ನವದೆಹಲಿ:ಕೇರಳದ ಸಿಎಂ ಆಯ್ಕೆ ಕುರಿತು ಕಳೆದ 9 ದಿನಗಳಲ್ಲಿ ಇದ್ದ ಕುತೂಹಲಕ್ಕೆ ನಾಳೆ ತೆರೆಯಾಗಲಿದೆ. ನೂತನ ಮುಖ್ಯಮಂತ್ರಿಯನ್ನು ಇಂದು ಘೋಷಣೆ ಮಾಡಬಹುದು ಎಂದು ನಿರೀಕ್ಷಿಸಲಾಗಿದ್ದರೂ ಕೇರಳ ಸಿಎಂನ್ನು ನಾಳೆ(ಮೇ.14) ಘೋಷಣೆ ಮಾಡಲಾಗುವುದು ಎಂದು ಹೈಕಮಾಂಡ್ ಹೇಳಿದೆ.ಮುಖ್ಯಮಂತ್ರಿ ಆಯ್ಕೆ ಬಗ್ಗೆ ರಾಹುಲ್ ಗಾಂಧಿ ಮತ್ತು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ್ ಖರ್ಗೆ ಇಂದು ಅಂತಿಮ ಹಂತದ
ಚರ್ಚೆ ನಡೆಸಿದರು. ಮುಖ್ಯಮಂತ್ರಿ ಯಾರಾಗಲಿದ್ದಾರೆ ಎಂಬ ಬಗ್ಗೆ ನಾಳೆ ಘೋಷಿಸಲಾಗುವುದು ಎಂದು ಎಐಸಿಸಿ ಪ್ರಧಾನ ಕಾರ್ಯದರ್ಶಿ ಜಯ್ರಾಮ್ ರಮೇಶ್ ತಿಳಿಸಿದ್ದಾರೆ.
ಈ ಮಧ್ಯೆ ಕೇರಳದಲ್ಲಿ ಕಾಂಗ್ರೆಸ್ ನೇತೃತ್ವದ ಯುಡಿಎಫ್ ಭರ್ಜರಿ ಜಯ ಸಾಧಿಸಿ ಅಧಿಕಾರಕ್ಕೆ ಬರಲು ನೇತೃತ್ವ ವಹಿಸಿದ್ದ ವಿಪಕ್ಷ ನಾಯಕ ವಿ.ಡಿ.ಸತೀಶನ್ ಅವರಿಗೆ ಮುಖ್ಯಮಂತ್ರಿ ಪಟ್ಟ ಸಿಗಲಿದೆಯೇ ಎಂಬ ಕುತೂಹಲ ಎಲ್ಲೆಡೆ ಮನೆ ಮಾಡಿದೆ. ಸಿಎಂ ಸ್ಥಾನಕ್ಕೆ ಮುಖ್ಯವಾಗಿ ವಿಪಕ್ಷ ನಾಯಕ ವಿ.ಡಿ. ಸತೀಶನ್, ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ.ಸಿ. ವೇಣುಗೋಪಾಲ್ ಮತ್ತು ಹಿರಿಯ ಮುಖಂಡ ರಮೇಶ್ ಚೆನ್ನಿತ್ತಲ ನಡುವೆ ಸ್ಪರ್ಧೆ ಏರ್ಪಟ್ಟಿದೆ.ಕೇರಳದ ಮುಖ್ಯಮಂತ್ರಿ ಸ್ಥಾನಕ್ಕೆ ಯುಡಿಎಫ್ ಮೈತ್ರಿಕೂಟದಲ್ಲಿರುವ ಮುಸ್ಲಿಂ ಲೀಗ್ ಹಾಗೂ ಇತರ ಪಕ್ಷಗಳ ಬೆಂಬಲ,ಬಹುತೇಕ ಕಾರ್ಯಕರ್ತರ ಹಾಗೂ ಕೇರಳದ ಜನರ ಒಲವು ಸತೀಶನ್ ಅವರ ಪರವಾಗಿದೆ.
ಸತೀಶನ್ ಬೆಂಬಲಿಗರಾದ ಕಾರ್ಯಕರ್ತರು ಬಲುದೊಡ್ಡ ಅಭಿಯಾನವನ್ನೇ ಮಾಡಿದ್ದಾರೆ. ಸಾಮಾಜಿಕ ಜಾಲತಾಣಗಳ ಮೂಲಕವೂ, ಪ್ಲೆಕ್ಸ್ ಸ್ಥಾಪಿಸುವುದರ ಮೂಲಕವೂ ತಮ್ಮ ನಾಯಕನ ಪರವಾಗಿ ಅಭಿಯಾನ ನಡೆಸಿದ್ದಾರೆ.2021ರ ಚುನಾವಣೆಯಲ್ಲಿ ಕಾಂಗ್ರೆಸ್ ಸೋತ ನಂತರ, ವಿ.ಡಿ ಸತೀಶನ್ ಅವರು ವಿರೋಧ ಪಕ್ಷದ ಮುಖಂಡರಾಗಿ, ಯುಡಿಎಫ್ನ ಮುಂಚೂಣಿಯಲ್ಲಿ ನಿಂತು, ಪಕ್ಷವನ್ನು ಮರಳಿ ಅಧಿಕಾರಕ್ಕೆ ತಂದಿದ್ದಾರೆ ಎಂದು ಅವರ ಬೆಂಬಲಿಗರ ಅಭಿಪ್ರಾಯ.
ಆದರೆ ವಿಧಾನಸಭೆಯಲ್ಲಿ ಸ್ಪರ್ಧಿಸದಿದ್ದರೂ ಸಂಸದ ಕೆ.ಸಿ. ವೇಣುಗೋಪಾಲ್ ಅವರಿಗೆ ಬಹುತೇಕ ಶಾಸಕರು ಬೆಂಬಲ ಇದೆ. ರಾಹುಲ್ ಗಾಂಧಿ ಅವರ ಆಪ್ತರಾದ ವೇಣುಗೋಪಾಲ್ ಅವರಿಗೆ ಹೈಕಮಾಂಡ್ ಬೆಂಬಲ ಸಿಗಬಹುದೇ ಎಂಬ ಕುತೂಹಲವೂ ಇದೆ.
ಹಿರಿಯ ಮುಖಂಡರಾದ ರಮೇಶ್ ಚೆನ್ನಿತಲ ಅವರಿಗೆ ಹಿರಿತನದ ಆಧಾರದಲ್ಲಿ ಮುಖ್ಯಮಂತ್ರಿ ಸ್ಥಾನ ನೀಡಬೇಕು ಎಂಬುದು ಚೆನ್ನಿತಲ ಬೆಂಬಲಿಗರ ಒತ್ತಾಯ. ಕೇರಳಂ ವಿಧಾನಸಭೆಗೆ ಏಪ್ರಿಲ್ 9ರಂದು ಮತದಾನ ನಡೆದು ಮೇ 4ರಂದು ಫಲಿತಾಂಶ ಪ್ರಕಟವಾಗಿತ್ತು. ಯುಡಿಎಫ್ 102 ಸ್ಥಾನಗಳಲ್ಲಿ ಗೆದ್ದು ದಶಕದ ಬಳಿಕ ಅಧಿಕಾರಕ್ಕೆ ಮರಳಿತ್ತು.













