ಸುಳ್ಯ:ಕೆವಿಜಿ ದಂತ ಮಹಾವಿದ್ಯಾಲಯದಲ್ಲಿ ಅತ್ಯಾಧುನಿಕ ಸೌಲಭ್ಯವನ್ನು ಒಳಗೊಂಡ ಇಂಪ್ಲಾಂಟ್ ಡಿಪಾರ್ಟ್ಮೆಂಟ್ ಪ್ರಾರಂಭವಾಗಿದ್ದು ಮುಂದೆ ಜನರಿಗೆ ಅತಿ ಕಡಿಮೆ ಖರ್ಚಿನಲ್ಲಿ ಅತ್ಯಾಧುನಿಕ ದಂತ ಚಿಕಿತ್ಸೆ ನೀಡಲು ಸಾಧ್ಯವಾಗಲಿದೆ ಎಂದು ಅಕಾಡೆಮಿ ಆಫ್ ಲಿಬರಲ್ ಎಜ್ಯುಕೇಷನ್ ಕಮಿಟಿ ಬಿ ಇದರ ನಿರ್ದೇಶಕರು ಹಾಗೂ ಕೆವಿಜಿ ದಂತ ಮಹಾವಿದ್ಯಾಲಯದ ಕಾರ್ಯನಿರ್ವಾಹಕ ನಿರ್ದೇಶಕ ಮೌರ್ಯ ಆರ್.ಕುರುಂಜಿ ಹೇಳಿದ್ದಾರೆ. ಕೆವಿಜಿ ದಂತ ಮಹಾ ವಿದ್ಯಾಲಯದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಗ್ರಾಮೀಣ ಪ್ರದೇಶದಲ್ಲಿ
ಅತ್ಯುತ್ತಮವಾದ ವೃತ್ತಿಪರ ದಂತ ಕಾಲೇಜು ಇರಬೇಕು ಮತ್ತು ಈ ವಿದ್ಯಾಲಯವು ಭಾರತದ ಇತರ ಎಲ್ಲಾ ವಿದ್ಯಾಲಯಗಳಿಗೆ ಮಾದರಿಯಾಗಿರಬೇಕು ಎಂಬುದು ಡಾ.ಕುರುಂಜಿ ವೆಂಕಟ್ರಮಣ ಗೌಡರ ಕನಸಾಗಿತ್ತು. ಕೆವಿಜಿ ದಂತ ಮಹಾವಿದ್ಯಾಲಯವು ಭಾರತದಲ್ಲಿ ಅತ್ಯುತ್ತಮವಾದ ದಂತ ಮಹಾ ವಿದ್ಯಾಲಯಗಳಲ್ಲಿ ಒಂದು ಎಂದು ಪರಿಗಣಿತವಾಗಿದೆ ಎಂದು ಹೇಳಿದರು. ಕಾಲೇಜಿನಲ್ಲಿ ಲೇಸರ್ ಚಿಕಿತ್ಸೆ ಎಲೆಕ್ಟೋ ಸರ್ಜಿಕಲ್ ಚಿಕಿತ್ಸೆ ಮೈಕ್ರೋ ಸರ್ಜರಿ ಮೊದಲಾದವುಗಳು ಈಗಾಗಲೇ ಲಭ್ಯವಿರುತ್ತದೆ.
ಪ್ರಸ್ತುತ ಇಲ್ಲಿ ಅತ್ಯಾಧುನಿಕ ಸೌಲಭ್ಯವನ್ನು ಒಳಗೊಂಡ ಇಂಪ್ಲಾಂಟ್ ಡಿಪಾರ್ಟ್ಮೆಂಟ್ ಪ್ರಾರಂಭಿಸಲಾಗಿದೆ ಎಂದು ಹೇಳಿದರು. ವಿವಿಧ ಕಾರಣಗಳಿಂದ ಹಲ್ಲುಗಳನ್ನು ಕಳೆದುಕೊಳ್ಳಬೇಕಾಗಿ ಬಂದಲ್ಲಿ ವಿವಿಧ ಆಯಾಮಗಳಿಂದ ಕೃತಕದಂತ ಚಿಕಿತ್ಸೆಯನ್ನು ನೀಡಬಹುದು. ಇವುಗಳಲ್ಲಿ ತೆಗೆದಿರಿಸಬಹುದಾದ ಹಲ್ಲಿನ ಸೆಟ್ಟು,ಪಕ್ಕದ ಹಲ್ಲುಗಳ ಆಧಾರದಲ್ಲಿ ನಿಲ್ಲಿಸುವಂತ ಫಿಕ್ಸೆಡ್ ಹಲ್ಲಿನ ಸೆಟ್ಗಳು ಮತ್ತು ಇಂಪ್ಲಾಂಟ್ ಎಂಬ ಅತ್ಯಾಧುನಿಕ ಚಿಕಿತ್ಸಾ ವಿಧಾನ ಪ್ರಮುಖವಾಗಿರುತ್ತವೆ. ವಿವಿಧ ವಯೋಮಾನದವರು ವಿವಿಧ ಕಾರಣಗಳಿಂದ ಹಲ್ಲುಗಳು ಕಳೆದುಕೊಳ್ಳಬಹುದು.ಇಂತಹ ಸಂದರ್ಭದಲ್ಲಿ ಹಲ್ಲುಗಳನ್ನು ಕಳೆದುಕೊಂಡ ವ್ಯಕ್ತಿಯು ತನಗೆ ಸುಂದರವಾದ ಮತ್ತು

ಆರೋಗ್ಯಪೂರ್ಣವಾದ ದಂತ ಪಂಕ್ತಿಗಳು ಇರಬೇಕೆಂಬ ಬಯಸುವುದು ಸತ್ಯ.ಈ ನಿಟ್ಟಿನಲ್ಲಿ ಇಂಪ್ಲಾಂಟ್ ಥೆರಪಿಯು ಉತ್ತಮವಾದ ಆಯ್ಕೆಯಾಗಿದೆ. ಈ ವಿಧಾನದಲ್ಲಿ ದವಡೆಯ ಎಲುಬಿನೊಳಗೆ ಡೆಂಟಲ್ ಇಂಪ್ಲಾಂಟ್ ಎಂಬ ಸಾಧನವನ್ನು ಅಳವಡಿಸಿ ಕೃತಕದಂತಗಳನ್ನು ನೀಡಲಾಗುತ್ತದೆ. ಒಂದೆರಡು ಹಲ್ಲುಗಳನ್ನು ಕಳೆದುಕೊಂಡವರಿಂದ ಹಿಡಿದು ಎಲ್ಲಾ ಹಲ್ಲುಗಳನ್ನು ಕಳೆದುಕೊಂಡವರಿಗೂ ಈ ಚಿಕಿತ್ಸೆ ವರದಾನವಾಗಿರುತ್ತದೆ.
ಇಂಪ್ಲಾಂಟ್ ಚಿಕಿತ್ಸೆಗಾಗಿ ಎಲುಬುಗಳ ಸಾಂದ್ರತೆ ಮತ್ತು ಲಭ್ಯತೆಗಳನ್ನು ಪರಿಗಣಿಸಲು ಸಿಬಿಸಿಟಿ (CBST) ಎಂಬ ಅತ್ಯಾಧುನಿಕ 3ಡಿ ಕ್ಷ-ಕಿರಣ ವ್ಯವಸ್ಥೆಯು ಇಲ್ಲಿದೆ. ದಂತಚಿಕಿತ್ಸಾ ಪದ್ಧತಿಯು ಇಂಪ್ಲಾಂಟ್ ಯುಗವಾಗಿರುತ್ತದೆ. ಹಾಗಾಗಿ ತಮ್ಮ ವಿದ್ಯಾರ್ಥಿ ಜೀವನದಲ್ಲಿ ಇಂಪ್ಲಾಂಟ್ ಚಿಕಿತ್ಸೆಯನ್ನು ಕಲಿಯುವ ಅವಕಾಶವಿಲ್ಲದಿದ್ದ ಯುವ ದಂತ ವೈದ್ಯರುಗಳಿಗೆ ತರಬೇತಿ ಪಡೆಯುವ ಅವಕಾಶವಿದೆ.ಈಗ ಲೋಕಾರ್ಪಣೆಗೊಂಡ ಇಂಪ್ಲಾಂಟ್ ಕ್ಲಿನಿಕ್ ಎಂಬುದು ಅತ್ಯಾಧುನಿಕ ಸೌಲಭ್ಯವನ್ನು ಒಳಗೊಂಡ ಅತ್ಯಂತ ಪರಿಣತಿ ಮತ್ತು ಅನುಭವವನ್ನು ಒಳಗೊಂಡಿರುವ ಸಿಬ್ಬಂದಿಗಳು ಚಿಕಿತ್ಸೆ ನೀಡುವ ಚಿಕಿತ್ಸಾಲಯವಾಗಿರುತ್ತದೆ.

ಈ ಕ್ಲಿನಿಕ್ ನಲ್ಲಿ ಉತ್ತಮವಾದ ಇಂಪ್ಲಾಂಟ್ ಸಿಸ್ಟಮ್ ಗಳು ಅತಿ ಕಡಿಮೆ ದರದಲ್ಲಿ ಲಭ್ಯವಿರುತ್ತದೆ. ಸಂಪೂರ್ಣ ಹವಾನಿಯಂತ್ರಿತ ಕ್ಲಿನಿಕ್ ಮತ್ತು ಚಿಕಿತ್ಸಾಪೂರ್ವ ತರಬೇತಿಗಾಗಿ ಮತ್ತು ಉಪನ್ಯಾಸಕ್ಕಾಗಿ ಅತ್ಯುತ್ತಮವಾದ ಶ್ರವಣ ದೃಶ್ಯ ಸೌಲಭ್ಯವಿರುವ ಸಭಾಂಗಣವಿದೆ.ಬೆಂಗಳೂರು ಮಂಗಳೂರಿನಂತ ನಗರ ಪ್ರದೇಶದಲ್ಲಿ ದೊರಕುವ ಎಲ್ಲಾ ಸೌಲಭ್ಯಗಳು ಕಡಿಮೆ ದರದಲ್ಲಿ ಇಲ್ಲಿ ಲಭ್ಯವಿರುತ್ತದೆ. ಉತ್ತಮ ಚಿಕಿತ್ಸೆ ಮತ್ತು ಚಿಕಿತ್ಸಾನಂತರದ ಸೇವೆ ಮತ್ತು ನುರಿತ ತಜ್ಞರ ಸಲಹೆಗಳು ಲಭ್ಯವಿರುತ್ತದೆ
ಇಂಪ್ಲಾಂಟ್ ಡಿಪಾರ್ಟೆಮೆಂಟ್ ಈಗಾಗಲೇ ದಂತ ವೈದ್ಯರಾಗಿರುವವರಿಗೆ ಇಂಪ್ಲಾಂಟ್ ಕೋರ್ಸ್ ಅನ್ನು ಕಲಿಸುತ್ತಿವೆ.ಜೊತೆಗೆ ಸುಳ್ಯದಲ್ಲಿ ಹೆಲ್ತ್ ಟೂರಿಸಂಗೆ ಸಹಾಯಕವಾಗುವಂತೆ ಬೆಳೆಸುವ ಉದ್ದೇಶ ಇದೆ ಎಂದು ಮೌರ್ಯ ಆರ್ ಕುರುಂಜಿ ವಿವರಿಸಿದರು.
ಸುದ್ದಿಗೋಷ್ಠಿಯಲ್ಲಿ ಅಕಾಡೆಮಿ ಆಫ್ ಲಿಬಲರ್ ಎಜ್ಯುಕೇಷನ್ನ ಕಮಿಟಿ ಬಿ ಇದರ ನಿರ್ದೇಶಕಿ ಡಾ.ಅಭಿಜ್ಞಾ, ಕಾಲೇಜಿನ ಪ್ರಾಂಶುಪಾಲೆ ಡಾ.ಮೋಕ್ಷಾ ನಾಯಕ್, ವಿಭಾಗ ಮುಖ್ಯಸ್ಥರಾದ ಡಾ.ಎಂ.ಎಂ.ದಯಾಕರ್, ಕಾಲೇಜಿನ ಆಡಳಿತಾಧಿಕಾರಿ ಮಾಧವ ಬಿ.ಟಿ., ಡಾ.ಮನೋಜ್ ಅಡ್ಡಂತ್ತಡ್ಕ, ಡಾ.ರೇವಂತ್, ಕಮಲಾಕ್ಷ ನಂಗಾರು ಉಪಸ್ಥಿತರಿದ್ದರು. ಉಪಸ್ಥಿತರಿದ್ದರು.















