ಜೈಪುರ: ಐಪಿಎಲ್ ಪಂದ್ಯದಲ್ಲಿ ಲಖನೌ ಸೂಪರ್ ಜೈಂಟ್ಸ್ (ಎಲ್ಎಸ್ಜಿ) ತಂಡವು ಆತಿಥೇಯ ರಾಜಸ್ಥಾನ ರಾಯಲ್ಸ್ (ಆರ್ಆರ್) ವಿರುದ್ಧ ಕೇವಲ ಎರಡು ರನ್ ಅಂತರದ ರೋಚಕ ಜಯ ಸಾಧಿಸಿತು.
ಮೊದಲು ಬ್ಯಾಟಿಂಗ್ ಮಾಡಿದ ಜೈಂಟ್ಸ್ ನಿಗದಿತ 20 ಓವರ್ಗಳಲ್ಲಿ 5 ವಿಕೆಟ್ಗೆ 180 ರನ್ ಕಲೆಹಾಕಿತ್ತು. ಈ ಗುರಿ ಬೆನ್ನತ್ತಿದ ರಾಯಲ್ಸ್ 5 ವಿಕೆಟ್ಗಳನ್ನು ಕಳೆದುಕೊಂಡು
178 ರನ್ ಗಳಿಸಲಷ್ಟೇ ಶಕ್ತವಾಯಿತು. ಉತ್ತಮ ಆರಂಭದ ಬಳಿಕ ಸತತ ಎರಡನೇ ಪಂದ್ಯದಲ್ಲಿಯೂ ರಾಜಸ್ಥಾನ ರಾಯಲ್ಸ್ ಕೊನೆಯ ಹಂತದಲ್ಲಿ ಎಡವಿ ಪಂದ್ಯ ಕೈ ಚೆಲ್ಲಿತು.ಅಮೋಘ ಬ್ಯಾಟಿಂಗ್ ಮುಂದುವರಿಸಿರುವ ಯಶಸ್ವಿ ಜೈಸ್ವಾಲ್, ಟೂರ್ನಿಯಲ್ಲಿ ಆಡಿದ ಕಳೆದ ಐದು ಪಂದ್ಯಗಳಲ್ಲಿ ನಾಲ್ಕನೇ ಅರ್ಧಶತಕ ಬಾರಿಸಿದರು.52 ಎಸೆತಗಳನ್ನು ಎದುರಿಸಿದ ಅವರು, 4 ಸಿಕ್ಸ್ ಹಾಗೂ 5 ಬೌಂಡರಿ ಸಹಿತ 74 ರನ್ ಗಳಿಸಿದರು. 17 ಓವರ್ಗಳ ಅಂತ್ಯಕ್ಕೆ 2 ವಿಕೆಟ್ ಕಳೆದುಕೊಂಡು 166 ರನ್ ಗಳಿಸಿ ರಾಯಲ್ಸ್ ಸುಸ್ಥಿತಿಯಲ್ಲಿತ್ತು. ಗೆಲ್ಲಲು 18 ಎಸೆತಗಳಲ್ಲಿ 25 ರನ್ ಬೇಕಿತ್ತು. 8 ವಿಕೆಟ್ಗಳು ಕೈಯಲ್ಲಿದ್ದವು. ಆದರೆ, ಈ ಹಂತದಲ್ಲಿ ಪರಿಣಾಮಕಾರಿ ದಾಳಿ ಮಾಡಿದ ಆವೇಶ್ ಖಾನ್, ಜಯವನ್ನು ಕಸಿದುಕೊಂಡರು.
ತಮ್ಮ ನಾಲ್ಕು ಓವರ್ಗಳ ಕೋಟಾದ ಮೊದಲ ಎರಡು ಓವರ್ಗಳಲ್ಲಿ ವಿಕೆಟ್ ಇಲ್ಲದೆ 26 ರನ್ ಚಚ್ಚಿಸಿಕೊಂಡಿದ್ದ ಅವರು, ನಂತರದ ಎರಡು ಓವರ್ಗಳಲ್ಲಿ 3 ವಿಕೆಟ್ ಸಹಿತ ಕೇವಲ 11 ರನ್ ಬಿಟ್ಟುಕೊಟ್ಟರು.18ನೇ ಓವರ್ನ ಮೊದಲ ಎಸೆತದಲ್ಲೇ ಜೈಸ್ವಾಲ್ ಅವರನ್ನು ಪೆವಿಲಿಯನ್ ಅಟ್ಟಿದರು. ಜೈಸ್ವಾಲ್ ಪತನವಾದ ಬಳಿಕ ರಾಯಲ್ಸ್ ಮುಗ್ಗರಿಸಿತು. ಕೊನೆಯ ಓವರ್ನಲ್ಲಿ 9 ರನ್ ಅಗತ್ಯ ಇತ್ತು. ಆದರೆ ಕೇವಲ 6 ರನ್ ನೀಡಿ ಒಂದು ವಿಕೆಟ್ ಪಡೆದ ಆವೇಶ್ ಖಾನ್ ಗೆಲುವು ಕಸಿದುಕೊಂಡರು.
ಮೊದಲ ವಿಕೆಟ್ಗೆ ಜೈಸ್ವಾಲ್ ಹಾಗೂ ಐಪಿಎಲ್ ಪಾದಾರ್ಪಣೆ ಮಾಡಿದ 14 ವರ್ಷದ ಆಟಗಾರ ವೈಭವ್ ಸೂರ್ಯವಂಶಿ ಮೊದಲ ವಿಕೆಟ್ಗೆ 8.1 ಓವರ್ಗಳಲ್ಲಿ 85 ರನ್ ಗಳಿಸಿ ಉತ್ತಮ ಆರಂಭ ಒದಗಿಸಿದರು.
ಐಪಿಎಲ್ನ ಅತ್ಯಂತ ಕಿರಿಯ ಆಟಗಾರ ಎಂಬ ಖ್ಯಾತಿಯೊಂದಿಗೆ ಮೈದಾನಕ್ಕಿಳಿದ ವೈಭವ್, ತಾವೆದುರಿಸಿದ ಮೊದಲ ಎಸೆತವನ್ನೇ ಸಿಕ್ಸರ್ಗೆ ಅಟ್ಟಿದರು.ಒಟ್ಟು 20 ಎಸೆತಗಳನ್ನು ಎದುರಿಸಿದ ಅವರು 2 ಬೌಂಡರಿ ಹಾಗೂ 3 ಸಿಕ್ಸರ್ ಸಹಿತ 34 ರನ್ ಕಲೆಹಾಕಿದರು.ಮೊದಲು ಬ್ಯಾಟಿಂಗ್ ಮಾಡಿದ ಜೈಂಟ್ಸ್ 19 ಓವರ್ಗಳ ಅಂತ್ಯಕ್ಕೆ 5 ವಿಕೆಟ್ ಕಳೆದುಕೊಂಡು 163 ರನ್ ಗಳಿಸಿತ್ತು. ಸಂದೀಪ್ ಶರ್ಮಾ ಎಸೆದ ಕೊನೇ ಓವರ್ನ ಅಂತಿಮ 5 ಎಸೆತಗಳನ್ನು ಎದುರಿಸಿದ ಅಬ್ದುಲ್ ಸಮದ್ ನಾಲ್ಕು ಸಿಕ್ಸರ್ ಸಹಿತ 26 ರನ್ ಚಚ್ಚಿದರು. ಈ ಓವರ್ನಲ್ಲಿ ಒಟ್ಟು 27 ರನ್ ಬಂದವು. ಹೀಗಾಗಿ, ಜೈಂಟ್ಸ್ ಮೊತ್ತ 180ಕ್ಕೇರಿತು.