ಸುಳ್ಯ:ಸುಳ್ಯದ ಸಾಂಸ್ಕೃತಿಕ ಕಲಾ ಶಾಲೆ ರಂಗಮಯೂರಿಯ ರಾಜ್ಯಮಟ್ಟದ ಬೇಸಿಗೆ ಶಿಬಿರ ‘ಬಣ್ಣ’ಸಮಾರೋಪ ಹಂತಕ್ಕೆ ಬಂದಿದ್ದು ಶಿಬಿರದಲ್ಲಿ ಐದು ವೈವಿಧ್ಯಮಯ ಕಿರು ನಾಟಕಗಳು ಸಿದ್ಧಗೊಂಡಿದೆ. ಇತರ ಕಲೆಗಳ ವೈವಿಧ್ಯಮಯ ಕಲಿಕೆಯ ಜೊತೆಗೆ ನಾಟಕ ತರಬೇತಿಗೆ ಆದ್ಯತೆ ನೀಡುವುದು ‘ಬಣ್ಣ’ ಶಿಬಿರದ ವಿಶೇಷತೆ. ಈ ಬಾರಿಯ ಶಿಬಿರದಲ್ಲಿ ವಿವಿಧ ಪ್ರಕಾರಗಳ
ನಾಟಕ ಕಲಿಕೆಗೆ ಆದ್ಯತೆ ನೀಡಲಾಗಿದ್ದು ಪೌರಾಣಿಕ, ಐತಿಹಾಸಿಕ ಜಾನಪದ, ಶೈಲೀಕೃತ, ಸಾಮಾಜಿಕ, ಸಮಕಾಲೀನ ಹೀಗೆ ವಿವಿಧ ವಿಭಾಗಗಳಲ್ಲಿ ನಾಟಕ ತರಬೇತಿ ನೀಡಲಾಗಿದೆ. ಶಿಬಿರದಲ್ಲಿ ಭಾಗವಹಿಸಿದ 7 ರಿಂದ 17 ವಯಸ್ಸಿನ 100ಕ್ಕೂ ಅಧಿಕ ಮಕ್ಕಳನ್ನು ವಿವಿಧ ಗುಂಪುಗಳಾಗಿ ವಿಂಗಡಿಸಿ ರಂಗ ತರಬೇತಿ ನೀಡಲಾಗಿದೆ. ರಂಗ ಕಲೆಯ ವಿವಿಧ ಪ್ರಕಾರಗಳಾದ ಅಭಿನಯ, ವಸ್ತ್ರ ವಿನ್ಯಾಸ, ರಂಗ ವಿನ್ಯಾಸ, ಪರಿಕರ ತಯಾರಿಕೆ, ಉಚ್ಛಾರಣೆ, ಆಂಗಿಕ, ವಾಚಿಕ ಅಭಿನಯ ವೇದಿಕೆ ಒಳಗೊಳ್ಳುವ ಮತ್ತು

ಬಳಸುವ ವಿಧಾನಗಳನ್ನು ಕಲಿಸಿಕೊಡಲಾಯಿತು. ತಲಾ ಅರ್ಧ ಗಂಟೆಯ ಐದು ನಾಟಕಗಳು ಸಿದ್ಧಗೊಂಡಿದೆ. ಶಿಬಿರದ ವಿದ್ಯಾರ್ಥಿಗಳೇ ಪಾತ್ರಧಾರಿಗಳಾಗಿದ್ದಾರೆ.ಸೀತಾರಾಮ ಕುಲಾಲ್ ರಚಿಸಿ, ಮೋಹನ್ ಶೇಣಿ ನಿರ್ದೇಶಿಸಿದ ‘ಮಣ್ಣಿನ ಮಗಳು ಅಬ್ಬಕ್ಕ’, ಏ.ಕೆ.ರಾಮನುಜಂ ರಚನೆಯ
ಮಹೇಶ್ ಆಚಾರಿ ಹೊನ್ನಾವರ ನಿರ್ದೇಶಿಸಿಸ
‘ಮುನ್ನೂರೊಂದು ರಾಮಾಯಣ’ ಜನಪದ ಮೂಲದಲ್ಲಿ ರೋಹಿತ್ ಎಸ್ ಬೈಕಾಡಿ ನಿರ್ದೇಶಿಸಿದ ‘ಕಾಮನ್ ಸೆನ್ಸ್’, ಹೇಮಂತ್ ಬೆಂಗಳೂರು ರಚಿಸಿ ನಿರ್ದೇಶಿಸಿದ ‘ಸಿಂಗಾರಯ್ಯನ ಬಂಗಾರದ ಕಥೆ’, ಚರಿತಾ ಶಾರದಾ ಸುಳ್ಯ ರಚಿಸಿ ನಿರ್ದೇಶಿಸಿದ ‘ಪರಿಸರ ಪರಿವಾರ’ ನಾಟಕಗಳು ಸಿದ್ಧಗೊಂಡಿದೆ.
ಏ.21ರಂದು ಅಪರಾಹ್ನ 2ರಿಂದ ನಡೆಯುವ

ಸಮಾರೋಪ ಸಮಾರಂಭದಲ್ಲಿ ಈ ನಾಟಕಗಳು ಪ್ರದರ್ಶನಗೊಳ್ಳಲಿದೆ.
ನಾಟಕ ತರಬೇತಿಯ ಜೊತೆಗೆ ಯೋಗ, ಆರ್ಟ್, ಕ್ರಾಪ್ಟ್, ಮುಖವರ್ಣಿಕೆ ತಯಾರಿಕೆ, ಮೂಲ ಜನಪದ ಹಾಡುಗಳ ಕಲಿಕೆ, ಪ್ರಥಮ ಚಿಕಿತ್ಸೆ, ಅಗ್ನಿಶಾಮಕ ಪ್ರಾತ್ಯಕ್ಷಿಕೆ, ಹಾಡು, ನೃತ್ಯ, ಸಹಭೋಜನ ಹೀಗೆ ಬಣ್ಣ ಶಿಬಿರ ಕಲರ್ಪುಲ್ ಆಗಿ ನಡೆದಿದೆ ಎನ್ನುತ್ತಾರೆ ರಂಗಮಯೂರಿಯ ನಿರ್ದೇಶಕ ಲೋಕೇಶ್ ಊರುಬೈಲು.
ಕಾಯರ್ತೋಡಿ ಶ್ರೀ ಮಹಾವಿಷ್ಣು ದೇವಸ್ಥಾನದ ಸಭಾಂಗಣದಲ್ಲಿ ಪ್ರಶಾಂತ ಸುಂದರ ವಾತಾವರಣದಲ್ಲಿ
ಪ್ರಕೃತಿಯೊಡನೆ ಬೆರೆತು ಹಾಡು,ನಗು ಖುಷಿಯೊಂದಿಗೆ ನಲಿದ ಸುಂದರ ಶಿಬಿರವಾಗಿತ್ತು ಬಣ್ಣ ಎನ್ನುತ್ತಾರೆ ಶಿಬಿರದಲ್ಲಿ ಭಾಗವಹಿಸಿದ ಮಕ್ಕಳು.



















