*ಗಣೇಶ್ ಮಾವಂಜಿ.
ಪಟ್ಟಣಕ್ಕೆ ಪ್ರಧಾನಿಯೋ, ಮುಖ್ಯಮಂತ್ರಿಯೋ ಅಥವಾ ಇನ್ಯಾರೋ ಗಣ್ಯರು ಭೇಟಿ ನೀಡುವ ವೇಳೆ ಅಲ್ಲಾಗುವ ಬದಲಾವಣೆ ನಗು ತರಿಸುತ್ತದೆ. ಅಲ್ಲಿನ ರಸ್ತೆಯ ಹೊಂಡ ಗುಂಡಿಗಳು ಮುಚ್ಚಲ್ಪಡುತ್ತವೆ. ಭೇಟಿ ನೀಡುವ ಸರಕಾರಿ ಕಟ್ಟಡಗಳು ಬಣ್ಣ ಬಳಿಸಿಕೊಂಡು ನವವಧುವಿನಂತೆ ಸಿಂಗರಿಸಿಕೊಳ್ಳುತ್ತವೆ. ಬಿರುಕು ಬಿಟ್ಟ ಗೋಡೆಗಳು ಕಾಣಿಸದಂತೆ ಅಲ್ಲಿ ಕಟೌಟ್ ಅಥವಾ ಕರ್ಟನ್ ಜೋತು ಬೀಳುವಂತೆ ಎಚ್ಚರ ವಹಿಸಲಾಗುತ್ತದೆ.ಅವರು ಬಂದು ಹೋದ ಬಳಿಕ ಯಥಾವತ್ತಾಗಿ ಹಿಂದಿನ ದಿನಚರಿಯೇ ಮುಂದುವರಿಯುತ್ತದೆ. ಆ ನಂತರದಲ್ಲಿ ತೇಪೆ ಹಾಕಿದ ರಸ್ತೆಯ ಗುಂಡಿಗಳು ಹೊಂಡವಾಗಿ ಅದರಲ್ಲಿ ವಾಹನ ಸವಾರರು ಬಿದ್ದು
ಆಸ್ಪತ್ರೆ ಸೇರಿದರೂ ಯಾರೂ ಕೂಡಾ ಕ್ಯಾರೇ ಮಾಡುವುದಿಲ್ಲ.
ಇದು ತಲೆಹೋಗುವಂತಹ ತಪ್ಪಲ್ಲ. ಏಕೆಂದರೆ ನಾವೂ ಕೂಡಾ ಮನೆಗೆ ನೆಂಟರು ಬಂದಾಗ ಮಾಡುವುದು ಅದನ್ನೇ. ಮನೆಗೆ ಅತಿಥಿಗಳು ಬಂದಾಗ ಅಲ್ಲೊಂದು ಬದಲಾವಣೆಯ ಕ್ರಾಂತಿಯೇ ಆಗಿಬಿಡುತ್ತದೆ.ಹರಡಿ ಹೊಂಚಿ ಹೋದಂತಿದ್ದ ವಸ್ತುಗಳೆಲ್ಲಾ ಒಪ್ಪ-ಓರಣವಾಗಿ ಜೋಡಣೆಗೊಳ್ಳುತ್ತವೆ.
ಹಿಂದಿನ ಕಾಲದಲ್ಲಾದರೆ ಮನೆಗೆ ನೆಂಟರು ಬಂದಾಗ ಗೊತ್ತೇ ಆಗುತ್ತಿರಲಿಲ್ಲ. ನಾಯಿ ಬೊಗಳಿ ಯಾರು ಬಂದರೆಂದು ಹೊರಬಂದು ನೋಡಿದಾಗ ಮಾತ್ರ ನೆಂಟರ ದರ್ಶನ ಆಗುತ್ತಿತ್ತು. ಆಗ ಮನೆಯ ನಿಜವಾದ ಪರಿಸ್ಥಿತಿ ಹಾಗೂ ಮನೆಯವರ ನಿಜ ಬಣ್ಣ ಬಯಲಾಗುತ್ತಿತ್ತು. ಏಕೆಂದರೆ ಸಡನ್ನಾಗಿ ಮನೆಗೆ ಎಂಟ್ರಿ ಕೊಟ್ಟಾಗ ಬದಲಾವಣೆಗೆ ಅವಕಾಶ ಇರುವುದೇ ಇಲ್ಲ. ಇದ್ದದ್ದು ಇದ್ದ ಹಾಗೆಯೇ ಇರುತ್ತದೆಯೇ ವಿನಃ ಹೆಚ್ಚಿನ ಮಾರ್ಪಾಡಿಗೆ ಅವಕಾಶವೇ ದೊರೆಯುವುದಿಲ್ಲ.
ಈಗ ಹಾಗಲ್ಲ. ನೆಂಟರು ಮನೆಗೆ ಬರುವ ಮೊದಲೇ ಫೋನಿಗೆ ಸಂದೇಶ ರವಾನೆ ಆಗಿಬಿಡುತ್ತದೆ. ಇಷ್ಟು ಹೊತ್ತಿಗೆ ಬಂದು, ಇಷ್ಟು ಹೊತ್ತಿಗೆ ಹಿಂತಿರುಗುತ್ತೇವೆ ಎಂಬುದನ್ನು ಮೊದಲೇ ತಿಳಿಸಿಬಿಡುತ್ತಾರೆ. ಏಕೆಂದರೆ ನೀವು ಮಾಡಿ ಬಡಿಸುವುದನ್ನು ಅದೇ ಹೊತ್ತಿಗೆ ಮಾಡಿ ಇಟ್ಟರೆ ಹೊಟ್ಟೆಗಿಳಿಸಿ ಗಾಳಿ ಆಡಿಸಿಕೊಂಡು ಹೋಗಿ ಬಿಡಬಹುದು ಎಂಬುದು ಮನೆಗೆ ಬರುವ ನೆಂಟರ ಮುಂದಾಲೋಚನೆ ಆಗಿರುತ್ತದೆ.ಹಾಗೆಂದು ಅವರು ಅದನ್ನೆಲ್ಲಾ ಬಾಯಿ ಬಿಟ್ಟು ಹೇಳುವುದಿಲ್ಲ. ಅದನ್ನು ಮನೆಯವರೇ ಅರ್ಥ ಮಾಡಿಕೊಳ್ಳಬೇಕಾಗುತ್ತದೆ.
ಪಟ್ಟಣಕ್ಕೆ ಮಂತ್ರಿ ಮಹೋದಯರು ಬರುವ ಸೂಚನೆ ಸಿಕ್ಕಿದಾಗ ಪಟ್ಟಣದ ಹೊರನೋಟವೇ ಬದಲಾಗುವ ರೀತಿಯಲ್ಲೇ ಮನೆಗೆ ನೆಂಟ್ರು ಬರುವ ಸೂಚನೆ ಸಿಕ್ಕಿದಾಗಲೂ ಮನೆ ಬದಲಾಗುತ್ತದೆ. ಅದು ಹೇಗಂತಿರಾ? ಅಲ್ಲಿಯವರೆಗೆ ಮನೆಯ ಮೂಲೆಮೂಲೆಯಲ್ಲಿ ಜೇಡ ಬಲೆ ಕಟ್ಟಿ ತನ್ನ ಬೇಳೆ ಬೇಯಿಸಿಕೊಂಡಿರುತ್ತದೆ. ಆದರೆ ಮನೆಗೆ ನೆಂಟರು ಬರುತ್ತಾರೆಂದಾದರೆ ಅವೆಲ್ಲವೂ ಮನೆಯೊಡತಿಯ ಹಿಡಿಸೂಡಿಯ ಒಂದೇ ಏಟಿಗೆ ಸರ್ವನಾಶ ಆಗಿಬಿಡುತ್ತವೆ. ಅಲ್ಲಿಯವರೆಗೆ ಸೋಫಾ ಸೆಟ್ಟಿನ ಹೊದಿಕೆ ಗಬ್ಬು ನಾರುವಂತಾಗಿದ್ದರೂ ನೆಂಟರು ಮನೆಗೆ ಬರುತ್ತಾರೆ ಎಂದಾದರೆ ಒಗೆದು ಶುಭ್ರಗೊಂಡು ಮರು ಹೊದಿಸಿಕೊಳ್ಳುತ್ತದೆ. ಟಿವಿ ಸ್ಟ್ಯಾಂಡ್, ಇನ್ವರ್ಟರ್, ಫ್ರಿಜ್ ನ ಮೇಲ್ಮೈ ಹಾಗೂ ಮನೆಯ ಪೀಠೋಪಕರಣಗಳು ಚಂಡಿ ಬಟ್ಟೆಯಿಂದ ಒರೆಸಿಕೊಂಡು ಪುನೀತವಾಗುವುದು ಕೂಡಾ ಇದೇ ಹಂತದಲ್ಲಿ.
ಅಷ್ಟೇ ಅಲ್ಲ. ಯಾವಾಗಲೂ ಮನೆಯ ಮೂಲೆಮೂಲೆಗೆ, ಸಂದಿಗೊಂದಿಗೆ ಇಣುಕಿ ನೋಡದ ನೆಲ ಒರೆಸುವ ಮಾರ್ಫ್ ಕೂಡಾ ನೆಂಟ್ರು ಬರುತ್ತಾರೆ ಎಂದಾದರೆ ಮನೆಯ ಅಂಚಂಚಿಗೂ ಭೇಟಿ ನೀಡುವ ಸಾಹಸಕ್ಕೆ ಕೈ ಹಾಕುತ್ತದೆ. ಈಗಿನ ಧಾವಂತದ ಬದುಕಿನಲ್ಲಿ ನೆಂಟರು ಬಂದು ರಾತ್ರಿ ಕಳೆಯುವ ಸನ್ನಿವೇಶಗಳೇ ಇಲ್ಲ. ಒಂದು ವೇಳೆ ನೆಂಟರು ಒಂದೆರಡು ದಿನ ಮನೆಯಲ್ಲಿ ತಂಗುತ್ತಾರೆ ಎಂದಾದರೆ ಬೆಡ್ ಶೀಟ್ ಗಳೂ ಕೂಡಾ ಪುಣ್ಯ ಸ್ನಾನ ಮಾಡಿಸಿಕೊಳ್ಳುತ್ತವೆ. ಅವುಗಳು ತಿಂಗಳುಗಳ ಹಿಂದೆ ಗಡದ್ದಾಗಿ ಸ್ನಾನ ಮುಗಿಸಿ ಕಪಾಟಿನಲ್ಲಿ ಭದ್ರವಾಗಿ ಮಲಗಿ ಗೊರಕೆ ಹೊಡೆಯುತ್ತಿದ್ದರೂ ಅವುಗಳನ್ನೆಲ್ಲಾ ಮತ್ತೆ ಎಳೆದುಹಾಕಿ ಸರ್ಫ್ ನ ನೊರೆಯಲ್ಲಿ ಅದ್ದಿ ಮರುಸ್ನಾನ ಮಾಡಿಸಲಾಗುತ್ತದೆ.
ಮನೆ ಹಾಗೂ ಮನೆಯ ವಸ್ತುಗಳಿಗೆ ಬ್ರಹ್ಮ ಕಲಶ ಆದರೆ ಸಾಕೇ? ಮನೆಗೆ ಬಂದ ನೆಂಟರ ಜೊತೆ ಹರಟುವಾಗ ಮನೆಮಂದಿಯೂ ಚಂದ ಕಾಣಿಸದಿದ್ದರೆ ಹೇಗೆ? ಅದಕ್ಕಾಗಿ ನೆಂಟರು ಬರುವ ಸೂಚನೆ ದೊರೆತ ಕೂಡಲೇ ಅಲಂಕಾರಕ್ಕೆ ತೊಡಗಲಾಗುತ್ತದೆ. ಚಾಹುಡಿ ಸಕ್ಕರೆಯಂತೆ ಕಾಣಿಸುವ ತಲೆಗೂದಲನ್ನು ಕರಿಗಪ್ಪುಗೊಳಿಸುವ ಕಾಯಕಕ್ಕೆ ಮುಂದಾಗುತ್ತಾರೆ. ಎಂದಿನ ಹಾಗೆ ನೀರುದೋಸೆಯಂತಾದ ಬನಿಯನ್ ಧರಿಸುವ ಅಥವಾ ಬಣ್ಣ ಮಾಸಿಹೋಗಿ ಮಸಿ ಬಟ್ಟೆಯಂತಾಗಿರುವ ನೈಟಿ, ಸೀರೆಗಳನ್ನು ಧರಿಸುವ ಬದಲಾಗಿ ನೆಂಟರು ಬಂದಾಗ ಯಾವ ದಿರಿಸನ್ನು ಧರಿಸುವುದು ಎಂಬ ಲೆಕ್ಕಾಚಾರ ಪ್ರಾರಂಭಗೊಳ್ಳುತ್ತದೆ. ಮನೆ ಮಕ್ಕಳ ಖುಷಿಗಂತೂ ಪಾರವೇ ಇರುವುದಿಲ್ಲ. ನೆಂಟರ ಜೊತೆ ಮಕ್ಕಳೂ ಬರುತ್ತಾರೆ ಎಂದಾದರೆ ಯಾವಾಗಲೋ ಮೂಲೆ ಸೇರಿದ ಬ್ಯಾಟ್, ಬಾಲ್, ವಿಕೆಟ್ ಗಳು ಅಂಗಳ ಸೇರುತ್ತವೆ. ಯಾವಾಗಲೂ ಬೋಳು ಬೋಳಾಗಿಯೇ ಇರುವ ಚಿಕಣಿ ಮಕ್ಕಳ ಸೊಂಟದಲ್ಲಿ ಚಡ್ಡಿ ಕಾಣಿಸುವುದು ಕೂಡಾ ನೆಂಟರು ಅಥವಾ ಮನೆಗೆ ಇನ್ಯಾರೋ ಬರುತ್ತಾರೆ ಎಂದಾದರೆ ಮಾತ್ರ. ಏಕೆಂದರೆ ಬರುವ ಅತಿಥಿಗಳು ಬೋಳಾಗಿ ಕಾಣಿಸುವ ಮಕ್ಕಳನ್ನು ನೋಡಿ ‘ಶೇಮ್ ಶೇಮ್’ ಎಂದು ತಮಾಷೆ ಮಾಡಿದರೆ ‘ಶೇಮ್’ ಆಗುವುದು ಮನೆಯ ಹಿರಿಯರಿಗೆ ಎಂಬುದು ಪಕ್ಕಾ ಆಗಿರುತ್ತದೆ.
ಇನ್ನು ಬಂದ ನೆಂಟರನ್ನು ಸತ್ಕರಿಸುವ ಕ್ರಮದಲ್ಲೂ ಅಮೂಲಾಗ್ರ ಬದಲಾವಣೆಗಳಾಗಿವೆ. ಆಗಿನ ಕಾಲದಲ್ಲಿ ಮನೆಯ ಹೆಣ್ಮಕ್ಕಳು ಕಡೆಯುವ ಕಲ್ಲಿನಲ್ಲೇ ಮಸಾಲೆ ಅರೆಯಬೇಕಾಗಿತ್ತು. ಸಿಹಿಗಾಗಿ ಪಾಯಸ ಮಾಡುವುದಿದ್ದರೆ ಅಥವಾ ನೆಂಟರಿಗಾಗಿ ಬೇರೇನೋ ತಿಂಡಿ ಮಾಡುವುದಿದ್ದರೂ ಕಡೆಯುವ ಕಲ್ಲಿನ ಸ್ನೇಹವಲ್ಲದೆ ಬೇರೇನೂ ಪರ್ಯಾಯ ವ್ಯವಸ್ಥೆ ಇರುತ್ತಿರಲಿಲ್ಲ.
ಹಿಂದಿನ ಕಾಲದಲ್ಲಿ ನೆಂಟರ ಸಂಖ್ಯೆ ಎಷ್ಟಿದ್ದರೂ ಆಹುತಿಯಾಗುತ್ತಿದ್ದುದ್ದು ಗೂಡಿನಲ್ಲಿದ್ದ ಒಂದು ಕೋಳಿ ಮಾತ್ರ. ಮನೆಯೊಡತಿ ಅದೇ ಸಿಂಗಲ್ ಕೋಳಿಯಲ್ಲೇ ತುಂಡುಗಳನ್ನು ಎಲ್ಲರಿಗೂ ಸಮಾನವಾಗಿ ಬಡಿಸಿ ಭೇಷ್ ಅನಿಸಿಕೊಳ್ಳಬೇಕಾಗಿತ್ತು. ದುರ್ದೈವವೆಂದರೆ ತುಂಡು ಬಡಿಸುವ ವೇಳೆ, ಬಂದ ನೆಂಟ ಮನೆಯ ಅಟ್ಟ ನೋಡುತ್ತಿದ್ದರೆ ಅಥವಾ ಚಿಕನ್ ಪೀಸ್ ಗಳು ಹೆಚ್ಚು ಬಡಿಸಲಿ ಎಂಬ ಕಾರಣಕ್ಕೋ ಬೇರೆಲ್ಲೋ ನೋಡುತ್ತಿದ್ದರೆ ಬಡಿಸುವಾಕೆ ಎರಡೆರಡು ಸಲ ಬಡಿಸಿಯೂ ಇನ್ನುಳಿದವರಿಗೆ ಬಡಿಸುವಾಗ ಸರಿಸಮಾನವಾಗಿ ತುಂಡುಗಳನ್ನು ಬಡಿಸಿ ಸೈ ಎನಿಸಿಕೊಳ್ಳಬೇಕಾಗಿತ್ತು.
ಈಗ ಹಾಗಲ್ಲ. ನೆಂಟರ ಸಂಖ್ಯೆ ನೋಡಿ ಕೋಳಿ ಅಂಗಡಿಗೆ ಫೋನ್ ಮಾಡಿ ಮಾಂಸ ತರಿಸಿಕೊಂಡರೆ ಆಯ್ತು. ಕೋಳಿಗೆ ಮಸಾಲೆ ರುಬ್ಬಲು ರುಂಯ್ಯನೆ ತಿರುಗುವ ಮಿಕ್ಸಿ ಬಂದು ಬಿಟ್ಟಿದೆ. ಹಿಂದಿನಂತೆ ದಿನಗಳ ಲೆಕ್ಕದಲ್ಲಿ ಜಂಡಾ ಹೂಡುವ ನೆಂಟರು ಯಾರೂ ಇಲ್ಲದಿದ್ದ ಕಾರಣ ಬಂದ ನೆಂಟರನ್ನು ಒಂದು ಹೊತ್ತಿನ ಊಟದಲ್ಲೋ, ಚಾ ತಿಂಡಿಯಲ್ಲೋ ಸುಧಾರಿಸಿ ಕಳುಹಿಸಿದರೆ ಆಯ್ತು.
ಆದರೆ ನೆಂಟರ ಉಪಚಾರದ ಲಿಸ್ಟಿಗೆ ಇದೀಗ ಹೊಸತೊಂದು ಸೇರ್ಪಡೆಯಾಗಿದೆ. ಅದು ಯಾವುದೆಂದರೆ ಅವರನ್ನು ಬೀಳ್ಕೊಡುವ ಹಂತದಲ್ಲಿ ಅವರ ಜೊತೆ ನಿಂತು ಫೊಟೋ ತೆಗೆಸಿಕೊಳ್ಳುವುದು. ಈಗೀಗ ಈ ಹೊಸ ಉಪಚಾರ ಎಷ್ಟೊಂದು ಅನಿವಾರ್ಯ ಎಂದರೆ ಬಂದ ನೆಂಟರಿಗೆ ಕೋಳಿ ಗಸಿ ಮಾಡಿ, ರೌಂಡ್ರೌಂಡಾಗಿ ರೊಟ್ಟಿ ಹೊಯ್ದು ಬಡಿಸುವುದು ಮಾತ್ರವಲ್ಲದೆ ಅವರು ಹೊರಟು ನಿಂತಾಗ ಉಟ್ಟ ಬಟ್ಟೆಯಲ್ಲೇ ಒಟ್ಟಿಗೆ ನಿಂತು ಸುಸ್ತಾಗಿದ್ದರೂ ಗ್ರೂಪ್ ಫೊಟೋಕ್ಕೆ ಪೋಸ್ ಕೊಡಬೇಕು. ಇದು ಕೂಡಾ ಅವರಿಗೆ ಮಾಡುವ ಅತೀ ದೊಡ್ಡ ಉಪಾಚಾರ. ಅತಿಥಿಗಳು ಮನೆಗೆ ಬಂದು ಹೊರಟು ನಿಂತಾಗ ಹೀಗೊಂದು ಫೊಟೋ ತೆಗೆಸಿಕೊಳ್ಳದಿದ್ದರೆ ಮುಂದಿನ ದಿನಗಳಲ್ಲಿ ಅವರ ಉಪಾಚಾರದಲ್ಲಿ ಅದೇನೋ ಕುಂದುಂಟಾಗಿದೆ ಎಂದು ಅರ್ಥೈಸಿಕೊಳ್ಳಬಹುದೇನೋ!

(ಗಣೇಶ್ ಮಾವಂಜಿ ಹಿರಿಯ ಪತ್ರಕರ್ತರು ಅಂಕಣಕಾರರು)















