ಚಂಡಿಗಡ: ವೀರೋಚಿತ ಹೋರಾಟ ನೀಡಿದ ಪಂಜಾಬ್ ಕಿಂಗ್ಸ್ ತಂಡ ಗುರುವಾರ ನಡೆದ ಐಪಿಎಲ್ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ವಿರುದ್ಧ 9 ರನ್ ಅಂತರದಿಂದ ಸೋಲುಂಡಿದೆ.
ಬ್ಯಾಟರ್ ಅಶುತೋಶ್ ಶರ್ಮಾ(61 ರನ್, 28 ಎಸೆತ, 2 ಬೌಂಡರಿ, 7 ಸಿಕ್ಸರ್) ಅವರ ಅಮೋಘ ಬ್ಯಾಟಿಂಗ್ ವ್ಯರ್ಥವಾಯಿತು. ಗೆಲ್ಲಲು 193 ರನ್ ಗುರಿ ಬೆನ್ನಟ್ಟಿದ ಪಂಜಾಬ್
19.1 ಓವರ್ಗಳಲ್ಲಿ 183 ರನ್ಗೆ ಆಲೌಟಾಗಿ ಸೋಲೊಪ್ಪಿಕೊಂಡಿತು.ಜಸ್ಪ್ರೀತ್ ಬುಮ್ರಾ (3-21) ಹಾಗೂ ಜೆರಾಲ್ಡ್ ಕೊಯೆಟ್ಝಿ(3-32) ಅವರ ಮಾರಕ ಬೌಲಿಂಗ್ ದಾಳಿ ಮುಂಬೈಗೆ ಗೆಲುವಿನ ಉಡುಗೊರೆ ನೀಡಿತು.
ಪಂಜಾಬ್ ಪರ ಅಶುತೋಶ್ ಶರ್ಮಾ ಏಕಾಂಗಿ ಹೋರಾಟ ನೀಡಿದರು. ಶಶಾಂಕ್ ಸಿಂಗ್ 41 ರನ್, ಹರ್ಪ್ರೀತ್ ಬ್ರಾತ್ 21 ರನ್ ಗಳಿಸಿದರು.
ಮೊದಲು ಬ್ಯಾಟ್ ಮಾಡಿದ ಮುಂಬೈ ಪರ ಸ್ಟಾರ್ ಬ್ಯಾಟರ್ ಸೂರ್ಯಕುಮಾರ್ ಯಾದವ್ (78 ರನ್, 53 ಎಸೆತ)ಅರ್ಧಶತಕದ ಕೊಡುಗೆಯ ನೆರವಿನಿಂದ ನಿಗದಿತ 20 ಓವರ್ಗಳಲ್ಲಿ 7 ವಿಕೆಟ್ಗಳ ನಷ್ಟಕ್ಕೆ 192 ರನ್ ಗಳಿಸಿತು. ರೋಹಿತ್ ಶರ್ಮಾ(36 ರನ್, 25 ಎಸೆತ, 2 ಬೌಂಡರಿ, 3 ಸಿಕ್ಸರ್) ಹಾಗೂ ತಿಲಕ್ ವರ್ಮಾ(ಔಟಾಗದೆ 34 ರನ್, 18 ಎಸೆತ, 2 ಬೌಂಡರಿ, 2 ಸಿಕ್ಸರ್)ಕೂಡ ಮುಂಬೈ ತಂಡಕ್ಕೆ ಉಪಯುಕ್ತ ಕೊಡುಗೆ ನೀಡಿದರು.
ಪಂಜಾಬ್ ಕಿಂಗ್ಸ್ ಬೌಲಿಂಗ್ ವಿಭಾಗದಲ್ಲಿ ಹರ್ಷಲ್ ಪಟೇಲ್(3-31) ಯಶಸ್ವಿ ಪ್ರದರ್ಶನ ನೀಡಿದರು. ನಾಯಕ ಸ್ಯಾಮ್ ಕರ್ರನ್(2-41) ಎರಡು ವಿಕೆಟ್ ಪಡೆದರು.