ಸುಳ್ಯ: ಶಾಸಕಿ ಭಾಗೀರಥಿ ಮುರುಳ್ಯ ಅವರು ಅರಣ್ಯ ಸಚಿವರಾದ ಈಶ್ವರ ಖಂಡ್ರೆ ಅವರನ್ನು ಭೇಟಿ ಮಾಡಿ ಸುಳ್ಯ ವಿಧಾನಸಭಾ ಕ್ಷೇತ್ರದಲ್ಲಿ ಮಿತಿ ಮೀರಿರುವ ವನ್ಯ ಪ್ರಾಣಿಗಳ ಹಾವಳಿಯನ್ನು ತಡೆಯಲು ಕ್ರಮ ಕೈಗೊಳ್ಳಬೇಕು ಎಂದು ಮನವಿ ಸಲ್ಲಿಸಿದರು. ಸುಳ್ಯ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯು ಬಹುತೇಕ
ಕೃಷಿ ಪ್ರಧಾನವಾಗಿರುವಂತಹ ಪ್ರದೇಶವಾಗಿದ್ದು, ಜನರು ಜೀವನೋಪಾಯಕ್ಕಾಗಿ ಕೃಷಿ ಚಟುವಟಿಕೆ ಮತ್ತು ಅದರ ಆದಾಯವನ್ನೇ ನಂಬಿಕೊಂಡಿದ್ದಾರೆ. ಕ್ಷೇತ್ರದಲ್ಲಿ ಎರಡು ಕಂದಾಯ ತಾಲೂಕುಗಳು ಬರುತ್ತಿದ್ದು ಒಟ್ಟು 75 ಕಂದಾಯ ಗ್ರಾಮಗಳನ್ನು ಒಳಗೊಂಡಿದೆ. ಗ್ರಾಮಗಳು ಬೆಟ್ಟ ಗುಡ್ಡ ಕಾಡು ಪ್ರದೇಶಗಳು ಹೊಂದಿಕೊಂಡಿರುವಂತಹ ಪ್ರದೇಶ, ಆನೆ, ಕಾಡುಕೋಣ, ಹಂದಿ ಮತ್ತಿತರ ಕಾಡು ಪ್ರಾಣಿಗಳಿಂದ ತೀವು ಕೃಷಿಗೆ ಹಾನಿಯಾಗುತ್ತಿದ್ದು ಕೃಷಿಕರು ಗಂಭೀರ ಸಮಸ್ಯೆಯನ್ನು ಎದುರಿಸುತ್ತಿದ್ದಾರೆ. ಇದರ ತಡೆಗೆ ಅಗತ್ಯ ಕ್ರಮ ಕೈಗೊಳ್ಳಬೇಕು.ಆನೆ ಕಾರಿಡಾರ್ ಮತ್ತು ಸೋಲಾರ್ ತಂತಿ ಬೇಲಿ ನಿರ್ಮಾಣ ಇದಕ್ಕೆ ಪರಿಹಾರ ಆಗಬಹುದೆಂದು ತಜ್ಞ ಕೃಷಿಕರ ಅಭಿಪ್ರಾಯವಾಗಿದೆ.
ಕೃಷಿಕರಿಗೆ ಆಗುತ್ತಿರುವ ಈ ಸಮಸ್ಯೆಯನ್ನು ವಿಶೇಷ ಪ್ರಕರಣವೆಂದು ಪರಿಗಣಿಸಿ ಕರ್ನಾಟಕ ಸರಕಾರ ಮತ್ತು ತಮ್ಮ ಇಲಾಖೆ ಸೂಕ್ತ ಕ್ರಮ ಕೈಗೊಂಡು, ಕ್ಷೇತ್ರದ ಕಾಡು ಪ್ರಾಣಿಗಳಿಂದ ಭಾದಿತವಾಗುತ್ತಿರುವ ಕೃಷಿ ಜಮೀನುಗಳ ಬಳಿ ಆನೆಕಾರಿಡಾರ್ ಮತ್ತು ಸೋಲಾರ್ ತಂತಿ ಬೇಲಿಗಳನ್ನು ನಿರ್ಮಾಣ ಮಾಡಲು ಅತಿ ಜರೂರಾಗಿ ಕ್ರಮಕೈಗೊಳ್ಳಬೇಕು ಎಂದು ಮನವಿಯಲ್ಲಿ ವಿನಂತಿಸಿದರು.