ನವದೆಹಲಿ: ನರೇಂದ್ರ ಮೋದಿ ಅವರು ಸತತ ಮೂರನೇ ಅವಧಿಗೆ ದೇಶದ ಪ್ರಧಾನಿಯಾಗಿ ಇಂದು ರಾತ್ರಿ ಪ್ರಮಾಣವಚನ ಸ್ವೀಕರಿಸಲಿದ್ದು, ರಾಜ್ಯದ ಐವರಿಗೆ ಸಚಿವ ಸ್ಥಾನ ಖಾತ್ರಿಯಾಗಿದೆ ಎನ್ನಲಾಗುತಿದೆ.
ರಾಜ್ಯಸಭೆಯಲ್ಲಿ ರಾಜ್ಯವನ್ನು ಪ್ರತಿನಿಧಿಸುವ ನಿರ್ಮಲಾ ಸೀತಾರಾಮನ್, ಧಾರವಾಡ ಸಂಸದ ಪಲ್ಹಾದ ಜೋಶಿ, ತುಮಕೂರು ಸಂಸದ ವಿ.ಸೋಮಣ್ಣ, ಬೆಂಗಳೂರು ಉತ್ತರ ಸಂಸದೆ ಶೋಭಾ ಕರಂದ್ಲಾಜೆ ಹಾಗೂ
ಮಿತ್ರ ಪಕ್ಷವಾಗಿರುವ ಜೆಡಿಎಸ್ ನಾಯಕ ಎಚ್.ಡಿ.ಕುಮಾರಸ್ವಾಮಿ ಅವರಿಗೆ ಮೋದಿ ಸಂಪುಟದಲ್ಲಿ ಸ್ಥಾನ ಕಲ್ಪಿಸಲಾಗಿದೆ. ತಮಿಳುನಾಡಿನಲ್ಲಿ ಸೋಲು ಕಂಡಿರುವ ಬಿಜೆಪಿ ನಾಯಕ ಕೆ.ಅಣ್ಣಾಮಲೈ ಅವರಿಗೆ ಮೋದಿ ಸಂಪುಟದಲ್ಲಿ ಸ್ಥಾನ ಸಿಗಲಿದೆ ಎನ್ನಲಾಗುತ್ತಿದೆ.
ಮೋದಿ ಸಂಪುಟಕ್ಕೆ ಸುಮಾರು 30 ಮಂದಿ ಸೇರ್ಪಡೆಯಾಗುವ ಸಾಧ್ಯತೆ ಇದೆ. ಮೊದಲ ಹಂತದಲ್ಲಿ ಮೈತ್ರಿ ಪಕ್ಷಗಳ 12ರಿಂದ 15 ಮಂದಿಗೆ ಅವಕಾಶ ಸಿಗಲಿದೆ ಎನ್ನಲಾಗಿದೆ. ಯಾರಿಗೆಲ್ಲ ಸಚಿವ ಸ್ಥಾನ ಸಿಗಲಿದೆ ಎಂಬುದು ಇನ್ನೂ ಖಚಿತವಾಗಿಲ್ಲ.
ಕಳೆದ ಅವಧಿಗಳಲ್ಲಿ ಸಚಿವರಾಗಿದ್ದ ಅಮಿತ್ ಶಾ, ರಾಜನಾಥ್ ಸಿಂಗ್, ನಿತಿನ್ ಗಡ್ಕರಿ, ಪಿಯೂಷ್ ಗೋಯಲ್, ಅಶ್ವಿನಿ ವೈಷ್ಣವ್, ನಿರ್ಮಲಾ ಸೀತಾರಾಮನ್, ಕಿರಣ್ ರಿಜುಜು, ಸರ್ಬಾನಂದ ಸೋನವಾಲಾ ಮನಸುಖ್ ಮಾಂಡವೀಯ ಅವರು ಪ್ರಧಾನಿ ಅವರೊಂದಿಗೆ ಪ್ರಮಾಣವಚನ ಸ್ವೀಕರಿಸುವುದು ಬಹುತೇಕ ಖಚಿತವಾಗಿದೆ. ಅವರೊಂದಿಗೆ, ಹರಿಯಾಣದ ಮಾಜಿ ಮುಖ್ಯಮಂತ್ರಿ ಮೋಹನ್ ಲಾಲ್ ಖಟ್ಟರ್, ಮಧ್ಯಪ್ರದೇಶ ಮಾಜಿ ಸಿಎಂ ಶಿವರಾಜ್ ಸಿಂಗ್ ಚೌಹಾಣ್ ಮತ್ತು ತೆಲಂಗಾಣ ನಾಯಕ ಬಂಡಿ ಸಂಜಯ್ ಕುಮಾರ್, ತ್ರಿಶೂರ್ ಸಂಸದ ಸುರೇಶ್ ಗೋಪಿ ಅವರೂ ಹೊಸದಾಗಿ ಸಂಪುಟ ಸೇರಲಿದ್ದಾರೆ ಎನ್ನಲಾಗುತ್ತಿದೆ.
ಶಿವಸೇನಾ ನಾಯಕ ಪ್ರತಾಪ್ರಾವ್ ಜಾಧವ್, ಬಿಜೆಪಿ ನಾಯಕರುಗಳಾದ ಗುಜರಾತ್ನ ಸಿ.ಆರ್. ಪಾಟೀಲ್, ಮಧ್ಯಪ್ರದೇಶ ಜ್ಯೋತಿರಾದಿತ್ಯ ಸಿಂಧಿಯಾ, ಹರಿಯಾಣದ ರಾವ್ ಇಂದ್ರಜಿತ್ ಸಿಂಗ್, ಬಿಹಾರದ ನಿತ್ಯಾನಂದ ರೈ, ರಾಜಸ್ಥಾನದ ಭಗೀರಥ್ ಚೌಧರಿ, ದೆಹಲಿಯ ಹರ್ಷ ಮಲ್ಹೋತ್ರಾ ಸಹ ರೇಸ್ನಲ್ಲಿದ್ದಾರೆ.
ಟಿಡಿಪಿಯ ರಾಮ್ ಮೋಹನ್ ನಾಯ್ಡು, ಚಂದ್ರಶೇಖರ್ ಪೆಮ್ಮಾಸಂಜ್, ಜೆಡಿಯು ನಾಯಕರಾದ ಲಲನ್ ಸಿಂಗ್, ರಾಮನಾಥ್ ಠಾಕೂರ್, ಎಲ್ಜೆಪಿಯ ಚಿರಾಗ್ ಪಸ್ವಾನ್, ಎಚ್ಎಎಂ ಪಕ್ಷದ ಜೀತನ್ ರಾಮ್ ಮಾಂಝಿ ಮತ್ತು ಆರ್ಎಲ್ಡಿ ನಾಯಕ ಜಯಂತ್ ಚೌಧರಿ ಅವರ ಹೆಸರುಗಳೂ ಚಾಲ್ತಿಯಲ್ಲಿವೆ.
ರಾಷ್ಟ್ರಪತಿ ಭವನದಲ್ಲಿ ಇಂದು ರಾತ್ರಿ ನಡೆಯಲಿರುವ ಸಮಾರಂಭದಲ್ಲಿ ಮೋದಿ ಅವರು (ರಾತ್ರಿ 7.15ಕ್ಕೆ) ಪ್ರಮಾಣ ಸ್ವೀಕರಿಸಲಿದ್ದಾರೆ.