ಮಂಗಳೂರು:ದಕ್ಷಿಣ ರೈಲ್ವೆ ವಲಯದ ವ್ಯಾಪ್ತಿಯಲ್ಲಿರುವ ಮಂಗಳೂರು ಭಾಗದ ರೈಲ್ವೆ ಜಾಲವನ್ನು ನೈಋತ್ಯ ರೈಲ್ವೆ ವಲಯಕ್ಕೆ ಒಳಪಟ್ಟ ಮೈಸೂರು ವಿಭಾಗಕ್ಕೆ ಸೇರ್ಪಡೆಗೊಳಿಸುವುದಕ್ಕೆ ರೈಲ್ವೆ ಸಚಿವಾಲಯದಿಂದ ಒಪ್ಪಿಗೆ ಲಭಿಸಿದೆ. ಇದರೊಂದಿಗೆ, ದಕ್ಷಿಣ ಕನ್ನಡ ಜನರ ಬಹು ವರ್ಷಗಳ ಬಹುದೊಡ್ಡ ರೈಲ್ವೆ ಬೇಡಿಕೆ ಈಡೇರುತ್ತಿದೆ ಎಂದು
ದಕ್ಷಿಣ ಕನ್ನಡ ಸಂಸದ ಕ್ಯಾ. ಬ್ರಿಜೇಶ್ ಚೌಟ ಅವರು ತಿಳಿಸಿದ್ದಾರೆ. ಮಂಗಳೂರು ಭಾಗದ ರೈಲ್ವೆ ಸಂಪರ್ಕ ಜಾಲವು ಸದ್ಯ ದಕ್ಷಿಣ ರೈಲ್ವೆ ವ್ಯಾಪ್ತಿಯ ಪಾಲ್ಘಾಟ್ ವಿಭಾಗ ಹಾಗೂ ನೈಋತ್ಯ ರೈಲ್ವೆ ವಲಯ ವ್ಯಾಪ್ತಿಯ ಮೈಸೂರು ವಿಭಾಗದೊಂದಿಗೆ ಹಂಚಿಕೊಂಡಿದೆ. ಇದರಿಂದ ಮಂಗಳೂರು ಸೇರಿದಂತೆ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ರೈಲ್ವೆ ಮೂಲಸೌಕರ್ಯ ಅಭಿವೃದ್ಧಿ, ಹೊಸ ರೈಲುಗಳ ಅಳವಡಿಕೆ ಸೇರಿ ನಾನಾ ಸಂದರ್ಭದಲ್ಲಿ ಸಾಕಷ್ಟು ಆಡಳಿತಾತ್ಮಕ ಸಮಸ್ಯೆ-ಸವಾಲುಗಳು ಎದುರಾಗುತ್ತಿದ್ದವು. ಹೀಗಾಗಿ, ಮಂಗಳೂರು ಭಾಗದ ಪೂರ್ತಿ ರೈಲು ವ್ಯಾಪ್ತಿಯನ್ನು ದಕ್ಷಿಣ ರೈಲ್ವೆಯಿಂದ ಪ್ರತ್ಯೇಕಿಸಿ ನೈಋತ್ಯ ವಲಯಕ್ಕೆ ಸೇರ್ಪಡೆಗೊಳಿಸಬೇಕೆಂಬುದು ಈ ಭಾಗದ ಜನರ ಬಹು ವರ್ಷಗಳ ಪ್ರಮುಖ ಬೇಡಿಕೆಯಾಗಿತ್ತು. ಇದೀಗ ಮಂಗಳೂರು ಭಾಗವನ್ನು ಮೈಸೂರು ವಿಭಾಗಕ್ಕೆ ಸೇರ್ಪಡೆಗೊಳಿಸಿದೆ ಎಂದು ಕ್ಯಾ.ಚೌಟ ಹೇಳಿದ್ದಾರೆ.
ಉಳ್ಳಾಲದವರೆಗಿನ ಮಂಗಳೂರು ರೈಲ್ವೆ ಪ್ರದೇಶವನ್ನು ದಕ್ಷಿಣ ರೈಲ್ವೆಯ ಪಾಲಕ್ಕಾಡ್ ವಿಭಾಗದಿಂದ ನೈಋತ್ಯ ರೈಲ್ವೆಯ ಮೈಸೂರು ವಿಭಾಗಕ್ಕೆ ಅಧಿಕೃತವಾಗಿ ವರ್ಗಾಯಿಸಲಾಗುವುದು.ನೂತನ ವ್ಯವಸ್ಥೆಯಡಿ ವಿಭಾಗೀಯ ಪ್ರಧಾನ ಕಚೇರಿ ಮೈಸೂರಿನಲ್ಲಿದ್ದರೆ, ವಲಯ ಪ್ರಧಾನ ಕಚೇರಿ ಹುಬ್ಬಳ್ಳಿಯಲ್ಲಿ ಇರಲಿದೆ. ಈ ನೂತನ ಆಡಳಿತಾತ್ಮಕ ಬದಲಾವಣೆಯುಅಕ್ಟೋಬರ್ 1, 2026 ರಿಂದ ಜಾರಿಗೆ ಬರಲಿದೆ.ಮಂಗಳೂರು ಪ್ರದೇಶವನ್ನು ನೈಋತ್ಯ ರೈಲ್ವೆಗೆ ಸೇರ್ಪಡೆಗೊಳಿಸುವುದರಿಂದ ಆಡಳಿತಾತ್ಮಕ ಅಡೆತಡೆಗಳು ನಿವಾರಣೆಯಾಗಿ, ಸಾರ್ವಜನಿಕ ಕುಂದುಕೊರತೆಗಳ ಶೀಘ್ರ ಪರಿಹಾರ ಹಾಗೂ ಕರಾವಳಿ ಭಾಗದ ರೈಲ್ವೆ ಮೂಲಸೌಕರ್ಯ ಮತ್ತು ಸಂಪರ್ಕ ವೃದ್ಧಿಗೆ ಹೊಸ ವೇಗ ಸಿಗಲಿದೆ ಎಂದು ಕೇಂದ್ರ ರೈಲ್ವೇ ಸಚಿವರಾದ ವಿ.ಸೋಮಣ್ಣ ಹೇಳಿದ್ದಾರೆ.







