ಜೋಹಾನೆಸ್ಬರ್ಗ್: ಸಂಜು ಸ್ಯಾಮ್ಸನ್ ಮತ್ತು ತಿಲಕ್ ವರ್ಮಾ ಅವರ ಬ್ಯಾಟಿಂಗ್ ಅಬ್ಬರಕ್ಕೆ ಹೈರಾಣಾದ ಆತಿಥೇಯ ದಕ್ಷಿಣ ಆಫ್ರಿಕಾ
ತಂಡವನ್ನು 135 ರನ್ಗಳ ಭಾರೀ ಅಂತರದಿಂದ ಸೋಲಿಸಿ ಭಾರತದ ಯುವ ಪಡೆ 3–1ರಿಂದ ಟಿ20ಸರಣಿ ಜಯಿಸಿತು. ಮೊದಲು ಬ್ಯಾಟ್ ಮಾಡಿದ ಭಾರತ 20 ಓವರ್ಗಳಲ್ಲಿ ಒಂದು ವಿಕೆಟ್ ನಷ್ಟಕ್ಕೆ 283 ರನ್ ಗಳಿಸಿತು.ಗುರಿ ಬೆನ್ನಟ್ಟಿದ ದಕ್ಷಿಣ ಆಫ್ರಿಕಾ 18.2 ಓವರ್ಗಳಲ್ಲಿ
148 ರನ್ಗಳಿಗೆ ಆಲ್ ಔಟ್ ಆಯಿತು. ಭಾರತದ ಪರ ಅರ್ಷದೀಪ್ ಸಿಂಗ್ 3 ವಿಕೆಟ್ ಪಡೆದರು.ಮೊದಲು ಬ್ಯಾಟ್ ಮಾಡಿದ ಭಾರತದ ಪರ ಆರಂಭಿಕ ಬ್ಯಾಟರ್ ಸಂಜು ಸ್ಯಾಮ್ಸನ್ ಮತ್ತು ಮೂರನೇ ಕ್ರಮಾಂಕದಲ್ಲಿ ಕ್ರೀಸ್ಗೆ ಬಂದ ತಿಲಕ್ ವರ್ಮಾ ಸ್ಪೋಟಕ ಶತಕ ಸಿಡಿಸಿ ದಾಖಲೆ ಬರೆದರು.
ಸಂಜು 56 ಎಸೆತಗಳಲ್ಲಿ ಅಜೇಯ 109 ರನ್ ಸಿಡಿಸಿದರು. ಇದರಲ್ಲಿ 9 ಸಿಕ್ಸರ್, 6 ಬೌಂಡರಿ ಇದ್ದವು. ವರ್ಮಾ ಕೂಡ 47 ಎಸೆತಗಳಲ್ಲಿ ಅಜೇಯ 120 ರನ್ ಚಚ್ಚಿದರು. ಇದರಲ್ಲಿ 10 ಸಿಕ್ಸರ್, 9 ಬೌಂಡರಿ ಇದ್ದವು.
ಅಂತರರಾಷ್ಟ್ರೀಯ ಟಿ20 ಮಾದರಿಯ ಈ ಪಂದ್ಯದಲ್ಲಿ ಭಾರತ 283 ರನ್ ಕಲೆಹಾಕುವ ಮೂಲಕ ವಿದೇಶಿ ನೆಲದಲ್ಲಿ ಅತಿ ಹೆಚ್ಚು ಮೊತ್ತ ಕಲೆಹಾಕಿದ
ದಾಖಲೆ ಬರೆದಿದೆ. ಸಂಜು ಸ್ಯಾಮ್ಸನ್ ಒಂದು ವರ್ಷದಲ್ಲಿ 3 ಶತಕ ಸಿಡಿಸಿದ ವಿಶ್ವದ ಮೊದಲ ಬ್ಯಾಟರ್ ಎಂಬ ದಾಖಲೆ ಬರೆದರು. ಆಫ್ರಿಕಾ ವಿರುದ್ಧದ ಸರಣಿಯಲ್ಲಿ 2 ಶತಕ ಹಾಗೂ ಇತ್ತೀಚೆಗೆ ಬಾಂಗ್ಲಾ ದೇಶದ ವಿರುದ್ಧ ಒಂದು ಶತಕ ಸಿಡಿಸಿದ್ದರು.ಒಂದೇ ಸರಣಿಯಲ್ಲಿ ಎರಡು ಶತಕ ಸಿಡಿಸಿದ ದಾಖಲೆಗೂ ಸಂಜು ಭಾಜನರಾದರು. ಸಂಜು ಸ್ಯಾಮ್ಸನ್ ಮತ್ತು ತಿಲಕ್ ವರ್ಮಾ ಭರ್ಜರಿ ಶತಕ ಬಾರಿಸುವ ಮೂಲಕ ಒಂದೇ ಇನ್ನಿಂಗ್ಸ್ನಲ್ಲಿ ಇಬ್ಬರು ಬ್ಯಾಟ್ಸ್ಮನ್ಗಳು ಶತಕ ಸಿಡಿಸಿದ್ದು ಇದೇ ಮೊದಲು. ಇದು ಕೂಡ ದಾಖಲೆಯ ಪುಟಕ್ಕೆ ಸೇರ್ಪಡೆಯಾಯಿತು.
ಸಂಜು ಸ್ಯಾಮ್ಸನ್ ಹಾಗೂ ತಿಲಕ್ ವರ್ಮಾ ಅಜೇಯ ಶತಕ ಸಿಡಿಸಿದಲ್ಲದೆ, ಮುರಿಯದ ವಿಕೆಟ್ಗಳ 210 ರನ್ಗಳ ದಾಖಲೆಯ ಜೊತೆಯಾಟವನ್ನು ಆಡಿದರು. ಈ ಮೂಲಕ ಅತಿದೊಡ್ಡ ಜೊತೆಯಾಟ ನಿರ್ಮಿಸಿದ ದಾಖಲೆಯನ್ನೂ ಈ ಇಬ್ಬರು ಬ್ಯಾಟ್ಸ್ಮನ್ಗಳು ನಿರ್ಮಿಸಿದ್ದಾರೆ.