ್ಕೆಲಗಳಲ್ಲಿ ಜಮಾಯಿಸಿದ ಜನಸ್ತೋಮ ಹೂಮಳೆಗೆರೆದರು. ಪ್ರಧಾನಿ ಆಗಮಿಸುತ್ತಿದ್ದಂತೆಯೇ ‘ಜೈ ಜೈ ಮೋದಿ… ಘೋಷಣೆ ಮುಗಿಲು ಮುಟ್ಡಿತ್ತು. ದಕ್ಷಿಣ ಕನ್ನಡ ಕ್ಷೇತ್ರದ ಅಭ್ಯರ್ಥಿ ಬ್ರಿಜೇಶ್ ಚೌಟ ಹಾಗೂ ಉಡುಪಿ- ಚಿಕ್ಕಮಗಳೂರು ಕ್ಷೇತ್ರದ ಅಭ್ಯರ್ಥಿ ಕೋಟ ಶ್ರೀನಿವಾಸ ಪೂಜಾರಿ,ನಾಯಕರ ಜೊತೆಗೆ ಪಕ್ಷದ ಹಿರಿಯ ಕಾರ್ಯಕರ್ತರು, ವಿವಿಧ ಸಮಾಜಗಳ ಮುಖಂಡರು ಇದ್ದರು. ರೋಡ್ ಶೋ ನೋಡಲು ರಸ್ತೆ ಬದಿಯಲ್ಲಿ ಪಕ್ಕದ ಕಟ್ಟಡಗಳ ಮೆಟ್ಟಿಲುಗಳಲ್ಲಿ ಮತ್ತಿತರ ಕಡೆ ಸಾವಿರಾರು ಮಂದಿ ಜಮಾಯಿಸಿದ್ದರು. ಮಂತ್ರ ಘೋಷ, ಶ್ರೀರಾಮ ಭಜನೆ, ಚೆಂಡೆವಾದನ ರೋಡ್ ಶೋಗೆ ವಿಶೇಷ ಕಳೆತಂದಿತ್ತು. ಸ್ವಯಂಸೇವಕರು ರಸ್ತೆಯ ಇಕ್ಕೆಲಗಳಲ್ಲೂ ಅಲ್ಲಲ್ಲಿ ಕುಡಿಯುವ ನೀರು, ತಂಪುಪಾನೀಯಗಳನ್ನು ಉಚಿತವಾಗಿ ವಿತರಿಸಿದರು.
ನಗರದಲ್ಲಿ ಪಕ್ಷದ ಕಾರ್ಯಕರ್ತರು, ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ
ಸೇರಿದ್ದರು.ನಾರಾಯಣಗುರು ವೃತ್ತದಿಂದ ಆರಂಭಗೊಂಡ ರೋಡ್ಶೋ, ಸುಮಾರು ಎರಡು ಕಿ.ಮೀ. ಕ್ರಮಿಸಿ ಮಂಜೇಶ್ವರ ಗೋವಿಂದ ಪೈ ವೃತ್ತದ ತನಕ ನಡೆಯಿತು. ರೋಡ್ ಶೋ ಮಾರ್ಗದಲ್ಲಿ ಅಲ್ಲಲ್ಲಿ ಸಣ್ಣ ಸಣ್ಣ ವೇದಿಕೆ ನಿರ್ಮಿಸಲಾಗಿದ್ದು, ಸಾಂಸ್ಕೃತಿಕ ಕಾರ್ಯಕ್ರಮ ಯಕ್ಷಗಾನ ಬಯಲಾಟದ ಪ್ರಸಂಗದ ಪ್ರದರ್ಶನ ನಡೆಯಿತು. ಬಿಗು ಭದ್ರತೆ ಏರ್ಪಡಿಸಲಾಗಿದೆ.
ಸುಮಾರು 2000ಕ್ಕೂ ಹೆಚ್ಚು ಪೊಲೀಸ್ ಸಿಬ್ಬಂದಿಯನ್ನು ಈ ರೋಡ್ ಶೋ ಭದ್ರತೆಗಾಗಿ ನಿಯೊಜಿಸಲಾಗಿತ್ತು. ಉನ್ನತ ಪೊಲೀಸ್ ಅಧಿಕಾರಿಗಳು ಸ್ಥಳದಲ್ಲಿದ್ದು ಭದ್ರತಾ ವ್ಯವಸ್ಥೆಯ ಉಸ್ತುವಾರಿ ವಹಿಸಿದ್ದರು. ನಗರದ ಪ್ರಮುಖ ವೃತ್ತಗಳ ಬಳಿಯೂ ಭದ್ರತಾ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ.ರೋಡ್ ಶೋ ಸಾಗಿದ ಮಾರ್ಗದಲ್ಲಿ ಮಧ್ಯಾಹ್ನ 2 ಗಂಟೆಯಿಂದಲೇ ವಾಹನಗಳ ಸಂಚಾರವನ್ನು ನಿರ್ಬಂಧಿಸಲಾಗಿತ್ತು.