ಮಂಡೆಕೋಲು:ಗುರಿ ಸ್ಪಷ್ಟವಾಗಿದ್ದು, ಗುರಿ ಮುಟ್ಟಲು ನಿರಂತರ ಪರಿಶ್ರಮ, ಶ್ರದ್ಧೆ ಇದ್ದರೆ ಸಾಧನೆ ಮಾಡಲು ಸಾಧ್ಯ.ಭಾರತೀಯ ಕಲೆಯ ಮೂಲಕ ಅಭಿಷೇಕ್ ಕಣೆಮರಡ್ಕ ಸಾಧನೆ ಮಾಡಿರುವುದು ಸಂತಸದ ವಿಷಯ ಎಂದು ಪುತ್ತೂರಿನ ವಿವೇಕಾನಂದ ವಿದ್ಯಾವರ್ಧಕ ಸಂಘದ ಅಧ್ಯಕ್ಷ ಡಾ. ಪ್ರಭಾಕರ ಭಟ್ ಕಲ್ಲಡ್ಕ ಹೇಳಿದ್ದಾರೆ.ಕೂಚಿಪುಡಿ ನೃತ್ಯದಲ್ಲಿ ನಿರಂತರ 24 ಗಂಟೆಗಳ ಕಾಲ ನೃತ್ಯ ಮಾಡುವ ಮೂಲಕ
ಗೋಲ್ಡನ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್ಸ್ನಲ್ಲಿ ತನ್ನ ಹೆಸರನ್ನು ದಾಖಲಿಸಿದ ಸುಳ್ಯದ ನೆಹರೂ ಮೆಮೋರಿಯಲ್ ಕಾಲೇಜಿನ ದ್ವಿತೀಯ ಬಿ.ಎಸ್ಸಿ ವಿದ್ಯಾರ್ಥಿ, ಮಂಡೆಕೋಲಿನ ಎಂ.ಅಭಿಷೇಕ್ ಕಣೆಮರಡ್ಕ ಅವರಿಗೆ ಮಂಡೆಕೋಲಿನಲ್ಲಿ ನಡೆದ ಹುಟ್ಟೂರ ಸನ್ಮಾನ ಕಾರ್ಯಕ್ರಮದಲ್ಲಿ ಅಭಿಷೇಕ್ ಅವರನ್ನು ಸನ್ಮಾನಿಸಿ ಅವರು ಮಾತನಾಡಿದರು. ನಮ್ಮ ಎಲ್ಲಾ ಕಲೆಗಳು ಕೂಡ ದೇವರಿಗೆ ಸಮರ್ಪಣೆಯಾಗುತ್ತದೆ. ದೇವರಿಗೆ

ಸಮರ್ಪಣೆಯಾಗುವುದು ಪ್ರತಿಯೊಂದು ಕೂಡ ಶ್ರೇಷ್ಠವಾದುದು. ತದೇಕ ಚಿತ್ತದಿಂದ ನಿರಂತರ ಪರಿಶ್ರಮದ ಮೂಲಕ ಅಭಿಷೇಕ್ ಕಲಾ ಸೇವೆಯನ್ನು ಮಾಡಿದ ಕಾರಣ ಈ ಸಾಧನೆ ಸಾಧ್ಯವಾಯಿತು. ಭಾರತದಲ್ಲಿ ದೇವರು ಮತ್ತು ದೇಶ ಒಂದೇ ಎಂಬ ಕಲ್ಪನೆ, ಆದುದರಿಂದ ದೇವರಿಗೆ ಸಮರ್ಪಣೆಯಾದ ಕಲಾ ಸೇವೆ ದೇಶಕ್ಕೂ ಸಮರ್ಪಣೆಯಾದಂತೆ. ಅಭಿಷೇಕ್ನ ಸಾಧನೆ ಮುಂದುವರಿದು ಇನ್ನಷ್ಟು ಉತ್ತುಂಗಕ್ಕೆ ಏರುವಂತಾಗಬೇಕು ಎಂದು ಹಾರೈಸಿದರು.
ಶಾಸಕಿ ಭಾಗೀರಥಿ ಮುರುಳ್ಯ ಮಾತನಾಡಿ ‘ ಅಭಿಷೇಕ್ನ ಸಾಧನೆ ಇತರರಿಗೂ ಪ್ರೇರಣೆಯಾಗಬೇಕು. ನಾಡಿಗೆ ಹೆಮ್ಮೆ ತರುವ ಸಾಧನೆ ಎಂದು ಶ್ಲಾಘಿಸಿದರು.
ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡೆಮಿಯ ಅಧ್ಯಕ್ಷ ಸದಾನಂದ ಮಾವಜಿ ಮಾತನಾಡಿ ‘ ಅಭಿಷೇಕ್ ಕಣೆಮರಡ್ಕ ಅದ್ಭುತ ಪ್ರತಿಭೆ, ಗ್ರಾಮೀಣ ಭಾಗದಲ್ಲಿ ಸ್ವಪ್ರಯತ್ನದಿಂದ ಬೆಳೆದು ಬರುವ ಪ್ರತಿಭೆಗಳಿಗೆ ಪ್ರೋತ್ಸಾಹ ನೀಡಬೇಕು ಎಂದರು.
ಮಂಡೆಕೋಲು ಪ್ರಾಥಮಿಕ ಕೃಷಿಪತ್ತಿನ ಸಹಕಾರ ಸಂಘದ ಅಧ್ಯಕ್ಷ ಸುರೇಶ್ ಕಣೆಮರಡ್ಕ, ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿ ರಮೇಶ್, ನೆಹರೂ ಮೆಮೋರಿಯಲ್ ಕಾಲೇಜಿನ ಐ.ಕ್ಯೂ.ಎ.ಸಿ ಸಂಚಾಲಕಿ ಡಾ. ಮಮತಾ. ಕೆ ವೇದಿಕೆಯಲ್ಲಿ ಉಪಸ್ಥಿತರಿದ್ದರು.ಅಭಿಷೇಕ್ನ, ತಂದೆ ರವಿ ಕಣೆಮರಡ್ಕ ಹಾಗೂ ತಾಯಿ ಸುಜಾತ ಅವರನ್ನು ಸನ್ಮಾನಿಸಲಾಯಿತು.ಮಂಡೆಕೋಲು

ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಅಮೃತ ಸಹಕಾರ ಸದನ ಸಭಾಂಗಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಶಿವಪ್ರಸಾದ್ ಉಗ್ರಾಣಿಮನೆ ಸ್ವಾಗತಿಸಿದರು, ಸುರೇಶ್ ಕಣೆಮರಡ್ಕ ಪ್ರಾಸ್ತಾವಿಕವಾಗಿ ಮಾತನಾಡಿದರು. ಸಾವಿತ್ರಿ ಕಣೆಮರಡ್ಕ ಅಭಿನಂದನಾ ಪತ್ರ ವಾಚಿಸಿದರು. ಉಪನ್ಯಾಸಕಿ ಪಿ.ಬಿ.ಬೇಬಿ ವಿದ್ಯಾ ಕಾರ್ಯಕ್ರಮ ನಿರೂಪಿಸಿದರು.
ಅಭಿನಂದನಾ ಸಮಾರಂಭಕ್ಕಿಂತ ಮುನ್ನ ಮೆರವಣಿಗೆ ನಡೆಯಿತು. ಅಭಿಷೇಕ್ ಕಣೆಮರಡ್ಕ, ತಂದೆ ರವಿ ಕಣೆಮರಡ್ಕ ಹಾಗೂ ತಾಯಿ ಸುಜಾತ ಅವರನ್ನು ತೆರೆದ ವಾಹನದಲ್ಲಿ ಕರೆ ತರಲಾಯಿತು. ಚೆಂಡೆ, ವಾದ್ಯ, ಮೇಳಗಳು ಮೆರವಣಿಗೆಗೆ ಸಾಥ್ ನೀಡಿದವು.


















