ಸುಳ್ಯ:ಸುಳ್ಯ ತಾಲೂಕು ಕೃಷಿ ಇಲಾಖೆಯ ವತಿಯಿಂದ 2025- 26 ನೇ ಸಾಲಿನ ರಾಜ್ಯ ವಲಯ ಕೀಟನಾಶಕ ನಿಯಂತ್ರಣ ಪ್ರಯೋಗ ಶಾಲೆ ಯೋಜನೆಯಲ್ಲಿ ಭತ್ತದ ಬೆಳೆಯಲ್ಲಿ ಬೀಜೋಪಚಾರ ಆಂದೋಲನ, ಸುರಕ್ಷಿತ ಕೀಟನಾಶಕಗಳ ಬಳಕೆ ಬಗ್ಗೆ ರೈತರಿಗೆ ತರಬೇತಿ ಕಾರ್ಯಕ್ರಮ, ವಿಕಸಿತ ಕೃಷಿ ಸಂಕಲ್ಪ ಅಭಿಯಾನ, ಹಾಗೂ ವಿಶ್ವ ಪರಿಸರ ದಿನಾಚರಣೆ ಕಾರ್ಯಕ್ರಮ ಸುಳ್ಯದ
ಎಪಿಎಂಸಿ ಸಭಾಂಗಣದಲ್ಲಿ ನಡೆಯಿತು.ಸುಳ್ಯ ನಗರ ಪಂಚಾಯತ್ ಅಧ್ಯಕ್ಷೆ ಶಶಿಕಲಾ ನೀರಬಿದಿರೆ ಕಾರ್ಯಕ್ರಮವನ್ನು ದೀಪ ಬೆಳಗಿಸಿ ಉದ್ಘಾಟಿಸಿದರು. ಸುಳ್ಯ ತಾಲೂಕು ಕೃಷಿಕ ಸಮಾಜದ ಅಧ್ಯಕ್ಷರಾದ ಕುಸುಮಾಧರ. ಎ.ಟಿ.ಅಧ್ಯಕ್ಷತೆ ವಹಿಸಿದ್ದರು. ದ.ಕ. ಜೇನು ವ್ಯವಸಾಯಗಾರರ ಸಹಕಾರಿ ಸಂಘದ ಅಧ್ಯಕ್ಷ ಹಾಗೂ ಕೃಷಿಕ ಸಮಾಜದ ಜಿಲ್ಲಾ ಉಪಾಧ್ಯಕ್ಷ, ಚಂದ್ರಾ ಕೋಲ್ಚಾರ್, ಸುಳ್ಯ ತಾಲೂಕು ರೈತ ಉತ್ಪಾದಕ ಕಂಪನಿಯ ಅಧ್ಯಕ್ಷ ವೀರಪ್ಪಗೌಡ ಕಣ್ಕಲ್, ಕೃಷಿ ಇಲಾಖೆಯ ಸಹಾಯಕ ನಿರ್ದೇಶಕ ಗುರುಪ್ರಸಾದ್, ದ.ಕ. ಕೃಷಿ ವಿಜ್ಞಾನ ಕೇಂದ್ರದ ವಿಜ್ಞಾನಿಗಳಾದ ಡಾ.ಹರೀಶ್ ಶೆಣೈ, ಡಾ.ರಶ್ಮಿ, ಗೇರು ಅಭಿವೃದ್ಧಿ ನಿರ್ದೇಶನಾಲಯದ ವಿಜ್ಞಾನಿ ಡಾ.ಭಾಗ್ಯ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಕೃಷಿ ಇಲಾಖೆ ಸಹಾಯಕ ನಿರ್ದೇಶಕ ಗುರುಪ್ರಸಾದ್ ಸ್ವಾಗತಿಸಿ ಪ್ರಸ್ತಾಪಿಕವಾಗಿ ಮಾತನಾಡಿದರು.

ಕೃಷಿ ತರಬೇತಿ: ಉದ್ಘಾಟನೆ ಬಳಿಕ ನಡೆದ ಕೃಷಿ ತರಬೇತಿ ಕಾರ್ಯಕ್ರಮದಲ್ಲಿ ಭತ್ತ ಕೃಷಿ ಕುರಿತು ದ.ಕ.ಕೃಷಿ ವಿಜ್ಞಾನ ಕೇಂದ್ರದ ಹಿರಿಯ ವಿಜ್ಞಾನಿ ಡಾ.ಹರೀಶ್ ಶಣೈ ಮಾಹಿತಿ ನೀಡಿದರು.ಭತ್ತದ ಬೀಜೋಪಾಚಾರದ ಕುರಿತು ಪ್ರಾತ್ಯಕ್ಷಿಕೆಯ ಮೂಲಕ ತರಬೇತಿ ನೀಡಿದ ಅವರು ಭತ್ತ ಕೃಷಿಗೆ ಕೀಟನಾಶಕ ಬಳಕೆಗಳ ಬಗ್ಗೆ ಮಾಹಿತಿ ನೀಡಿದರು.
ಅಡಿಕೆ ಹಾಗೂ ಇತರ ತೋಟಗಾರಿಕಾ ಬೆಳೆಗಳ ಕುರಿತು ದ.ಕ.ಕೃಷಿ ವಿಜ್ಞಾನ ಕೇಂದ್ರದ ವಿಜ್ಞಾನಿ ಡಾ.ರಶ್ಮಿ ತರಬೇತಿ ನೀಡಿದರು.ಅಡಿಕೆ ಕೃಷಿಯ ಮುನ್ನೆಚ್ಚರಿಕಾ ಕ್ರಮಗಳ ಬಗ್ಗೆ, ಸುರಕ್ಷಿತ ಕೀಟನಾಶಕಗಳ ಬಳಕೆಗಳ ಬಗ್ಗೆ ಮಾಹಿತಿ ನೀಡಿದ ಅವರು ಕೊಳೆ ರೋಗ ತಡೆಗಟ್ಟಲು ಬೋಡೋ ಮಿಶ್ರಿಣ ಬಳಕೆ, ಪೋಷಕಾಂಶಗಳ ಬಳಕೆ ಬಗ್ಗೆ ವಿವರ ನೀಡಿದರು. ಎಲೆಚುಕ್ಕಿ ರೋಗ ಬಾರದಂತೆ ತೋಟವನ್ನು ಸ್ವಚ್ಛವಾಗಿಡಬೇಕು. ಒಂದು ವೇಳೆ

ಎಲೆಚುಕ್ಕಿ ರೋಗ ನಿಯಂತ್ರಣಕ್ಕೆ ಬಾರದೇ ಇದ್ದರೆ ಪ್ರಾಪಿಕೋನಾಝೋಲ್
(Propiconazole) 1 ಮಿಲಿ ಪ್ರತಿ ಲೀಟರ್ ನೀರಿನಲ್ಲಿ ಬೆರೆಸಿ ಸಿಂಪರಣೆ ಮಾಡಬೇಕು ಹಾಗೂ 25 ದಿನಗಳ ನಂತರ ಪ್ರಾಪಿನೆಬ್ (propineb) 2 ಗ್ರಾಂ ಪ್ರತಿ ಲೀಟರ್ ನೀರಿನಲ್ಲಿ ಬೆರೆಸಿ ಸಿಂಪರಣೆ ಮಾಡಬೇಕು ಎಂದು ಮಾಹಿತಿ ನೀಡಿದರು.ವಿವಿಧ ತೋಟಗಾರಿಕಾ ಬೆಳೆಗಳ ಮುನ್ನೆಚ್ಚರಿಕೆ, ಪೋಷಕಾಂಶ ನೀಡುವಿಕೆ ಮತ್ತು ಸುರಕ್ಷಿತ ಕೀಟನಾಶಕ ಬಳಕೆಗಳ ಬಗ್ಗೆ ಮಾಹಿತಿ ನೀಡಿದರು.
ಗೇರು ಕೃಷಿಯ ಬಗ್ಗೆ ಪುತ್ತೂರು ಗೇರು ಸಂಶೋಧನಾ ನಿರ್ದೇಶನಾಲಯದ ವಿಜ್ಞಾನಿ ಡಾ.ಭಾಗ್ಯ ಅವರು ಮಾಹಿತಿ ನೀಡಿದರು. ಗೇರು ತಳಿ ಅಭಿವೃದ್ಧಿ, ಬೀಜೋಪಚಾರ, ಸಂಸ್ಕರಣೆ ಕುರಿತು ಅವರು ಮಾಹಿತಿ ನೀಡಿದರು. ಕೃಷಿಕರು ಒಂದೇ ಕೃಷಿ ಮಾಡುವ ಬದಲು ಮಿಶ್ರ ಬೆಳೆಗೆ ಆದ್ಯತೆ ನೀಡಬೇಕು ಎಂದು ಅವರು ಸಲಹೆ ನೀಡಿದರು.