ಬೆಂಗಳೂರು: ಮುಂಗಾರು ಮಳೆ ಬಿರುಸುಗೊಂಡಿದ್ದು ಸುಳ್ಯದಲ್ಲಿ ಭಾರೀ ಮಳೆಯಾಗಗುತಿದೆ. ಸುಳ್ಯ ನಗರ ಸೇರಿದಂತೆ ವಿವಿಧ ಕಡೆ ಧಾರಾಕಾರ ಮಳೆಯಾಗಿದೆ. ಸುಳ್ಯ ನಗರದಲ್ಲಿ ಸುಮಾರು ಒಂದು ಗಂಟೆಗೂ ಹೆಚ್ಚು ಕಾಲ ಎಡೆ ಬಿಡದೆ ಮಳೆ ಸುರಿದಿದೆ. ಭಾರೀ ಮಳೆಗೆ ನಗರದ ರಸ್ತೆಯಲ್ಲಿಯೇ ಮಳೆ ನೀರು ತುಂಬಿ ಹರಿಯುತಿದೆ. ಚರಂಡಿಯ ಅವ್ಯವಸ್ಥೆಯಿಂದ
ಕೆಸರು ಮಿಶ್ರಿತ ಮಳೆ ನೀರು ಮುಖ್ಯ ರಸ್ತೆ ಸೇರಿ ಎಲ್ಲೆಡೆ ರಸ್ತೆಯಲ್ಲಿಯೇ ಹರಿಯುತಿದೆ. ವಾಹನಗಳು ಓಡಾಡುವಾಗ ಕೆಸರು ನೀರು ಸುತ್ತಲೂ ಕಾರಂಜಿಯಂತೆ ಸಿಂಚನವಾಗುತಿದೆ.
ರಸ್ತೆಯಲ್ಲಿಯೇ ಹರಿಯುತ್ತಿರುವ ಮಳೆ ನೀರು.
ಮುಂಗಾರು ಬಿರುಸುಗೊಳ್ಳುವ ಸೂಚನೆ:
ರಾಜ್ಯದಲ್ಲಿ ಇಂದಿನಿಂದ ಮುಂಗಾರು ಮಳೆ ಬಿರುಸುಗೊಳ್ಳುವ ಸಾಧ್ಯತೆಯಿದ್ದು ವಿವಿಧೆಡೆ ಮುಂದಿನ ಕೆಲವು ದಿನಗಳ ಕಾಲ ಗುಡುಗು ಸಹಿತ ಭಾರಿ ಮಳೆಯಾಗುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ. 10ರವರೆಗೆ ರಾಜ್ಯದ ಕೆಲ ಜಿಲ್ಲೆಗಳಿಗೆ ‘ಯೆಲ್ಲೊ ಅಲರ್ಟ್’ ಘೋಷಿಸಲಾಗಿದೆ. ಕಲಬುರಗಿ, ವಿಜಯಪುರ, ಬಾಗಲಕೋಟೆ, ಬೆಳಗಾವಿ, ಚಿತ್ರದುರ್ಗ, ಚಿಕ್ಕಬಳ್ಳಾಪುರ ಹಾಗೂ ಕೋಲಾರ ಜಿಲ್ಲೆಗೆ ಶುಕ್ರವಾರ
‘ಯೆಲ್ಲೊ ಅಲರ್ಟ್’ ನೀಡಲಾಗಿದೆ. ಈ ಜಿಲ್ಲೆಗಳ ಜತೆಗೆ ದಕ್ಷಿಣ ಕನ್ನಡ, ಉಡುಪಿ ಹಾಗೂ ಉತ್ತರ ಕನ್ನಡ ಜಿಲ್ಲೆಯಲ್ಲಿ ಭಾರಿ ಮಳೆಯಾಗುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ಹೇಳಿದೆ. ಕರಾವಳಿಯಲ್ಲಿ ಶುಕ್ರವಾರ ಉತ್ತಮ ಮಳೆಯಾಗಲಿದ್ದು ಗಂಟೆಗೆ 55 ಕಿ.ಮೀ. ವೇಗದಲ್ಲಿ ಗಾಳಿ ಬೀಸುವ ಸಾಧ್ಯತೆಯಿದೆ ಎಂದು ಇಲಾಖೆ ಮುನ್ಸೂಚನೆ ನೀಡಿದೆ.8ರಿಂದ ಉತ್ತರ ಕನ್ನಡ ಹಾಗೂ ಉಡುಪಿ ಜಿಲ್ಲೆಯ ಕೆಲವೆಡೆ ಭಾರಿ ಮಳೆಯಾಗುವ ಸಾಧ್ಯತೆಯಿದೆ ಎಂದು ಇಲಾಖೆ ಸೂಚನೆ ನೀಡಿದೆ.