ಮಂಗಳೂರು: ಜಿಲ್ಲೆಯಲ್ಲಿ ಭಾರಿ ಮಳೆಯಿಂದಾಗಿ ನಷ್ಟವಾದ ಶಾಲಾ ಬೋಧನಾ ಅವಧಿಯನ್ನು ಸರಿದೂಗಿಸಲು ಸೆಪ್ಟೆಂಬರ್ 2ನೇ ಶನಿವಾರದಿಂದ ಹೆಚ್ಚುವರಿ ತರಗತಿ ನಡೆಸುವಂತೆ ಶಾಲಾ ಶಿಕ್ಷಣ ಇಲಾಖೆ ಉಪನಿರ್ದೇಶಕರು ಆದೇಶ ಹೊರಡಿಸಿದ್ದಾರೆ. ಜಿಲ್ಲೆಯ
ಮಂಗಳೂರು ಉತ್ತರ, ಮಂಗಳೂರು ದಕ್ಷಿಣ, ಬಂಟ್ವಾಳ ಮತ್ತು ಮೂಡುಬಿದಿರೆ ತಾಲೂಕುಗಳಲ್ಲಿ 8 ಪೂರ್ಣ ದಿನ ಹಾಗೂ 1 ಅರ್ಧ ದಿನ ರಜೆ ನೀಡಲಾಗಿತ್ತು. ಅದೇ ರೀತಿ ಬೆಳ್ತಂಗಡಿ, ಪುತ್ತೂರು ಹಾಗೂ ಸುಳ್ಯ ತಾಲೂಕುಗಳಿಗೆ 9 ಪೂರ್ಣ ದಿನ ರಜೆ ನೀಡಲಾಗಿತ್ತು. ಇದನ್ನು ಸರಿದೂಗಿಸಲು ಸೆಪ್ಟೆಂಬರ್ 2ನೇ ಶನಿವಾರದಿಂದ ಅಪರಾಹ್ನ ಪೂರ್ಣ ತರಗತಿಗಳನ್ನು ಕಡ್ಡಾಯವಾಗಿ ನಡೆಸಬೇಕು. ಇತರ ದಿನಗಳಲ್ಲಿ ವಿದ್ಯಾರ್ಥಿಗಳಿಗೆ ಶ್ರಮವಾಗದಂತೆ ಸಂಜೆಯ ವೇಳೆ ಒಂದು ಹೆಚ್ಚುವರಿ ಪಿರಿಯಡ್ ತೆಗೆದುಕೊಂಡು ಪಠ್ಯಕ್ರಮ ಪೂರ್ಣಗೊಳಿಸಬೇಕು. ಮುಖ್ಯ ಶಿಕ್ಷಕರು, ಸಹ ಶಿಕ್ಷಕರು ಮತ್ತು ಎಸ್ಡಿಎಂಸಿ ಪದಾಧಿಕಾರಿಗಳು ಚರ್ಚೆ ನಡೆಸಿ, ತಮ್ಮ ಶಾಲೆಗೆ ನಷ್ಟವಾದ ದಿನಗಳನ್ನು ಲೆಕ್ಕಹಾಕಿ ಹೊಸ ವೇಳಾಪಟ್ಟಿಯಲ್ಲಿ ದಾಖಲಿಸಿ ಶೈಕ್ಷಣಿಕ ಮಾರ್ಗಸೂಚಿಯಂತೆ ಬೋಧನಾ ದಿನಗಳನ್ನು ಸರಿದೂಗಿಸಲು ಸೂಚಿಸಿ ಆದೇಶ ಹೊರಡಿಸಲಾಗಿದೆ.







